ಕಾಸರಗೋಡು: ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲ. ಬದಲಾಗಿ ಕೋಮುವಾದದ ವಿರುದ್ಧ ಹೋರಾಡುತ್ತೇನೆ. ಚುನಾವಣೆಗಳಲ್ಲಿ ಪಕ್ಷವನ್ನು ನೋಡದೆ ನಿಷ್ಕಳಂಕ ಅಭ್ಯರ್ಥಿಗಳಿಗೆ ಮತ ಹಾಕಿ ಚುನಾಯಿಸಬೇಕೆಂದು ಚಿತ್ರ ನಟ ಪ್ರಕಾಶ್ ರೈ ಹೇಳಿದ್ದಾರೆ. ಕಾಸರಗೋಡಿನ ಪ್ರಸ್‌ಕ್ಲಬ್‌ನಲ್ಲಿ ಗುರುವಾರ ಬೆಳಗ್ಗೆ ಆಯೋಜಿಸಿದ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬೆಂಬಲಿಸಬಾರದು. ಅದು ಕೋಮುವಾದಿ ಪಕ್ಷ. ಚುನಾವಣೆಯಲ್ಲೂ ಅಷ್ಟೆ. ಆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದ ಅವರು ಚುನಾವಣೆಯ ಬಳಿಕ ಬಿಜೆಪಿ ಜತೆ ಯಾವುದೇ ಹೊಂದಾಣಿಕೆಯನ್ನು ಮಾಡಿಕೊಳ್ಳಬಾರದು ಎಂದರು.
ಸಿಪಿಎಂ ಪಕ್ಷ ಒಂದೆಡೆ ಕೃಷಿಕರನ್ನು ಓಲೈಸುತ್ತಾ ಇನ್ನೊಂದೆಡೆ ಕೃಷಿಕರ ಬಗ್ಗೆ ಅಸಹನೆ ತೋರುತ್ತಿದೆ ಎಂದ ಅವರು ನನಗೆ ಪಕ್ಷ ಮುಖ್ಯ ಅಲ್ಲ. ನಿಷ್ಕಳಂಕ ಹಾಗೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರತಿನಿಧಿಗಳು ಬೇಕು ಎಂದರು.
ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ಯಾವ ಪಕ್ಷದ ಮೇಲೂ ನನಗೆ ನಂಬಿಕೆ ಇಲ್ಲ. ಹೀಗಾಗಿ ನಾನು ರಾಜಕೀಯಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಆದರೆ ಆಳುವ ಪಕ್ಷವನ್ನು ಪ್ರಶ್ನಿಸುವ ನೆಲೆಯಲ್ಲಿ ನನ್ನ ಹೋರಾಟ ಮುಂದುವರಿಯಲಿದೆ ಎಂದರು.
ಭ್ರಷ್ಟಾಚಾರಕ್ಕಿಂತ ಕೋಮುವಾದ ಅಪಾಯಕಾರಿ. ಕೋಮುವಾದ ಕ್ಯಾನ್ಸರ್‌ನಂತೆ ದೇಶವನ್ನು ನಾಶದಂಚಿಗೆ ಕೊಂಡೊಯ್ಯುತ್ತದೆ. ಮೊದಲು ಕೋಮುವಾದ ಎಂಬ ಕ್ಯಾನ್ಸರನ್ನು ತಡೆಗಟ್ಟಬೇಕು. ಆ ಬಳಿಕ ಭ್ರಷ್ಟಾಚಾರ ಮೊದಲಾದವು ಎರಡನೇ ಸಾಲಿನಲ್ಲಿ ನಿಲ್ಲುತ್ತವೆ ಎಂದರು. ಪ್ರಸ್ ಕ್ಲಬ್ ಅಧ್ಯಕ್ಷ ಶಾಫಿ, ಕೋಶಾಧಿಕಾರಿ ಪದ್ಮೇಶ್ ಉಪಸ್ಥಿತರಿದ್ದರು.
ಚಿತ್ರ : ಶ್ರೀಕಾಂತ್ ಕಾಸರಗೋಡು