ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮೂಲಕ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್-ಜೆಡಿಎಸ್‌ಗೆ ಹೊಸ ತಲೆನೋವು ಶುರುವಾಗಿದ್ದು, ಖಾಲಿ ಇರುವ ಮೂರು ಸಚಿವ ಸ್ಥಾನಕ್ಕೂ ಒಂದು ಡಜನ್ ಆಕಾಂಕ್ಷಿಗಳು ಸೃಷ್ಟಿಯಾಗಿದ್ದಾರೆ. ತಕ್ಷಣಕ್ಕೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ.
ಪಕ್ಷೇತರ ಶಾಸಕರಾದ ಆರ್.ಶಂಕರ್, ಕಾಂಗ್ರೆಸ್ ಶಾಸಕರಾದ ಅಮರೇಗೌಡ ಬಯ್ನಾಪುರ, ವಿ.ಮುನಿಯಪ್ಪ, ಡಾ.ಅಜಯ್‌ಸಿಂಗ್, ಶಿವರಾಂ ಹೆಬ್ಟಾರ್, ಬಿ.ಸಿ.ಪಾಟೀಲ್, ಸಂಗಮೇಶ್, ನಾಗೇಂದ್ರ ಸಹ ಸಚಿವಾಕಾಂಕ್ಷಿಗಳಾಗಿದ್ದು ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ, ಸಂಪುಟ ಪುನಾರಚನೆ ಗೊಡವೆಯೇ ಸದ್ಯಕ್ಕೆ ಬೇಡ ಎಂಬ ಚರ್ಚೆಯೂ ನಡೆದಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಿಂದ ಅತೃಪ್ತಿ ಶಮನವಾಗುವುದಕ್ಕಿಂತ ಕಗ್ಗಂಟಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಆ ನಂತರ ಕಾಂಗ್ರೆಸ್ ಸಚಿವರ ಸಭೆಯೂ ನಡೆಯಲಿದೆ. ಅಗತ್ಯವಾ ದರೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಸಚಿವರ ಸಭೆಯೂ ನಿಗದಿಯಾಗಲಿದೆ. ಆ ನಂತರವಷ್ಟೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಡಿಕೆಶಿ ಎಂಟ್ರಿ: ಸರ್ಕಾರ ಉಳಿಸುವ ನಿಟ್ಟಿನಲ್ಲಿ ಮಂಗಳವಾರ ‘ಟ್ರಬಲ್ ಶೂಟರ್’ ಡಿ.ಕೆ.ಶಿವಕುಮಾರ್ ಜತೆಗೂಡಿದ್ದು ಬಿಜೆಪಿಯತ್ತ ವಾಲಿದ್ದ ಪಕ್ಷೇತರ ಶಾಸಕ ನಾಗೇಶ್ ಅವರ ಜತೆ ಮಾತುಕತೆ ನಡೆಸಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಬಳಿ ಕರೆದೊಯ್ದು ಸಮ್ಮಿಶ್ರ ಸರ್ಕಾರದ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ಕೊಡಿಸಿದರು.
