ಶಿರಸಿ: ಕಳೆದ ಎರಡೂವರೆ ದಶಕಗಳಿಂದ ಮದ್ಯಪಾನದ ವಿರುದ್ಧ ನಿರಂತರ ಜಾಗೃತಿ ಮೂಡಿಸುತ್ತಿರುವ ಜನ ಜಾಗೃತಿ ವೇದಿಕೆ ಈ ಬಾರಿ ಮದ್ಯಪಾನಕ್ಕೆ ಬಲಿಯಾಗದಂತೆ, ಕಡ್ಡಾಯ ಮತದಾನಕ್ಕೆ ಕೂಡ ವಿಶಿಷ್ಟ ಜಾಗೃತಿ ಕಾರ್ಯ ಆರಂಭಿಸಿದೆ.
ತಾಲೂಕು, ಪ್ರಮುಖ ಗ್ರಾಮೀಣ ಭಾಗದಲ್ಲಿ ಜನ ಜಾಗೃತಿಯ ಬ್ಯಾನರ್, ಸ್ಟಿಕರ್, ಕರಪತ್ರ ಹಾಗೂ ಸ್ವಯಂ ಸೇವಕರ ಮೂಲಕ ಮನೆ ಮನೆಗೂ ಕಡ್ಡಾಯ ಮತದಾನ ಹಾಗೂ ಮತ ಮಾರಾಟಕ್ಕೆ, ಆಮಿಷಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ ಎಂಬ ಸಂದೇಶ ಹೊತ್ತ ಅಭಿಯಾನ ಮಾಡುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವದ ಉಳಿವಿಗೆ ತನ್ನದೇ ವ್ಯಾಪ್ತಿಯಲ್ಲಿ ಕಾರ್ಯ ಮಾಡುತ್ತಿದೆ.
ಏನಿದೆ ಸಂದೇಶ?: ಮತದಾರರಿಗೊಂದು ಮನವಿ, ಸಂದೇಶ ನೀಡುತ್ತಿರುವ ಅಖೀಲ ಕನಾಟಕ ಜನ ಜಾಗೃತಿ ವೇದಿಕೆ ರಾಜ್ಯದ ಮೂವತ್ತೂ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಘಟಕಗಳ ಮೂಲಕ ಕರಪತ್ರ ಮೂಲಕ ಜನ ಜಾಗೃತಿ ಮೂಡಿಸುತ್ತಿದೆ.
ಸಾರಾಯಿ ಹಣ ನೋಡಬೇಡಿ, ಮತ ಹಾಕೋದು ಮರೀಬೇಡಿ, ಪ್ರತಿ ರಾಜಕಾರಣಗಳೊಂದು ಮಾತು ನಮ್ಮ ಮತ ಮಾರಾಟಕ್ಕಿಲ್ಲ, ನಿಮ್ಮ ಒಂದು ಮತ ರಾಜ್ಯದ ದೇಶದ ಭವಿಷ್ಯ ಬದಲಾಯಿಸುತ್ತದೆ ಎಂಬ ಸಂದೇಶದ ಬ್ಯಾನರ್ ಪ್ರಕಟಿಸಿದೆ, ಕರ ಪತ್ರ ಹಂಚಿದೆ, ಹಂಚುತ್ತಿದೆ.
ಏನಿದು ವೇದಿಕೆ?: ಮತದಾನದ ಜಾಗೃತಿ ಮೂಡಿಸುತ್ತಿರುವ ಜನ ಜಾಗೃತಿ ವೇದಿಕೆ ಧರ್ಮಸ್ಥಳ ಡಾ| ವೀರೇಂದ್ರ ಹೆಗ್ಗಡೆ ಅವರ ಕನಸು. ಕಳೆದ 27 ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೆಲಸ ಮಾಡುತ್ತಿದೆ. 1997ರಿಂದ ಮದ್ಯಪಾನ ಮುಕ್ತಕ್ಕಾಗಿ ನಿರಂತರ ಕಾರ್ಯ ಮಾಡುತ್ತಿದೆ. 1400ಕ್ಕೂ ಅಧಿಕ ಮದ್ಯವರ್ಜನ ಶಿಬಿರ ನಡೆಸಿದೆ. ಸುಮಾರು 1.15 ಲಕ್ಷಕ್ಕೂ ಅಧಿಕ ಜನರು ಮದ್ಯವ್ಯಸನದಿಂದ ದೂರ ಹೋಗಿದ್ದಾರೆ.
