ಸಕಲೇಶಪುರ: ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿರುವ ಮುಸ್ಲಿಮರ ಮತಗಳನ್ನು ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಸುತ್ತಿದೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 18000 ಮುಸ್ಲಿಂಮರ ಮತಗಳಿದ್ದು ಸಾಮಾನ್ಯವಾಗಿ ಈ ಮತಗಳು ಹೆಚ್ಚಿನದಾಗಿ ಜೆಡಿಎಸ್‌ಗೆ ಬೀಳುತ್ತಿದ್ದವು. ಪ್ರತಿ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹೆಚ್ಚಿನ ಪೈಪೋಟಿ ನಡೆದು ಕಾಂಗ್ರೆಸ್ ಸಾಮಾನ್ಯವಾಗಿ 3ನೇ ಸ್ಥಾನದಲ್ಲಿರುತ್ತಿ ದ್ದರಿಂದ ಬಿಜೆಪಿ ಗೆಲುವು ಸಾಧಿಸುತ್ತದೆಂದು ಬಹುತೇಕ ಮುಸ್ಲಿಮರು ಜೆಡಿಎಸ್ ಪರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಮುರಳಿ ಮೋಹನ್ ಎಂಬ ಪ್ರಬಲ ಅಭ್ಯರ್ಥಿಗೆ ಒಂದು ತಿಂಗಳ ಹಿಂದೆಯೆ ಟಿಕೆಟ್ ನೀಡಿದ್ದಾರೆ. ಮುರಳಿ ಮೋಹನ್ ಸಹ ಕ್ಷೇತ್ರ ದಲ್ಲಿ ಎಲ್ಲ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುತ್ತಿರುವುದರಿಂದ ಹೆಚ್ಚಿನ ಮುಸ್ಲಿಮರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ.
ಮುಸ್ಲಿಂಮರ ಮತ ವಿಭಜನೆ ಸಾಧ್ಯತೆ: ಹಾಲಿ ಶಾಸಕ ಎಚ್.ಕೆ ಕುಮಾರಸ್ವಾಮಿಗೆ ಮುಸ್ಲಿಮರ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ. ಮುಸ್ಲಿಮರ ಮತಗಳು ಬಿಜೆಪಿಗೆ ಬೀಳುವುದು ಅನುಮಾನವಿ ರುವುದರಿಂದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಮುಸ್ಲಿಮರ ಮತಗಳ ಮೇಲೆ ಅಷ್ಟಾಗಿ ಕಣ್ಣು ಹಾಕುತ್ತಿಲ್ಲ. ಸ್ಥಳೀಯನೆಂಬ ನೆಲಗಟ್ಟಿನಲ್ಲಿ ಹಾಗೂ ವೈಯುಕ್ತಿಕ ಸಂಬಂಧದ ಹಿನ್ನೆಲೆ ಕೆಲವೇ ಮುಸ್ಲಿಮರ ಮತಗಳು ಬಿಜೆಪಿಗೆ ಹೋಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಮುಸ್ಲಿಮರನ್ನು ಹೆಚ್ಚು ಓಲೈಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ತಿಣುಕಾಡುತ್ತಿದೆ.
ಅಲ್ಪ ಸಂಖ್ಯಾತರ ಓಲೈಕೆ: ಕ್ಷೇತ್ರದಲ್ಲಿ ವೀರಶೈವ, ದಲಿತ, ಒಕ್ಕಲಿಗರ ಮತಗಳು ವಿಭಜನೆಗೊಳ್ಳುವುದರಿಂದ ಮುಸ್ಲಿಂಮರ ಮತ ಒಂದು ಕಡೆ ಹೋದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಥವ ಜೆಡಿಎಸ್‌ಗೆ ನಿರ್ಣಾಯಕವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ದಳ ಅಭ್ಯರ್ಥಿ ಕುಮಾರಸ್ವಾಮಿ, ಕೈ ಅಭ್ಯರ್ಥಿ ಮುರಳಿಮೋಹನ್ ಮುಸ್ಲಿಮರ ವಿಶ್ವಾಸಗೊಳಿಸಲು ಸರ್ಕಸ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ರಂಜಾನ್ ಆಚರಣೆಯಲ್ಲಿ ಇವರಿಬ್ಬರು ಭಾಗಿಯಾಗಿದ್ದರು. ಅಲ್ಲದೇ ವಿವಿಧ ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮುಸ್ಲಿಮರ ವಿಶ್ವಾಸ ಗಳಿಸಿದರು.
ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಜೆಡಿಎಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿತ್ತು. ಎಂದಿನಂತೆ ಈ ಬಾರಿಯೂ ಚುನಾವಣೆಯಲ್ಲಿ ಮುಸ್ಲಿಮರು ಹೆಚ್ಚಿನ ಮತಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಿ ಬೆಂಬಲಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
– ಅಸ್ಲಾಂ ಎಸ್.ಎಸ್, ಜೆಡಿಎಸ್ ಮುಖಂಡ
ಕ್ಷೇತ್ರ ಅಭಿವೃದ್ಧಿಪಡಿಸದ ಶಾಸಕರ ಧೋರಣೆಯಿಂದ ಮುಸ್ಲಿಮರು ಬೇಸತ್ತಿದ್ದಾರೆ. ಮುಂದೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಕ್ಷೇತ್ರದ ಬಹುತೇಕ ಮುಸ್ಲಿಮರು ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್‌ರವರನ್ನು ಈ ಬಾರಿ ಬೇಷರತ್ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ.
– ಕೊಲ್ಲಹಳ್ಳಿ ಸಲೀಂ, ಕೆಪಿಸಿಸಿ ಸದಸ್ಯರು
– ಸುಧೀರ್ ಎಸ್.ಎಲ್