Advertisement

karnataka polls: ಕಾಂಡ್ಲಾವನದ ಮಧ್ಯೆ ಮತ ಜಾಗೃತಿ

04:05 PM Apr 29, 2023 | Team Udayavani |

ಕೋಟ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್‌ ಸಮಿತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ನದಿಯಲ್ಲಿ ಕಯಾಕಿಂಗ್‌ ಮೂಲಕ ತೆರಳಿ ಮಾಂಗ್ರೋವ್‌ (ಕಾಂಡ್ಲಾ) ಕಾಡುಗಳ ಮಧ್ಯೆ ಕಯಾಕ್‌ಗಳಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.

Advertisement

ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಬುಧವಾರ ಸಾಲಿಗ್ರಾಮದ ಪಾರಂಪಳ್ಳಿಯ ಹಿರೇ ಹೊಳೆಯಲ್ಲಿ ಕಯಾಕಿಂಗ್‌ ಮಾಡಲು ಬಳಸುವ ದೋಣಿ, ಹುಟ್ಟುಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು.

ಸಾಲಿಗ್ರಾಮ ಬಳಿಯ ಕಯಾಕಿಂಗ್‌ ಪಾಯಿಂಟ್‌ ಬಳಿಗೆ ತೆರಳಿದ, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು ಮತ್ತು ಜಿ.ಪಂ. ಸಿಇಒ ಪ್ರಸನ್ನ ಎಚ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೇ ಅಕ್ಷಯ್‌ ಮಚ್ಚೀಂದ್ರ, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಯತೀಶ್‌ ಅವರು ಕಯಾಕಿಂಗ್‌ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ಸ್ಥಳದಲ್ಲಿ ಅಳವಡಿಸಲಾಗಿದ್ದ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತ ಉಪಕರಣಗಳನ್ನು ಧರಿಸಿ ಕಯಾಕಿಂಗ್‌ ಆರಂಭಿಸಿದರು.

ಸುಮಾರು 30 ನಿಮಿಷಗಳ ಕಯಾಕಿಂಗ್‌ ಅನಂತರ ಮಾಂಗ್ರೋವ್‌ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕಯಾಕ್‌ ದೋಣಿಗಳ ಮೂಲಕ ಮೇ 10 ಮತದಾನ ಎಂಬ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಅತ್ಯಂತ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಕಯಾಕಿಂಗ್‌ ಆರಂಭದ ಸ್ಥಳದಿಂದ ನದಿ ಮಧ್ಯದ ಕಾರ್ಯಕ್ರಮ ನಡೆಯವ ಸ್ಥಳದ ವರೆಗೂ ನದಿಯಲ್ಲಿ ಮತದಾನ ಜಾಗೃತಿ ಸಾರುವ ಯಕ್ಷಗಾನ ಮುಕುಟ ಮಾದರಿಯ ಆಕೃತಿಗಳು ಗಮನ ಸೆಳೆದವು.

Advertisement

ಇದೇ ಸಂದರ್ಭದಲ್ಲಿ, ಕಯಾಕಿಂಗ್‌ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ಮತದಾನ ದಿನಾಂಕವನ್ನು ಒಳಗೊಂಡ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಕೂಡ ಜಾಗೃತಿ ಮೂಡಿಸಲಾಯಿತು. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಕಯಾಕಿಂಗ್‌ ಪಾಯಿಂಟ್‌ನಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳು ಮತ್ತು ಸಿಬಂದಿ ಅಗತ್ಯ ಸಹಕರಿಸಿದರು.

ಹಿನ್ನೀರಿನಲ್ಲಿ ಮೊದಲ ಪ್ರಯೋಗ
ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಹಿನ್ನೀರಿನಲ್ಲಿ ಮಾಂಗ್ರೋವ್‌ ವನದ ನಡುವೆ ಕಯಾಕ್‌ಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ. ಪ್ರವಾಸಿ ತಾಣಗಳು ಹಾಗೂ ಸಾಹಸ ಚಟುವಟಿಕೆಗಳು ನಡೆಯುವ ಸ್ಥಳಗಳು ಯುವ ಜನತೆಯನ್ನು ಹೆಚ್ಚು ಆಕರ್ಷಿಸಲಿದ್ದು, ಇಲ್ಲಿ ನಡೆಸುವ ಮತದಾನ ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಸೆಳೆಯಲು ಸಹಕಾರಿಯಾಗಲಿದೆ.
– ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next