Advertisement

ಪ್ರಬುದ್ಧ ಭಾರತಕ್ಕಾಗಿ ತಪ್ಪದೇ ಮತ ಹಾಕಿ

12:36 PM Apr 17, 2019 | pallavi |

ಶಿರಹಟ್ಟಿ: ದೇಶದ ಮಹಾ ಉತ್ಸವವಾದ ಸಾರ್ವತ್ರಿಕಾ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಪ್ರಜಾಪ್ರಭುತ್ವದ ಯಶಸ್ವಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಹೇಳಿದರು.

Advertisement

ಸ್ಥಳೀಯ ಜ| ಫಕ್ಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಮಂಗಳವಾರ ನಡೆದ ತಾಲೂಕಿನ ಎಲ್ಲ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದತ್ತವಾಗಿ ಬಂದಿರುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಿ. ಅಲ್ಲದೆ ದೇಶದ ಭವಿಷ್ಯದ ಹಿತಕ್ಕಾಗಿ ಯೋಗ್ಯ ಪ್ರತಿನಿಧಿಗಳ ಆಯ್ಕೆ ನಿಮ್ಮ ಕೈಯಲ್ಲಿದೆ. ಮತದಾನ ನಮ್ಮ ಹಕ್ಕು, ನಮ್ಮ ಶಕ್ತಿ. ನಮ್ಮ ನಾಯಕರ ಆಯ್ಕೆ ಮಾಡಲು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕು. ಸುಭದ್ರ ಹಾಗೂ ಸದೃಢ ದೇಶ ನಿರ್ಮಾಣದಲ್ಲಿ ಚುನಾವಣೆಗಳು ಮಹತ್ವದ ಪಾತ್ರವಹಿಸುತ್ತಿವೆ. ಆದ್ದರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿಷ್ಪಕ್ಷಪಾತ ಹಾಗೂ ನಿಟ್ನೇತಿಯಿಂದ ಯಾವುದೆ ಆಸೆ, ಆಮಿಷೆಗಳಿಗೆ ಒಳಗಾಗದೇ ಉತ್ತಮ ನಾಯಕನಿಗೆ ಮತ ಚಲಾಯಿಸುವುದರ ಮೂಲಕ ಪ್ರಭುದ್ಧ ಭಾರತ ನಿರ್ಮಿಸಲು ಕೈಜೋಡಿಸಬೇಕು ಎಂದು ಹೇಳಿದರು.

ಮತದಾನಕ್ಕೆ ಸಕಲ ವ್ಯವಸ್ಥೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗದ ವತಿಯಿಂದ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಅಂಗವಿಕಲರಿಗೆ ವೀಲ್‌ ಚೇರ್‌ ಹಾಗೂ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ತಮ್ಮ ಮನೆಯಲ್ಲಿ ಯಾರಾದರು ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಇದ್ದರೆ ಚುನಾವಣಾ ಆ್ಯಪ್‌ ಮೂಲಕ ಎಸ್‌ಎಂಎಸ್‌ ಕಳುಹಿಸಿ ಅಥವಾ ಆನ್‌ ಲೈನ್‌ ಮುಖಾಂತರ ಬುಕ್‌ ಮಾಡಬಹುದು. ಇದು ಚುನಾವಣೆ ದಿನ ಮನೆಗೆ ಬಂದು ವಿಶೇಷ ವಾಹನದ ಮೂಲಕ ಮತಗಟ್ಟೆಗೆ ಕರೆದುಕೊಂಡು ಹೋಗಿ ಬರುತ್ತದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಇತರ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು ಎಂದರು. ಯೋಜನಾ ನಿರ್ದೇಶಕ ಟಿ. ದಿನೇಶ, ತಾಪಂ ಇಒ ಜಿ.ಎಂ. ಅನ್ನದಾನಸ್ವಾಮಿ, ಶಿಶು ಅಭಿವೃದ್ಧಿ ಅಧಿಕಾರಿ ಗೋಡಖೀಂಡಿ, ಚಂದ್ರಶೇಖರ ಯಲಿಗಾರ, ರಘುನಾಥ ಪಾಟೀಲ ಸೇರಿದಂತೆ ತಾಲೂಕಿನ ಎಲ್ಲ ಸ್ವ ಸಹಾಯ ಸಂಘದ ಸಾವಿರಾರು ಸದಸ್ಯರು ಇದ್ದರು.

