Advertisement

ಮಾತಿನ ಮತ,ಸಂದರ್ಶನ :ಕೆ. ಜಯರಾಮ ಶೆಟ್ಟಿ ಮಾಜಿ ಶಾಸಕ, ಉಳ್ಳಾಲ ಕ್ಷೇತ್ರ

02:15 PM Mar 02, 2018 | |

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ನಿರೀಕ್ಷೆ ಈಡೇರಿದೆಯೇ ?
ಭಾರೀ ಅಂತರದಲ್ಲಿ ಮತ ಪಡೆದು ಶಾಸಕರಾಗಿ, ರಾಜ್ಯದ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಜನರಲ್ಲಿ ನಿರೀಕ್ಷೆ ಇತ್ತು ಆದರೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. 1997ರಲ್ಲಿ ನಾನು ಶಾಸಕನಾಗಿದ್ದಾಗ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆಗೆ ಪಟ್ಟ ಶ್ರಮದಿಂದ ಅಂದಿನ ನೀರಾವರಿ ಸಚಿವ ಜಯಪ್ರಕಾಶ ಹೆಗ್ಡೆ 500 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದರು. ಕಳೆದ 25 ವರ್ಷಗಳ ಬಳಿಕ ಕಾಮಗಾರಿ ನಡೆದರೂ ಪರಿಣಾಮಕಾರಿ ಪರಿಹಾರ ಸಿಕ್ಕಿಲ್ಲ. ಉಳ್ಳಾಲದಲ್ಲಿದ್ದ ಸಮಸ್ಯೆ ಸೋಮೇಶ್ವರ ಉಚ್ಚಿಲದವರೆಗೆ ಹಬ್ಬಿದೆ. ರೈತರ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಸಂಘಟಿತ ಕಾರ್ಮಿಕರ ಭರವಸೆಯನ್ನು ಈಡೇರಿಸಿಲ್ಲ.

Advertisement

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಏನೆನ್ನುವಿರಿ ?
ಕಾಂಕ್ರೀಟ್‌ ರಸ್ತೆ, ಕಟ್ಟಡ ನಿರ್ಮಾಣವಷ್ಟೇ ಅಭಿವೃದ್ಧಿಯಲ್ಲ. ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿತ್ತು. ಅದನ್ನು ಸಾಧಿಸುವಲ್ಲಿ ವಿಫಲವಾಗಿದ್ದಾರೆ. ನಾನು ಶಾಸಕನಾಗಿದ್ದಾಗ ತುಂಬೆಯಿಂದ ಕುಡಿಯುವ ನೀರು ತರಿಸುವ ಯೋಜನೆ ರೂಪಿಸಿದ್ದೆ, ಬಳಿಕ ಬಂದ ಶಾಸಕರು ಈ ಕಾರ್ಯದಲ್ಲಿ ಪ್ರಗತಿ ಸಾಧಿಸಿಲ್ಲ. ಹೆಚ್ಚಿನ ಯೋಜನೆಗಳೂ ಭರವಸೆಯಾಗಿಯೇ ಉಳಿದಿವೆ; ಕಾರ್ಯಗತವಾಗಿಲ್ಲ.

ಸಾಮರಸ್ಯಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು?
ಕ್ಷೇತ್ರದಲ್ಲಿ ಕೋಮು ಸಾಮರಸ್ಯಕ್ಕೆ ಹೆಚ್ಚಿನ ಮಹತ್ವ ಇದೆ. ಯು.ಟಿ. ಖಾದರ್‌ ಮತ್ತು ಅವರ ತಂದೆ ಯು.ಟಿ. ಫರೀದ್‌ ಅವರು ಎಲ್ಲ ಸಮುದಾಯಗಳ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು. ಆದರೆ ಖಾದರ್‌ ಅವಧಿಯಲ್ಲಿ ಕೋಮು ಸಾಮರಸ್ಯಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ. ಅವರಿಗೆ ಅದು ಬೇಕಾಗಿಲ್ಲ. ಸಾಮರಸ್ಯದ ಸಂಕೇತವಾಗಿ ಅಬ್ಬಕ್ಕ ಉತ್ಸವವನ್ನು ನನ್ನ ಅವಧಿಯಲ್ಲಿ ಆರಂಭಿಸಿದ್ದೆ. ಇತ್ತೀಚಿನ ದಿನಗಳಲ್ಲಿ ಅಬ್ಬಕ್ಕ ಉತ್ಸವ ಕಾಂಗ್ರೆಸ್‌ ಉತ್ಸವವಾಗಿ ಮಾರ್ಪಾಡಾಗುತ್ತಿದೆ.

ಜನಪ್ರತಿನಿಧಿಯಾದವರು ಹೇಗೆ ಇದ್ದರೆ ಉತ್ತಮ ?
ಜನಪ್ರತಿನಿಧಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಜನಸಾಮಾನ್ಯರ ನಡುವೆ ಹೋದರೆ ಅವರ ಸಮಸ್ಯೆಗಳನ್ನು ಅರಿತುಕೊಳ್ಳಬಹುದು.

ಈ ಬಾರಿಯ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ ?
ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಉತ್ತಮ ಅಭ್ಯರ್ಥಿ ಇರುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರ ಸಹಿತ ಎಲ್ಲ ಧರ್ಮಗಳ ಮತದಾರರರು ಬಿಜೆಪಿಯೊಂದಿಗೆ ಇದ್ದಾರೆ.

Advertisement

ನೀವು ಸ್ಪರ್ಧಾ ಆಕಾಂಕ್ಷಿಯೇ ?
ಯಾವುದೇ ನಾಯಕರನ್ನು ಸಂಪರ್ಕಿಸಿಲ್ಲ. ಸೀಟು ಕೊಟ್ಟರೆ ಸ್ಪರ್ಧೆಗೆ ಸಿದ್ಧ. ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಇಟ್ಟಕೊಂಡಿದ್ದೇನೆ.

„ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next