Advertisement

ರೈಲಿನಲ್ಲಿಯೂ “ಮತ ಜಾಗೃತಿ’ಅಭಿಯಾನ

07:35 AM Apr 08, 2018 | |

ಕುಂದಾಪುರ: ಕಾಲೇಜು, ಗ್ರಾ.ಪಂ.ಗಳು, ಮದುವೆ ಇನ್ನಿತರ ಸಭೆ, ಸಮಾರಂಭಗಳು ಆಯಿತು. ಈಗ ರೈಲಿನಲ್ಲಿಯೂ ಮತದಾನದ ಕುರಿತು ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾಡಳಿತ ಮುಂದಾಗಿದೆ. ಶನಿವಾರ ಮಂಗಳೂರು-ಮಡಂಗಾವ್‌ ರೈಲಿನಲ್ಲಿ ಕುಂದಾಪುರದಿಂದ ಕಾರವಾರದವರೆಗೆ ಸ್ವೀಪ್‌ ಸಮಿತಿ ಹಾಗೂ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ರೈಲಿನಲ್ಲಿ ಸಂಚರಿಸಿ ಸುಮಾರು 2,500ಕ್ಕೂ ಅಧಿಕ ಮಂದಿಗೆ ಮತ ಜಾಗೃತಿ ಮೂಡಿಸಿದ್ದಾರೆ. 

Advertisement

ರಾಜ್ಯ ವಿಧಾನಸಭಾ ಚುನಾವಣೆಯ ಅಖಾಡ ಸಿದ್ಧವಾಗಿದ್ದು, ಒಂದೆಡೆ ಪಕ್ಷಗಳು ತಮ್ಮ ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳು ಮತದಾನದ ಪ್ರಮಾಣ ಹೆಚ್ಚಳ ಹಾಗೂ ಮುಕ್ತ ನಿರ್ಭಿತಿಯಿಂದ   ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಕುಂದಾಪುರ ಭಾಗದಲ್ಲೂ ಎಲ್ಲ ಕಡೆಗಳಲ್ಲಿ ಮತದಾನ ನಮ್ಮ ಹಕ್ಕು, ತಪ್ಪದೇ ಮತದಾನ ಮಾಡಿ ಎನ್ನುವ ಘೋಷ ವಾಕ್ಯದೊಂದಿಗೆ ಅಧಿಕಾರಿಗಳು ಮತ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಸ್ವೀಪ್‌ ಸಮಿತಿ, ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ದಿ ಕನ್ಸರ್‌°ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆ ಹಾಗೂ ಮಕ್ಕಳ ರಕ್ಷಣಾ ಸಮಿತಿಯ ಕಾರ್ಯಕರ್ತರೆಲ್ಲ ಸೇರಿ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ 8.45ಕ್ಕೆ ಮಂಗಳೂರು – ಮಡಗಾಂವ್‌ ರೈಲಿಗೆ ಹತ್ತಿ, ಕಾರವಾರದವರೆಗೆ ಎಲ್ಲ ಬೋಗಿಗಳಿಗೂ ತೆರಳಿ ಅಲ್ಲಿರುವ ಜನರಿಗೆ “ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ’ ಎನ್ನುವ ಘೋಷ ವಾಕ್ಯವನ್ನು ಸಾರುವ ಬ್ಯಾಡ್ಜ್, ಸ್ಟಿಕ್ಕರ್‌ಗಳು, ಪ್ಲೆಕಾರ್ಡ್‌ಗಳನ್ನು ನೀಡಲಾಯಿತು. 
ಅದಲ್ಲದೆ ಕೆಲವು ರೈಲು ನಿಲ್ದಾಣಗಳಲ್ಲಿಯೂ ಅಲ್ಲಿದ್ದ ಪ್ರಯಾಣಿಕರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. 

56 ಗ್ರಾ.ಪಂ.: ಮಾಹಿತಿ ಪ್ರಾತ್ಯಕ್ಷಿಕೆ
ಕುಂದಾಪುರ ತಾಲೂಕು ಪಂಚಾಯತ್‌ ವತಿಯಿಂದ ಎಲ್ಲ ಗ್ರಾ.ಪಂ.ಗಳಲ್ಲಿಯೂ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ ಕುರಿತು ಸಾರ್ವಜನಿಕರಿಗೆ, ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಮುಖಂಡರಿಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 56 ಗ್ರಾಮ ಪಂಚಾಯತ್‌ಗಳಲ್ಲಿ ಈ ಕುರಿತ ಮಾಹಿತಿ ಪ್ರಾತ್ಯಕ್ಷಿಕೆಯನ್ನು ತಾ. ಪಂ. ಅಧಿಕಾರಿಗಳು ನೀಡಿದ್ದಾರೆ. ಇನ್ನು 9 ಗ್ರಾ.ಪಂ.ಗಳಲ್ಲಿ ಬಾಕಿಯಿದ್ದು, ಸದ್ಯದ‌ಲ್ಲೇ ಪೂರ್ಣಗೊಳ್ಳಲಿದೆ ಎಂದು ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಂ. ಕೆ. ಆರ್‌. ಪೆಡೆ°àಕರ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸಂಸ್ಥೆಗಳ ಸಹಕಾರ
ಮತದಾನದ ಕುರಿತು ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು, ಹಲವು ಸ್ವಯಂ ಸೇವಾ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಅದರಲ್ಲೂ  ನಮ್ಮ ಭೂಮಿ, ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ, ಸಿಡಬ್ಲ್ಯುಸಿ ಸಂಸ್ಥೆಯ ಕಾರ್ಯಕರ್ತರು ಹೀಗೆ ಅನೇಕ ಮಂದಿ ಈ ಮತಜಾಗೃತಿ ಅಭಿಯಾನದಲ್ಲಿ  ಸಹಕರಿಸಿದ್ದಾರೆ. ಆಯಾಯ ಮತಗಟ್ಟೆಯ ಬಿಎಲ್‌ಒಗಳು ಕೂಡ ಈ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ  ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 
–  ಶಿವಾನಂದ ಕಾಪಶಿ, 
ಉಡುಪಿ ಜಿ.ಪಂ. ಸಿಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next