Advertisement

ಲೋಕಸಭೆ ಮತ ಎಣಿಕೆಗೆ ದಿನಗಣನೆ : ಅಧಿಕಾರಿ-ಸಿಬಂದಿಗೆ ತರಬೇತಿ

11:43 AM May 17, 2019 | keerthan |

ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆದು ಸುಮಾರು ಒಂದು ತಿಂಗಳು ಕಳೆದಿದೆ. ಮತ ಎಣಿಕೆಗೆ ವಾರವಷ್ಟೇ ಬಾಕಿ ಉಳಿದಿದ್ದು, ಸಿದ್ಧತೆ ಆರಂಭವಾಗಿದೆ.

Advertisement

ಸುರತ್ಕಲ್‌ನ ಎನ್‌ಐಟಿಕೆ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಉಡುಪಿ ನಗರದ ಬ್ರಹ್ಮಗಿರಿ ಬಳಿಯ ಸೈಂಟ್‌ ಸಿಸಿಲೀಸ್‌ ಶಿಕ್ಷಣ ಸಂಸ್ಥೆ ಮತ ಎಣಿಕೆ ಕೇಂದ್ರ. ಮತ ಎಣಿಕೆ ಕುರಿತು ತರಬೇತಿ ನಡೆದಿದೆ. ರಾಜ್ಯ ಮಟ್ಟದ ತರಬೇತುದಾರರು ಆಗಮಿಸಿ ತರಬೇತಿ ನೀಡಿದ್ದಾರೆ. ಈ ಬಾರಿ ಹೆಚ್ಚುವರಿ ವಿವಿಪ್ಯಾಟ್‌-ಇವಿಎಂ ಮತ ತಾಳೆ ನೋಡ ಬೇಕಾಗಿರುವುದರಿಂದ ತರಬೇತಿಯಲ್ಲಿ ಆ ಬಗ್ಗೆ ಗಮನ ಹರಿಸಲಾಗಿದೆ.

ವಿಜಯಲಕ್ಷ್ಮೀ ಯಾರಿಗೆ ಒಲಿಯಬಹುದು ಎನ್ನುವ ಲೆಕ್ಕಾಚಾರವೂ ಆರಂಭವಾಗಿದೆ. ಇದೇ ಮೊದಲ ಬಾರಿಗೆ ದ.ಕ. ಕ್ಷೇತ್ರದ ಮತ ಎಣಿಕೆ ನಗರದ ಹೊರ ವಲಯದಲ್ಲಿರುವ ಸುರತ್ಕಲ್‌ ಎನ್‌ಐಟಿಕೆ ಆವರಣದಲ್ಲಿ ನಡೆಯಲಿದೆ. ಈ ಹಿಂದೆ 2009ರ ಮತ ಎಣಿಕೆ ನಗರದ ಕೆನರಾ ಕಾಲೇಜು ಆವರಣದಲ್ಲಿ ನಡೆದಿತ್ತು. ಆಗ ಸಂಚಾರ ದಟ್ಟಣೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಿಂದ ಅನಂತರದ (2014) ಮತ ಎಣಿಕೆ ಬೋಂದೆಲ್‌ ಮಹಾತ್ಮಾ ಗಾಂಧಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಸ್ಥಳಾಂತರವಾಗಿತ್ತು.

ಉಡುಪಿ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿರುವ ಸ್ಟ್ರಾಂಗ್‌ ರೂಮ್‌ಗೆ ಸಿಆರ್‌ಪಿಎಫ್, ಸ್ಥಳೀಯ ಪೊಲೀಸರ ಭದ್ರತೆ ಒದಗಿಸಲಾಗಿದೆ. ಪ್ರತಿನಿತ್ಯ ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಕುರಿತಂತೆ ಈಗಾಗಲೇ ತರಬೇತಿಗಳು, ಪೊಲೀಸ್‌ ಭದ್ರತೆಗೆ ಸಂಬಂಧಿಸಿದ ಸಭೆಗಳು ಕೂಡ ನಡೆದಿವೆ.

ಜಿಲ್ಲಾಧಿಕಾರಿಗೂ ತರಬೇತಿ
ಮತ ಎಣಿಕೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮತ್ತು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಅವರಿಗೂ ಬೆಂಗಳೂರಿನಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಇವರಿಬ್ಬರೂ ಇದಕ್ಕಾಗಿ ಮಂಗಳವಾರ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತ ಎಣಿಕೆ ಕುರಿತಂತೆ ಒಂದು ದಿನದ ತರಬೇತಿ ನಡೆದಿತ್ತು.

Advertisement

ಮತ್ತಷ್ಟು ಭದ್ರತೆ
ಮತ ಎಣಿಕೆ ದಿನಾಂಕ ಹತ್ತಿರವಾಗುತ್ತಿದ್ದು, ಸುರತ್ಕಲ್‌ನ ಎನ್‌ಐಟಿಕೆ ಮತ ಎಣಿಕೆ ಕೇಂದ್ರಕ್ಕೆ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next