ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಮತ ಏಣಿಕೆ ಪ್ರಕ್ರಿಯೆ ಇಲ್ಲಿನ ಗುಲ್ಬರ್ಗ ವಿವಿಯ ಹೆಮರೆಡ್ಡಿ ಮಲ್ಲಮ್ಮ ಅಧ್ಯಯನ ಕೇಂದ್ರದಲ್ಲಿ ಶುರುವಾಗಿದೆ.
ಮತಪೆಟ್ಟಿಗೆಗಳನ್ನು ತೆರೆದು ಎಲ್ಲ ಮತಪತ್ರಗಳನ್ನು ಬಂಡಲ್ ಮಾಡಲಾಗುತ್ತಿದೆ. ತಲಾ 25 ರ ಮತಪತ್ರಗಳಂತೆ ಬಂಡಲ್ ಗಳನ್ನು ಕಟ್ಟಲಾಗುತ್ತಿದೆ. ಬಂಡಲ್ ಕಟ್ಟುವುದು ಮಧ್ಯಾಹ್ನವರೆಗೆ ನಡೆದು ತದನಂತರ ಮತ ಏಣಿಕೆ ಶುರುವಾಗಲಿದೆ.
ತಡರಾತ್ರಿ ಇಲ್ಲವೇ ಶುಕ್ರವಾರ ಬೆಳಗಿನ ಜಾವ ಫಲಿತಾಂಶ ಹೊರ ಬೀಳುವ ನಿರೀಕ್ಷೆವಿದೆ. ನೇರ ಸ್ಪರ್ಧೆ ಏರ್ಪಟ್ಟರೆ ಬೇಗ ಫಲಿತಾಂಶ ಬರಬಹುದಾಗಿದೆ. ಆದರೆ ಇಲ್ಲಿ ತ್ರಿಕೋನ ಸ್ಪರ್ದೆ ಕಂಡು ಬಂದಿದೆ.
ಬಿಜೆಪಿಯಿಂದ ಅಮರನಾಥ ಪಾಟೀಲ್, ಕಾಂಗ್ರೆಸ್ ನಿಂದ ಡಾ.ಚಂದ್ರಶೇಖರ ಪಾಟೀಲ್ ಹಾಗೂ ಪಕ್ಷೇತರಾಗಿ ಎನ್. ಪ್ರತಾಪ ರೆಡ್ಡಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
1.56 ಲಕ್ಷ ಮತದಾರರ ಪೈಕಿ 1.09 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.69.65 ಪ್ರತಿಶತ ಮತದಾನವಾಗಿದೆ. ಕಳೆದ ಅಂದರೆ 2018ರಲ್ಲಿ ನಡೆದ ಚುನಾವಣೆಯಲ್ಲಿ 62 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ನೇತೃತ್ವದ ಲ್ಲಿ ಮತ ಏಣಿಕೆ ನಡೆಯುತ್ತಿದ್ದು, ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲಾಧಿಕಾರಿಗಳು ಹಾಜರಿದ್ದಾರೆ.