ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು ಮತಗಳು ಚಲಾವಣೆ ಆಗಿವೆ; ಯಾವುದೇ ಗುಂಡಿ ಅದುಮಿದರೂ ಬಿಜೆಪಿಗೆ ಮತ ಚಲಾವಣೆ ಆಗಿರುವ ಆರೋಪಗಳು ಕೇಳಿಬಂದಿವೆ. ಈ ಕುರಿತು ಚುನಾವಣ ಆಯೋಗಕ್ಕೆ ದೂರು ನೀಡುವುದಾಗಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ತಿಳಿಸಿದೆ. ಆದರೆ ಇದು ಸುಳ್ಳು ಆರೋಪ ಎಂದು ಸುಪ್ರೀಂ ಕೋರ್ಟ್‌ಗೆ ಚುನಾವಣ ಆಯೋಗ ತಿಳಿಸಿದೆ.
ಅಣಕು ಮತದಾನದ ವೇಳೆ ಎಲ್ಲ 190 ಇವಿಎಂಗಳಲ್ಲಿ ಪ್ರತೀ 10 ಆಯ್ಕೆಗಳನ್ನು ಒತ್ತುತ್ತ ಪರೀಕ್ಷಿಸಲಾಗುತ್ತಿತ್ತು.
ಬಿಜೆಪಿಯ ಕಮಲದ ಚಿಹ್ನೆಯು 10 ಆಯ್ಕೆಗಳ ಪೈಕಿ 1ನೇ ಆಯ್ಕೆಯಾಗಿತ್ತು. ಸುಮಾರು 4 ಇವಿಎಂಗಳಲ್ಲಿ 10 ಆಯ್ಕೆಗಳನ್ನು ಪ್ರತೀ ಬಾರಿ ಒತ್ತಿದಾಗಲೂ ವಿವಿಪ್ಯಾಟ್‌ನಲ್ಲಿ (ಮತ ದೃಢೀಕರಣ ಯಂತ್ರ) ಬಿಜೆಪಿಗೆ 2 ಮತಗಳು ಬರುತ್ತಿದ್ದವು. ಕಮಲದ ಚಿಹ್ನೆ ಒತ್ತದೆ ಬೇರೆ ಚಿಹ್ನೆಗಳನ್ನು ಒತ್ತಿದಾಗಲೂ ಈ ಯಂತ್ರಗಳಲ್ಲಿ ಮತಗಳು ಬಿಜೆಪಿಗೇ ಹೋಗುತ್ತಿದ್ದವು ಎಂದು ಯುಡಿಎಫ್ ಮತ್ತು ಎಲ್‌ಡಿಎಫ್ ಅಭ್ಯರ್ಥಿಗಳ ಏಜೆಂಟ್‌ಗಳು ಆರೋಪಿಸಿದ್ದಾರೆ. ಅಣಕು ಮತದಾನದ ವೇಳೆ ಬಳಸಲಾದ ಇವಿಎಂಗಳ ಪೈಕಿ 4ರಲ್ಲಿ ಬಿಜೆಪಿಗೆ ಹೆಚ್ಚುವರಿ ಮತ ಚಲಾವಣೆಯಾಗಿವೆ. ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಿಪಿಎಂ ನಾಯಕ ಕೆ.ಪಿ. ಸತೀಶಚಂದ್ರನ್ ತಿಳಿಸಿದ್ದಾರೆ.
ಸುಳ್ಳು ಆರೋಪ: ಆಯೋಗ
ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಇವಿಎಂ-ವಿವಿಪ್ಯಾಟ್ ಸಂಪೂರ್ಣ ತಾಳೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ಕಾಸರಗೋಡಿನಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ವರದಿ ನೀಡುವಂತೆ ಚುನಾವಣ ಆಯೋಗಕ್ಕೆ ಕೋರ್ಟ್ ಸೂಚಿಸಿತು. ಸ್ಪಷ್ಟನೆ ನೀಡಿದ ಆಯೋಗವು, ಈ ಆರೋಪ ಸುಳ್ಳು. ಈ ಪ್ರಕರಣವು ಸುಳ್ಳು ಮಾಹಿತಿಯಿಂದ ಕೂಡಿದೆ. ಜಿಲ್ಲಾ ಚುನಾವಣಾಧಿಕಾರಿ ಜತೆ ಚರ್ಚಿಸಲಾಗಿದ್ದು, ಈ ಕುರಿತು ವಿವರ ವರದಿಯನ್ನು ನ್ಯಾಯಾ ಲಯಕ್ಕೆ ಸಲ್ಲಿಸಲಾಗುವುದು ಎಂದಿತು.