Advertisement

ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ತಪ್ಪದೇ ಮತ ಹಾಕಿ

09:52 PM Apr 07, 2019 | Lakshmi GovindaRaju |

ಕೋಲಾರ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಲು 18 ವರ್ಷ ತುಂಬಿದ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರರು ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂದು ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ್ದ ಮತದಾನದ ಮಹತ್ವ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏ.18ರಂದು ಬೆಳಗ್ಗೆ 7 ರಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ. ಅಂದು ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹೆಚ್ಚಿನ ಮತದಾನಕ್ಕೆ ಶ್ರಮಿಸಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.74 ಮತದಾನ ಆಗಿತ್ತು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.82 ಮತದಾನ ನಡೆದಿತ್ತು. ಈ ಬಾರಿ ಇನ್ನೂ ಹೆಚ್ಚಿನ ಮತದಾನ ಮಾಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾರ್ತಾ ಇಲಾಖೆಯು ಅಯೋಜಿಸಿರುವ ಈ ವಸ್ತು ಪ್ರದರ್ಶನದಲ್ಲೂ ಮತದಾನದ ಮಹತ್ವವನ್ನು ಸಾರುವ ವಿವಿಧ ಚಿತ್ರಣಗಳನ್ನು ಪ್ರದರ್ಶಿಸಿ ಮತದಾನ ಬಗ್ಗೆ 3 ದಿನಗಳ ಕಾಲ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್‌ ಸಮಿತಿಯಿಂದ ಶಾಲಾ ಕಾಲೇಜುಗಳಲ್ಲಿ, ಜನಸಂದಣಿ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ನೈತಿಕ ಹಾಗೂ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 72 ವಿದ್ಯುನ್ಮಾನ ಮತಯಂತ್ರಗಳಿಂದ ಜಿಲ್ಲಾದ್ಯಂತ ಮತದಾನ ಮಾಡುವ ವಿಧಾನ ಬಗ್ಗೆ 9 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ವೀಕ್ಷಕರಾದ ವಿಕಾಸ್‌ ಗಾರ್ಗ್‌ (ಭಾ.ಆ.ಸೇ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಲ್ಲವಿ ಹೊನ್ನಾಪುರ, ಸ್ವೀಪ್‌ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸೌಮ್ಯಾ, ಚುನಾವಣಾ ವೀಕ್ಷಕರ ಉಸ್ತುವಾರಿ ಅಧಿಕಾರಿ ರವಿಚಂದ್ರ, ತಾಪಂ ಇಒ ಡಾ.ನಾರಾಯಣಸ್ವಾಮಿ, ಜಿಪಂ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ ಉಪಸ್ಥಿತರಿದ್ದರು.

Advertisement

ಮತದಾನ ಮಹತ್ವ ಸಾರುತ್ತಿದೆ ಪ್ರದರ್ಶನ: ವಸ್ತು ಪ್ರದರ್ಶನ ಜನರನ್ನು ಸುಸಜ್ಜಿತವಾಗಿ ಆಯೋಜಿಸಲಾಗಿದೆ. ಚುನಾವಣಾ ಆ್ಯಪ್‌, ಸಿ.ವಿಜಿಲ್‌ ಆ್ಯಪ್‌ ಕುರಿತು ಮಾಹಿತಿ ನೀಡಲಾಗಿದೆ. ಚುನಾವಣಾ ಆ್ಯಪ್‌ನಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳು, ಸೌಲಭ್ಯಗಳು, ಅಧಿಕಾರಿಗಳ ಮಾಹಿತಿ, ಚುನಾವಣಾ ವೇಳಾಪಟ್ಟಿ, ಅಭ್ಯರ್ಥಿಗಳ ಮಾಹಿತಿ, ಮತದಾನ ಕೇಂದ್ರಗಳ ವಿವರವನ್ನು ಪಡೆದುಕೊಳ್ಳಬಹುದಾಗಿದೆ.

ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು ಇಡಲು ಚುನಾವಣಾ ಆಯೋಗವು ಸಿ.ವಿಜಿಲ್‌ ಆ್ಯಪ್‌ ಅನ್ನು ಪರಿಚಯಿಸಿದೆ. ಸಾರ್ವಜನಿಕರು ಸಿ.ವಿಜಿಲ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಚುನಾವಣೆಯಲ್ಲಿ ಅಕ್ರಮಗಳು ಕಂಡು ಬಂದರೆ ಸಾಕ್ಷಿ ಸಮೇತ ದೂರು ಸಲ್ಲಿಸಬಹುದಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಪ್ರದರ್ಶನದಲ್ಲಿ ನನ್ನ ಮತ ಮಾರಾಟಕ್ಕಿಲ್ಲ, ಹಣ, ಮದ್ಯ ಹಾಗೂ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದಿರಿ ಎಂದು ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಲಾಗಿದೆ.

ಮತದಾನದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ನಾವು ನೆರವಾಗುತ್ತೇವೆ ಎಂದು ಅರಿವು ಮೂಡಿಸಲಾಗಿದೆ. ಓದು ವ್ಯಕ್ತಿತ್ವವನ್ನು ರೂಪಿಸಿದರೆ ಮತದಾನ ದೇಶವನ್ನು ರೂಪಿಸುತ್ತದೆ ಎಂಬ ಮತದಾನ ಮಹತ್ವವನ್ನು ಸಾರುವ ಚಿತ್ರಣವನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಹೀಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಣಗಳನ್ನು ವಸ್ತು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ವಸ್ತು ಪ್ರದರ್ಶನವು ಏ.8 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next