Advertisement

ಬಿಎಸ್ಪಿಗೆ ಮತ ನೀಡಿ ಮಾಯಾವತಿ ಕೈ ಬಲಪಡಿಸಿ

09:53 PM Apr 07, 2019 | Team Udayavani |

ಕೊಳ್ಳೇಗಾಲ: ತಾಲೂಕಿನ ಕುರುಬನಕಟ್ಟೆ ಲಿಂಗಯ್ಯ, ಚೆನ್ನಯ್ಯ ಗದ್ದುಗೆಯ ದೇವಾಲಯದಲ್ಲಿ ಶಾಸಕ ಎನ್‌.ಮಹೇಶ್‌ ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

Advertisement

ಚಾಲನೆ ಬಳಿಕ ಭಾನುವಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಳೆಯ ನೋಟುಗಳನ್ನು ಅಮಾನ್ಯ ಮಾಡಿದರು. ನಂತರ ಜಿಎಸ್‌ಟಿ ಜಾರಿಗೆ ತಂದು ಅಸಂಘಟಿತ ಕಾರ್ಮಿಕರು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪೊಳ್ಳು ಭರವಸೆ ನೀಡುವ ಮೋದಿ: ಮೋದಿಯವರು ಜಿಎಸ್‌ಟಿ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಜಿಎಸ್‌ಟಿ ಜಾರಿಯಿಂದ ಬಡವರಿಗೆ ಅಪಾರ ಅನ್ಯಾಯವಾಗಿದೆ. ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಬೇಸತ್ತಿರುವ ಜನರು ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾರೆ ಎಂಬುದನ್ನು ಮನಗಂಡಿರುವ ಅವರು ಅದ್ಯಾವುದರ ಬಗ್ಗೆ ಚಕಾರವೆತ್ತದೆ ಕೇವಲ ಸರ್ಜಿಕಲ್‌ ಸ್ಟ್ರೈಕ್‌ ನೆಪಮಾಡಿಕೊಂಡು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದರು.

ಸುಳ್ಳು ಭರವಸೆಗೆ ಕಿವಿಗೊಡಬೇಡಿ: ಕಾಂಗ್ರೆಸ್‌ ಮತ್ತು ಬಿಜೆಪಿ ತನ್ನ ಪ್ರಾಣಾಳಿಕೆ ಬಿಡುಗಡೆ ಮಾಡುತ್ತದೆ. ಆದರೆ ನೀಡಿದ ಪ್ರಾಣಾಳಿಕೆಯ ಪ್ರಕಾರ ಆಳ್ವಿಕೆ ನಡೆಸದೆ ಕೇವಲ ಆಶ್ವಾಸನೆ ನೀಡುತ್ತಾರೆ, ಹೊರತು ಅವುಗಳನ್ನು ಈಡೇರಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೊರದೇಶದಲ್ಲಿರುವ ಭಾರತೀಯ ಕಪ್ಪು ಹಣವನ್ನು ತಂದು ಎಲ್ಲಾ ಭಾರತೀಯ ಖಾತೆಗಳಿಗೆ 15 ಲಕ್ಷ ನೀಡುತ್ತೇನೆಂದು ಪ್ರಾಣಾಳಿಕೆ ಪ್ರಕಟಣೆ ಮಾಡಿದರು.

ಆದರೆ ಯಾರ ಖಾತೆಗೂ ಹಣ ಬರಲಿಲ್ಲ. ಈ ರೀತಿ ಹೊಗಳಿಗೆ ಜನತೆ ಕಿವಿಗೊಡಬಾರದು ಎಂದು ತಿಳಿಸಿದರು. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಎಲ್ಲೆಡೆ ಬಿಎಸ್ಪಿ ಅಭ್ಯರ್ಥಿಗಳು ಸಕ್ರಿಯವಾಗಿ ತೊಡಗಿ ಮತದಾರರಿಂದ ಮತಬೇಟೆ ಮಾಡುತ್ತಿದ್ದು, ಈ ಬಾರಿ ಕೇಂದ್ರದಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯವತಿ ಪ್ರಧಾನಿ ಆಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

