ದೇವದುರ್ಗ: ಚುನಾವಣೆಮ ಪ್ರಣಾಳಿಕೆಯಲ್ಲಿ ಮತದಾರರಿಗೆ ನೀಡಿದಂತೆ ಕ್ಷೇತ್ರದ ಅಭಿವೃದ್ಧಿಕಾರ್ಯಕ್ರಮ ಶೇ.75 ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಜಿ ಸಿಎಂಬಿ.ಎಸ್ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಇಂಜಿನಿಯರಿಂಗ್ ಕಾಲೇಜ್ ಮಂಜೂರು ಮಾಡಿ 58 ಕೋಟಿ ರೂ. ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಕ್ಷ ಆಡಳಿತಗಾರರಾಗಿದ್ದು, ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಿರವಾರ- ದೇವದುರ್ಗ ರಸ್ತೆ ನಿರ್ಮಾಣಕ್ಕೆ 78 ಕೋಟಿ ರೂ. ಅನುದಾನ ನೀಡಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಜರುಗಲಿದೆ ಎಂದರು.
ಇದನ್ನೂ ಓದಿ:ಹಾಲುಮತ ಬಹುರೂಪಿ ಸಮಾಜವಾಗಲಿ
ನಾರಾಯಣಪುರ ಬಲದಂಡೆ ಕಾಲುವೆಗಳ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನೀರಾವರಿ ವಂಚಿತ ಹಳ್ಳಿಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ. ಕೃಷ್ಣಾನದಿ ಮೂಲಕ ಕೆರೆಗಳು ತುಂಬಿಸುವ ಏತ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 450 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಪಟ್ಟಣದಲ್ಲಿ ಹೊಸದಾಗಿ ಕುಡಿವ ನೀರಿನ ಪೈಪ್ ಲೈನ್ ಅಳವಡಿಸಲು 120 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ಹಂತದಲ್ಲಿದೆ. ಪುರಸಭೆ ವ್ಯಾಪ್ತಿಯ ತಾಂಡಾ, ದೊಡ್ಡಿಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು 5 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆಂಚಣ್ಣ ತಾತ, ಪ್ರಕಾಶ ಪಾಟೀಲ್ ಜೇರಬಂಡಿ, ಸಾಯಿ ಬಾಬ ಗಬ್ಬೂರು, ಸಿಂಡಿಕೇಟ್ ಸದಸ್ಯ ನಾಗರಾಜ ಅಕ್ಕರಕಿ, ಪುರಸಭೆ ಸದಸ್ಯ ಭೀಮನಗೌಡ ಮೇಟಿ, ಗ್ರಾಪಂ ಸದಸ್ಯ ಶಿವನಗೌಡ ಹೂವಿನ ಹೆಡಗಿ, ಶಿಖರೇಶಪ್ಪ ಪಾಟೀಲ್ ಜೋಳದ ಹೆಡಗಿ, ಮಲ್ಲಿಕಾರ್ಜುನ ಹಿರೇಬೂದುರು, ಜಹೀರ ಪಾಷ ಇಡಪನೂರು, ಶಿವಕುಮಾರ ಅಕ್ಕರಕಿ, ಡಾ| ಬಸವರಾಜರಡ್ಡಿ, ತಹಶೀಲ್ದಾರ್ ಶ್ರೀನಿವಾಸ ಚಾಪಲ್, ವೈದ್ಯರಾದ ಡಾ| ಬನದೇಶ್ವರ, ಹುಲಿಮನಿಗೌಡ ಇದ್ದರು