Advertisement
ಇದರ ಬೆನ್ನಲ್ಲೇ ಸಂಪುಟ ಪುನಾರಚನೆಗೆ ಕೈ ಹಾಕಿದರೆ ಸರ್ಕಾರ ಉಳಿಯುವುದಕ್ಕಿಂತ ಮತ್ತಷ್ಟು ಅಲುಗಾಡುವ ಭೀತಿಯೂ ಎದುರಾಗಿದೆ. ಮೇಲ್ನೋಟಕ್ಕೆ ಸರ್ಕಾರ ಉಳಿಸಲು ತ್ಯಾಗಕ್ಕೆ ಸಿದ್ಧ ಎಂದು ಹೇಳುತ್ತಿರುವವರು ಆಂತರಿಕವಾಗಿ ನಾವೇ ಯಾಕೆ ತ್ಯಾಗ ಮಾಡಬೇಕು. ಬ್ಲಾಕ್‌ವೆುೕಲ್ ಮಾಡುವ ಶಾಸಕರಿಗೆ ಮಂತ್ರಿಗಿರಿ ಕೊಡುವುದಾದರೆ ಪಕ್ಷ ನಿಷ್ಠರಾದ ನಾವೇನು ಮಾಡಿದ್ದೇವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
Related Articles
Advertisement
ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಅವರು ರಮೇಶ ಜಾರಕಿಹೊಳಿ ಅವರ ಸಂಪರ್ಕ ದಲ್ಲಿರುವ ಶಾಸಕರನ್ನು ಕರೆಸಿಕೊಂಡರು. ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಜತೆ ನಿರಂತರ ಸಂಪರ್ಕದಲ್ಲಿದ್ದು ಬಿಜೆಪಿ ತೆಕ್ಕೆಗೆ ಜಾರಲು ಮುಂದಾಗಿರುವ ಶಾಸಕರನ್ನು ಮತ್ತೆ ಸೆಳೆಯುವ ಪ್ರಯತ್ನ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಅತೃಪ್ತ ಶಾಸಕರ ಜತೆ ಮಾತನಾಡಿ ಏನೇ ಸಮಸ್ಯೆ ಇದ್ದರೂ ಸ್ಪಂದಿಸುತ್ತೇನೆ. ನೀವು ನಮ್ಮ ಜತೆಗಿರಿ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದರು. ನಂತರ ಸಚಿವ ಡಿ.ಕೆ.ಶಿವಕುಮಾರ್ ಜತೆಗೂ ಅವರು ಚರ್ಚಿಸಿದರು.
ಇದೆಲ್ಲದರ ನಂತರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಯಾಗಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದರು. ದೇವೇಗೌಡರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಸಚಿವರ ಸಭೆಯ ನಿರ್ಧಾರ ನೋಡಿಕೊಂಡು ನಂತರ ಮುಂದುವರಿಯುವಂತೆ ಸಲಹೆ ನೀಡಿದರು ಎನ್ನಲಾಗಿದೆ.
ಯಾರನ್ನು ಬಿಡುವುದು? ಯಾರಿಗೆ ಸ್ಥಾನ?
ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಯಾರನ್ನು ಬಿಡುವುದು? ಯಾರಿಗೆ ಸ್ಥಾನ ಕೊಡುವುದು ಎಂಬುದು ಕಗ್ಗಂಟಾಗಿದೆ. ಮುಸ್ಲಿಂ ಕೋಟಾದಲ್ಲಿ ಜಮೀರ್ ಅಥವಾ ಖಾದರ್ ಬಿಟ್ಟು, ರೋಶನ್ ಬೇಗ್‌ಗೆ ಸ್ಥಾನ ನೀಡಬೇಕಾಗುತ್ತದೆ. ಪಕ್ಷೇತರರಲ್ಲಿ ನಾಗೇಶ್ ಅಥವಾ ಶಂಕರ್‌ರಲ್ಲಿ ಒಬ್ಬರಿಗೆ ಅವಕಾಶ ಕೊಡಬಹುದು. ಇನ್ನು ರಮೇಶ್ ಜಾರಕಿಹೊಳಿ ಅಥವಾ ಡಾ.ಸುಧಾಕರ್ ಅವರಲ್ಲಿ ಯಾರಿಗೆ ಸ್ಥಾನ ನೀಡಿದರೆ ಅತೃಪ್ತಿ ಶಮನ ಮಾಡಬಹುದು ಎಂಬ ಲೆಕ್ಕಾಚಾರ ನಡೆಯುತ್ತಿವೆ. ಒಂದೊಂದು ಸ್ಥಾನಕ್ಕೂ ಇಬ್ಬಿಬ್ಬರು ಇದ್ದು ವಿಸ್ತರಣೆ ತಲೆನೋವಾಗಿದೆ ಎನ್ನಲಾಗಿದೆ.