ವಿಶೇಷ ಎಂದರೆ, ಒಂದೇ ಒಂದು ರೂ. ಹಣ ಪಡೆಯದೇ ಸ್ವಯಂ ಸೇವಕರಾಗಿ ಕಾರ್ಯ ಮಾಡುವವರ ಸಂಖ್ಯೆ ಏಳುವರೆ ಸಾವಿರ ದಾಟಿದೆ. ಇದು ತನ್ನೆಲ್ಲಾ ಘಟಕಗಳ ಮೂಲಕ ಈ ಅಭಿಯಾನ ನಡೆಸುತ್ತಿದೆ. ರಾಜ್ಯದ ಮೂವತ್ತೆರಡು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಈ ಸಂದೇಶ ತಲುಪಿಸುವುದು ಆಶಯವಾಗಿದೆ.
ಏನಿತ್ತು ಅಪಾಯ?: ಪ್ರತೀ ಚುನಾವಣೆಯಲ್ಲಿ ಒಂದು ಅಪಾಯ ಸಮಾಜದ ಮೇಲೆ ತಾಂಡವವಾಡುತ್ತದೆ. ಚುನಾವಣಾ ಆಯೋಗ ಎಷ್ಟೇ ಕಟ್ಟುಪಾಡು ಮಾಡಿದರೂ ಎಲ್ಲೋ ಒಳ ನುಸುಳುವ ಮದ್ಯದಿಂದ ಹೊಸ ಕುಡುಕರು ಸೃಷ್ಟಿಯಾಗುತ್ತಾರೆ. ಮದ್ಯವರ್ಜನ ಶಿಬಿರಕ್ಕೆ ಮದ್ಯ ಬಿಟ್ಟವರೂ ಮರಳಿ ಉಚಿತವಾಗಿ ಸಿಕ್ಕಿದೆ ಎಂದು ಮದ್ಯದ ದಾಸರಾಗಲು ಕಾರಣವಾಗುತ್ತಿದ್ದವು. ಹಣಕ್ಕೆ, ಹೆಂಡಕ್ಕೆ ಮತ ಮಾರಾಟ ಆದರೆ, ಪ್ರಜಾಪ್ರಭುತ್ವದ ಆಶಯವೇ ಬದಲಾವುಗುವ ಸಾಧ್ಯತೆ ಇದೆ. ಇದಕ್ಕಾಗಿ ಮತ ಚಲಾಯಿಸಿದರೆ ದೇಶದ ರಾಜಕೀಯ ಸ್ಥಿರತೆ ಕೂಡ ಬದಲಾಗುವ ಸಾಧ್ಯತೆ ಇದೆ.
ಮದ್ಯದಂಗಡಿ ಹೆಚ್ಚು ಹೆಚ್ಚು ಇಟ್ಟರೇ ಅಭಿವೃದ್ಧಿಯಲ್ಲ. ಮದ್ಯ ಪಾನ ಸಂಪೂರ್ಣ ನಿಷೇಧಿ ಸಬೇಕು, ಪ್ರಜಾಪ್ರಭುತ್ವದ ಉಳಿವಿಗೆ ನಾವೆಲ್ಲ ಬದ್ಧರಾಗಬೇಕು.
ವಿನ್ಸಂಟ್ ಪ್ಯಾಸ್, ಕಾರ್ಯದರ್ಶಿ ಅಖೀಲ ಕರ್ನಾಟಕದ ಜನ ಜಾಗೃತಿ ವೇದಿಕೆ
ಮದ್ಯಪಾನದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ವೇದಿಕೆಯ ಈ ಕಾರ್ಯ ಇನ್ನಷ್ಟು ಖುಷಿ ಕೊಟ್ಟಿದೆ. ಪ್ರಜಾ
ಪ್ರಭುತ್ವದ ಉಳಿವಿಗಾಗಿ ಒಂದು ನಡೆ.
ಆರ್.ಎ. ಅಡಿ, ನಾಗರಿಕ
ರಾಘವೇಂದ್ರ ಬೆಟ್ಟಕೊಪ್ಪ