ಮಡಿಕೇರಿ: ನಿರಂತರ ಮಳೆಯಿಂದ ಆಗಿರುವ ಅನಾಹುತದ ಪರಿಹಾರ ಕಾರ್ಯಕ್ಕೆ ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡ ಧಾವಿಸುವ ಮೊದಲೇ ಸ್ಥಳೀಯ ಯುವಕರು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಸಾಕಷ್ಟು ಜನರನ್ನು ರಕ್ಷಿಸಿದ್ದರು. ಅಷ್ಟೇ ಅಲ್ಲ,ಸೇವಾ ಭಾರತಿ ವತಿಯಿಂದ ಹಲವು ನಿರಾಶ್ರಿತರ ಶಿಬಿರಗಳನ್ನೂ ನಡೆಸಲಾಗುತ್ತಿದೆ.
ಕೊಡಗು ಜಿಲ್ಲೆಯ ಹಾಲೇರಿ, ಮುಕ್ಕೊಡ್ಲು, ಮಕ್ಕಂದೂರು, ತಂತಿಪಾಲ್ ಮೊದಲಾದ ಭಾಗದಲ್ಲಿ ಸೈನಿಕರು ಮತ್ತು ಎನ್‌ಡಿಆರ್‌ಎಫ್ ತಂಡ ಧಾವಿಸುವ ಮೊದಲೇ ಸ್ಥಳೀಯ ಯುವಕರು ಆರ್‌ಎಸ್‌ಎಸ್ ಕಾರ್ಯಕರ್ತರ ಜತೆ ಸೇರಿ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ ಎಂಬುದನ್ನು ಸ್ಥಳೀಯರೇ ಹೇಳುತ್ತಿದ್ದಾರೆ.
ಮಳೆಯಿಂದಾಗಿ ಭೀಕರ ಅನಾಹುತ ಆಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆರ್‌ಎಸ್‌ಎಸ್‌ನ ಜಿಲ್ಲಾ ಪ್ರಚಾರ ಪ್ರಮುಖ್ ಚಂದ್ರ ಅವರು ಸಂಘದ ಹಿರಿಯರಿಗೆ ಮಾಹಿತಿ ನೀಡಿದರು. ಆ. 16ರ ಬೆಳಗ್ಗೆ ಮಡಿಕೇರಿಯ ಸಂಘದ ಕಾರ್ಯಾಲಯದಲ್ಲಿ 10 ನಿಮಿಷ ಕಾರ್ಯಕರ್ತರು ಸಭೆ ನಡೆಸಿದರು. ಬಳಿಕ ಹಿರಿಯ ಸೂಚನೆಯಂತೆ 30 ಸ್ವಯಂಸೇವಕರ ತಂಡ ಮಕ್ಕಂದೂರು ಭಾಗಕ್ಕೆ ರಕ್ಷಣೆಗೆ ಧಾವಿಸಿದ್ದರು. ಮಧ್ಯಾಹ್ನದ ವೇಳೆಗೆ ಸುಮಾರು 50ರಿಂದ 60 ಜನರನ್ನು ರಕ್ಷಿಸಿ,ನಿರಾಶ್ರಿತರ ಶಿಬಿರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲೆಯ ಬೇರೆ ಭಾಗದಲ್ಲಿ ಮಳೆ ಹಾನಿಯ ಸುದ್ದಿ ತಿಳಿಯುತ್ತಿದ್ದಂತೆ ಮತ್ತಷ್ಟು ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಸಂಜೆ ವೇಳೆಗೆ 300ರಿಂದ 350 ಕಾರ್ಯಕರ್ತರು ವಿವಿಧ ಭಾಗದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಸೇವಾ ಭಾರತಿಯ ಕಾರ್ಯದರ್ಶಿ ಮಹೇಶ್ ಕುಮಾರ್ ವಿವರಿಸುತ್ತಾರೆ.
ಸೇನೆ ಅಥವಾ ಎನ್‌ಡಿಆರ್‌ಎಫ್ ತಂಡದಲ್ಲಿರುವಂತೆ ಯಾವುದೇ ರಕ್ಷಣಾ ಪರಿಕರ ನಮ್ಮಲ್ಲಿ ಇರಲಿಲ್ಲ. ಆದರೂ ಸಾವಿರಕ್ಕೂ ಅಧಿಕ ಮಂದಿಯನ್ನು ನಮ್ಮಕಾರ್ಯಕರ್ತರು ರಕ್ಷಿಸಿದ್ದಾರೆ. ನಂತರ ಸೈನಿಕರು ಹಾಗೂ ಎನ್‌ಡಿಆರ್‌ಎಫ್ ತಂಡದೊಂದಿಗೂ ನಮ್ಮ ಕಾರ್ಯಕರ್ತರು ಸೇರಿಕೊಂಡು ರಕ್ಷಣಾ ಕಾರ್ಯ ನಡೆಸಿದ್ದಾರೆ. ಆರಂಭದಲ್ಲಿ ಒಂದು ಸ್ಟೌ ಹಾಗೂ ಒಂದು ಸಿಲಿಂಡರ್ ಬಿಟ್ಟರೆ ಬೇರೇನೂ ಇರಲಿಲ್ಲ. ಅದರಲ್ಲೇ ಗಂಜಿ ಮತ್ತು ಚಟ್ನಿ ಮಾಡಿ ಮೊದಲ ದಿನ ಮಧ್ಯಾಹ್ನದ ಊಟ ಬಡಿಸಿದ್ದೆವು. ನಂತರ ಎಲ್ಲ ವ್ಯವಸ್ಥೆಯೂ ತಾನಾಗಿಯೇ ಆಯಿತು ಎಂದು ಅವರು ಮಾಹಿತಿ ನೀಡಿದರು.
ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕಾರ್ಯಕರ್ತರಿಗೆ ಸಂದೇಶ ರವಾನಿಸಿದೆವು.ಎಲ್ಲಿ ಸಾಧ್ಯವೋ ಅಲ್ಲೆಲ್ಲ ನಿರಾಶ್ರಿತರ ಕೇಂದ್ರ
ಆರಂಭಿಸಿ, ಸಂಪರ್ಕಕ್ಕೆಂದು ನಾಲ್ಕು ಮೊಬೈಲ್ ಸಂಖ್ಯೆಗಳನ್ನು ನೀಡಿದೆವು. ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ಸಂಖ್ಯೆ ಶೇರ್ ಆಗಿ ದೇಶ, ವಿದೇಶದಿಂದಲೂ ಕರೆಗಳು ಬರಲು ಆರಂಭವಾದವು. ಇದರ ಜತೆಗೆ ರಾಜ್ಯದ ಎಲ್ಲ ಭಾಗದಿಂದಲೂ ಪರಿಹಾರ ಸಾಮಗ್ರಿ ನಿರೀಕ್ಷೆಗೂ ಮೀರಿ ಬಂದಿದೆ. ಸರ್ಕಾರದ ಮುಂದಿನ ಕ್ರಮದಂತೆ ನಿರಾಶ್ರಿತರಿಗೆ ವ್ಯವಸ್ಥೆಯಾಗಿದೆ. ಸೇವಾ ಭಾರತಿಯಿಂದ ಮಾಡಬಹುದಾದ ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ನಮ್ಮ ಶಿಬಿರಗಳಲ್ಲಿ ಇರುವ ಎಲ್ಲರ ವಿಳಾಸತೆಗೆದುಕೊಂಡಿದ್ದೇವೆಂದು ವಿವರಿಸಿದರು.