ಬೆಂಗಳೂರು: ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗದೊಂದಿಗೆ ವಿವಿಧ ಸಂಘ, ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಇದೀಗ ಜಾಗೃತಿ ಅಭಿಯಾನಕ್ಕೆ ಆರೋಗ್ಯ ಇಲಾಖೆಯೂ ಕೈಗೂಡಿಸಿದ್ದು, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತದಾನದ ಕುರಿತು ಜಾಗೃತಿ ಮೂಡಿಸುತ್ತಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳ ಆರೋಗ್ಯ ಕೇಂದ್ರಗಳಲ್ಲಿ, ರೋಗಿಗಳ ನೀಡುವ ಹೊರ ರೋಗಿಗಳ ಘಟಕದ ಗುರುತಿನ ಚೀಟಿ (ಒಪಿಡಿ ಕಾರ್ಡ್) ಹಾಗೂ ಒಳರೋಗಿಗಳ ಘಟಕದ ಗುರುತಿನ ಚೀಟಿ ಸೇರಿದಂತೆ ಮತ್ತಿತರ ಸಲಹಾ ಚೀಟಿ ಹಾಗೂ ತಪಾಸಣಾ ವರದಿಗಳಲ್ಲಿ “ಮತ ಚಲಾವಣೆ ನಿಮ್ಮ ಹಕ್ಕು, ತಪ್ಪದೇ ಮತದಾನ ಮಾಡಿ’ ಎಂಬ ಜಾಗೃತಿ ಬರಹವನ್ನು ನಮೂದಿಸಲಾಗಿದೆ.
ಇವುಗಳ ಜತೆಗೆ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಎಲ್ಲಾ ತಪಾಸಣಾ ಶಿಬಿರಗಳು, ಆರೋಗ್ಯ ಮೇಳಗಳು, ಲಸಿಕಾ ಕಾರ್ಯಕ್ರಮಗಳಿಗೆ ತಪಾಸಣೆಗೆಂದು ಬರುವ ರೋಗಿಗಳಿಗೆ ಮತದಾನದ ಮಹತ್ವ ತಿಳಿಸಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಆರೋಗ್ಯ ಕೇಂದ್ರಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಗ್ರಾಮಾಂತರ ಭಾಗದಲ್ಲಿ ವಿವಿಧ ಜಾಥಾಗಳನ್ನು ನಡೆಸಿ ಮತದಾರರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯ 120 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಸ್‌ಸಿ), 15 ಸಾರ್ವಜನಿಕ ಆಸ್ಪತ್ರೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ 48 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಸ್‌ಸಿ), 4 ತಾಲೂಕು ಸಾರ್ವಜನಿಕ ಆಸ್ಪತ್ರೆ, 2 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಜಾಗೃತಿ ಕಾರ್ಯಗಳು ನಡೆಯುತ್ತಿವೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯೋಗೀಶ್ ಗೌಡ ಅವರು, ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ನಮ್ಮ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆರಂಭಿಸಲಾಯಿತು.
ಮೊದಲು ಜಿಲ್ಲಾ ಚುನಾವಣಾ ಆಯೋಗದ ಮತದಾನ ಜಾಗೃತಿ ತಂಡದ (ಸ್ವೀಪ್) ಜತೆಗೆ ಚರ್ಚಿಸಿ ನಮ್ಮ ಪ್ರತಿಯೊಂದು ಆರೋಗ್ಯ ಮೇಳ, ಸಭೆ -ಸಮಾರಂಭಗಳಲ್ಲಿಯೂ ಮತದಾನ ಜಾಗೃತಿ ಕುರಿತು ಘೋಷಣೆ, ಬರಹ, ಪ್ರತಿಜ್ಞಾ ವಿಧಿ ಬೋಧನೆಯನ್ನು ಮಾಡಲಾಯಿತು. ಈ ಜಾಗೃತಿ ಕಾರ್ಯಕ್ರಮ ಚುನಾವಣೆ ಮುಗಿಯುವವರೆಗೂ ನಿರಂತರವಾಗಿ ನಡೆಯುತ್ತದೆ.
ಆಸ್ಪತ್ರೆಗಳಿಗೆ ಬರುವ ರೋಗಿಗಳು, ಅವರ ಸಂಬಂಧಿಕರಿಗೆ ಚುನಾವಣಾ ದಿನ ತಪ್ಪದೇ ಮತದಾನ ಮಾಡಲು ಹೇಳಿದ್ದೇವೆ. ತಪಾಸಣೆ ಚೀಟಿಗಳಲ್ಲಿ ಜಾಗೃತಿ ಬರಹ ಪ್ರಕಟಿಸಲಾಗಿದೆ. ಇವರೆಗೂ ನಡೆದ 15ಕ್ಕೂ ಹೆಚ್ಚು ಆರೋಗ್ಯ ಮೇಳ/ಶಿಬಿರಗಳಲ್ಲೂ ಜಾಗೃತಿ ಮೂಡಿಸಲಾಗಿದೆ.
-ಡಾ.ಯೋಗೀಶ್ ಗೌಡ, ಬೆಂ.ಗ್ರಾಮಾಂತರ ಜಿಲ್ಲಾ ಆರೋಗ್ಯ ಅಧಿಕಾರಿ