Advertisement

ಹಿಂದುತ್ವ ಹೆಸರಿನಲ್ಲಿ ಮತ: ಜೆ.ಆರ್.ಲೋಬೊ ಚುನಾವಣಾ ತಕರಾರು ಅರ್ಜಿ ವಜಾ

07:03 PM Jul 13, 2023 | Team Udayavani |

ಮಂಗಳೂರು: 2018ರ ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆ ಸಂದರ್ಭ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇವಿಎಂ ದುರ್ಬಳಕೆ ಮಾಡಲಾಗಿದೆ ಹಾಗೂ ಬಿಜೆಪಿ ಅಭ್ಯರ್ಥಿಯ ಪತ್ನಿ ಧರ್ಮದ ಆಧಾರದಲ್ಲಿ ಹಿಂದುತ್ವ ಹೆಸರಿನಲ್ಲಿ ಮತ ಯಾಚಿಸಿದ್ದಾರೆ. ಆದ್ದರಿಂದ ವಿಜೇತ ಅಭ್ಯರ್ಥಿಯ ಆಯ್ಕೆಯನ್ನು ರದ್ದುಪಡಿಸಿ ಪರಾಜಿತ ಅಭ್ಯರ್ಥಿಯ ಆಯ್ಕೆ ಘೋಷಿಸುವಂತೆ ಕೋರಿದ ಚುನಾವಣಾ ತಕರಾರು ಅರ್ಜಿಯನ್ನು ರಾಜ್ಯ
ಹೈಕೋರ್ಟ್ ವಜಾ ಗೊಳಿಸಿದೆ.

Advertisement

ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜೆ.ಆರ್. ಲೋಬೊ ಅವರು ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ವಿರುದ್ಧ ಸೋಲನುಭವಿಸಿದ್ದರು. ಫಲಿತಾಂಶದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರು ತಮ್ಮ ವಕೀಲರಾದ ರವೀಂದ್ರನಾಥ್ ಕಾಮತ್ ಅವರ ಮೂಲಕ ರಾಜ್ಯ ಹೈಕೋರ್ಟಿಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಮಂಗಳೂರು ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಇವಿಎಂ ದುರ್ಬಳಕೆ ಮಾಡಲಾಗಿದೆ. ಅಲ್ಲದೆ ವೇದವ್ಯಾಸ್ ಕಾಮತ್ ಅವರ ಪತ್ನಿ ಹಿಂದುತ್ವ ಹೆಸರಿನಲ್ಲಿ ಮತ ಯಾಚನೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂಬ ಆರೋಪವನ್ನು ಅರ್ಜಿಯಲ್ಲಿ ಮಾಡಿದ್ದರು.

ಈ ಪ್ರಕರಣದಲ್ಲಿ ವೇದವ್ಯಾಸ್ ಕಾಮತ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಹಿಂದುತ್ವ ಎನ್ನುವುದು ಧರ್ಮ ಸೂಚಕವಲ್ಲ. ಅದು ಜೀವನಪದ್ಧತಿ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇವಿಎಂ ದುರ್ಬಳಕೆಯ ಪ್ರಶ್ನೆಯೇ ಇಲ್ಲ. ಇವಿಎಂ ದುರ್ಬಳಕೆ ಅಸಾಧ್ಯ ಎಂಬುದನ್ನು ಕೂಡ ಸುಪ್ರೀಂ ಕೋರ್ಟ್ ಹೇಳಿರುವ ಕುರಿತ ತೀರ್ಪನ್ನು ಉಲ್ಲೇಖಿಸಿ ಅವರು ವಾದ ಮಂಡಿಸಿದ್ದರು.

ಸುಮಾರು ಐದು ವರ್ಷ ಕಾಲ ಈ ಕುರಿತು ವಾದ-ವಿವಾದ ನಡೆಸಲಾಗಿದೆ. ಈ ಬಗ್ಗೆ ಇತ್ತಂಡ ವಾದ ವಿವಾದ ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ನ್ಯಾಯ ಪೀಠ ದ ನ್ಯಾಯಮೂರ್ತಿ ದೇವದಾಸ್ ಅವರು, ಅರ್ಜಿದಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಮನಗಂಡು 2023ರಲ್ಲಿ ಹೊಸ ಚುನಾವಣೆ ನಡೆದು ಮತ್ತೆ ಆಯ್ಕೆ ಆಗಿರುವುದರಿಂದ ಲೋಬೊ ಸಲ್ಲಿಸಿದ್ದ ಅರ್ಜಿ ನಿರರ್ಥಕ ಎಂದು ಜು.6ರಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next