Advertisement

ಬಡವರ ರಕ್ಷಣೆ: ಇತರ ಪಕ್ಷದವರು ಪ್ರಾಣಾಳಿಕೆಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ಮಾಯವತಿ ಪ್ರಾಣಾಳಿಕೆಯನ್ನು ಬಿಡುಗಡೆ ಮಾಡುವುದಿಲ್ಲ. ಅವರಿಗೆ ಸಂವಿಧಾನವೇ ಪ್ರಾಣಾಳಿಕೆಯಾಗಿದ್ದು, ಎಲ್ಲಾ ಬಡವರ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದ್ದು, ಅದನ್ನು ಮಾಯವತಿ ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶದಲ್ಲಿ ತೋರಿಸಿದ್ದಾರೆ. ಅದೇ ರೀತಿ ಪ್ರಧಾನಿಯಾಗಿ ಭಾರತೀಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಡಳಿತ ನಡೆಸಲು ಅವರಿಂದ ಸಾಧ್ಯ ಎಂದರು.

ಏ.10ರಂದು ಮಾಯವತಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಸ್ಪಿ ಸಮಾವೇಶ ನಡೆಸಲಿದ್ದು, ಸಮಾವೇಶಕ್ಕೆ ಲಕ್ಷಾಂತರ ಜನರು ಭಾಗವಹಿಸಲಿದ್ದು, ಅವರ ಸಮಾವೇಶದ ಬಳಿಕ ಮತ್ತಷ್ಟು ಅಲೆ ಬಿಸಲಿದ್ದು, ರಾಜ್ಯದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಜಯ ಗಳಿಸಿ ಮಾಯವತಿ ಕೈ ಬೆಂಬಲ ಮಾಡಲಿದೆ ಎಂದು ತಿಳಿಸಿದರು.

ಪ್ರಚಾರ ಸಮಿತಿ ನೇಮಕ: ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ಕ್ಷೇತ್ರ ವ್ಯಾಪಿ ಪ್ರಚಾರ ಮಾಡಲಾಗಿದೆ. ಮೂರು ಹಂತದಲ್ಲಿ ಪ್ರಚಾರ ಸಮಿತಿ ನೇಮಕ ಮಾಡಲಾಗಿದ್ದು, ಸಮಿತಿಗಳು ಪ್ರಚಾರದಲ್ಲಿ ತೊಡಗಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಅದೇ ರೀತಿ ಗ್ರಾಮಾಂತರ ಪ್ರದೇಶಗಳಲ್ಲೂ ಪ್ರಚಾರ ಕೈಗೊಂಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಡಾ.ಶಿವಕುಮಾರ್‌ ಆನೆಯ ಗುರುತಿನಿಂದ ಜಯಗಳಿಸಲಿದ್ದಾರೆ ಎಂದರು.

ಆನೆ ಗುರುತಿಗೆ ಮತ ನೀಡಿ: ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್‌ನ ವಿರೋಧ ಆಲೆ ಇದೆ. ಮತ್ತು ಬಿಜೆಪಿ ಸುಳ್ಳು ಭರವಸೆ ಜನರು ಕಂಡಿದ್ದಾರೆ. ಏ.18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಗೆ ಮತ ನೀಡಿ, ಮಾಯವತಿರನ್ನು ಪ್ರಧಾನಿಯನ್ನನಾಗಿ ಮಾಡಲು ನಿರ್ಣಯಿಸಿದ್ದಾರೆ. ಈ ಬಾರಿ ಬಿಎಸ್ಪಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಲಿದೆ ಎಂದು ತಿಳಿಸಿದರು.

ಕ್ಷೇತ್ರ ಉಸ್ತುವಾರಿ ಸಿದ್ದರಾಜು, ಜಿಲ್ಲಾ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಬಿಎಸ್ಪಿ ಟೌನ್‌ ಅಧ್ಯಕ್ಷ ಜಕಾವುಲ್ಲಾ, ನಗರಸಭಾ ಸದಸ್ಯ ರಾಮಕೃಷ್ಣ, ಮಾಜಿ ಸದಸ್ಯ ರಂಗಸ್ವಾಮಿ, ಮುಖಂಡರಾದ ರಾಜಶೇಖರಮೂರ್ತಿ, ವೀರಮಾಧು, ಪುಟ್ಟಣ್ಣ, ಸೆಲ್ವರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next