ಅಕ್ರಮ ತಡೆಗೆ ಸಿ-ವಿಜಿಲ್‌ ಬಳಸಿ ಚುನಾವಣೆಗಳಲ್ಲಿ ಅಕ್ರಮವಾಗಿ ಹಣ-ಹೆಂಡ ಸೇರಿದಂತೆ ಇನ್ನಿತರ ಅಕ್ರಮ ವಸ್ತುಗಳನ್ನು ಹಂಚುತ್ತಿದ್ದರೆ ಸಾರ್ವಜನಿಕರು ಸಿ-ವಿಜಿಲ್‌ ಆ್ಯಪ್‌ ಮೂಲಕ ಚಿತ್ರಗಳನ್ನು ತೆಗೆದು ಅಪ್ಲೋಡ್‌ ಮಾಡಬೇಕು. ಇದರಿಂದ ಅಕ್ರಮ ಚಟುವಟಿಕೆಗಳನ್ನು ಕೂಡಲೇ ತಡೆಗಟ್ಟಬಹುದು. ಅಲ್ಲದೆ ಮಾಹಿತಿ ನೀಡಿದ ವ್ಯಕ್ತಿಯ ವಿವರವನ್ನು ಬಹಿರಂಗ ಪಡಿಸುವುದಿಲ್ಲ. ದೂರು ನೀಡಿದವರಿಗೆ 100 ನಿಮಿಷಗಳಲ್ಲಿ ಕ್ರಮದ ಬಗ್ಗೆ ಉತ್ತರ ನೀಡಲಾಗುತ್ತದೆ ಎಂದು ಮಂಜುನಾಥ ಚವ್ಹಾಣ ಹೇಳಿದರು.

Advertisement

ಮತದಾನ ಜಾಗೃತಿಗೆ ಮೇಣದಬತ್ತಿ ಜಾಥಾ 
ಲಕ್ಷ್ಮೇಶ್ವರ: ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರೂ ಯಾವುದೇ ಆಸೆ-ಆಮಿಷಗಳಿಗೊಳಗಾಗದೆ ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಂಬಾಸಿಡರ್‌ ಮತ್ತು ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ ಹೇಳಿದರು.

ಮತದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ, ಜಿಲ್ಲಾಡಳಿತ, ತಾಲೂಕಾಡಳಿ ಮತ್ತು ಸ್ಥಳೀಯ ಪುರಸಭೆ ಸಹಯೋಗದಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೇಣದಬತ್ತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮತದಾನ ಪವಿತ್ರ ಕಾರ್ಯವಾಗಿದ್ದು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತ ಮತ ಚಲಾಯಿಸಬೇಕು. ಇದರಿಂದ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಸಾಧ್ಯವಿದ್ದು, ಅದಕ್ಕಾಗಿ ಮತದಾನದ ಪ್ರಮಾಣ ಶೇ. 100ರಷ್ಟಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಜಾಗೃತಿ ಜಾಥಾವು ಮತದಾನದ ಮಹತ್ವ ಸಾರುವ ಘೋಷಣೆಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ, ತಾಪಂ ಇಒ ಅನ್ನದಾನಸ್ವಾಮಿ, ಸಿಡಿಪಿಒ ಅವಿನಾಶ ಘೋಡಖೀಂಡಿ, ಮುಖ್ಯಾಧಿಕಾರಿ ಎಂ.ಎ. ರಾಜಾಪುರ, ಪುರಸಭೆ ಸಿಬ್ಬಂದಿ ಎಂ.ಎಸ್‌. ಬೆಂತೂರ, ಮಾವಿನಕಾಯಿ, ಆನಂದ ಬದಿ, ಎನ್‌.ಎಂ. ಹಾದಿಮನಿ, ಮಂಜುನಾಥ ಮುದಗಲ್‌, ಬಸವಣ್ಣೆಪ್ಪ ನಂದೆಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next