Advertisement

ಸಂಪುಟ ರೂಪದಲ್ಲಿ ಬರುತ್ತಿದೆ “ಪಂಚಮ ಪತ್ರಿಕೆ’

02:56 PM Jun 04, 2018 | |

ಬೆಂಗಳೂರು: ಎಪ್ಪತ್ತರ ದಶಕದಲ್ಲಿ ಮೈಸೂರು ಭಾಗದಲ್ಲಿ ದಲಿತ ಚಳವಳಿಗೆ ದಾರಿ ದೀಪವಾಗಿದ್ದ ಮತ್ತು ಹಲವು ಹೋರಾಟಗಳಿಗೆ ಮನ್ನುಡಿ ಬರೆದಿದ್ದ “ಪಂಚಮ ಪತ್ರಿಕೆ’ ಇನ್ಮುಂದೆ ಸಂಪುಟ ರೂಪದಲ್ಲಿ ದೊರೆಯಲಿದೆ.

Advertisement

ಚಳವಳಿ ಸ್ಮರಣೆಯ ಜತೆಗೆ, ಪತ್ರಿಕೆಯ ಆಶಯ ಏನಾಗಿತ್ತು? ಕಾಲ ಕಾಲಕ್ಕೆ ಪತ್ರಿಕೆ ಆಶಯಗಳು ಹೇಗೆ ಬದಲಾದವು? ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪತ್ರಿಕೆಯನ್ನು ಹೇಗೆ ಓದುಗರಿಗೆ ತಲುಪಿಸಲಾಗುತ್ತಿತ್ತು ಸೇರಿದಂತೆ ಹಲವು ಅನುಪಮ ವಿಷಯಗಳನ್ನು ಯುವ ಪೀಳಿಗೆಗೆ ತಿಳಿಸುವುದರ ಜತೆಗೆ, ಯುವ ಜನಾಂಗಕ್ಕೆ ಪ್ರೇರಕ ಶಕ್ತಿ ಆಗಲಿ ಎಂಬ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಪತ್ರಿಕೆಯನ್ನು ಸಂಪುಟ ರೂಪದಲ್ಲಿ ಕಟ್ಟಿಡುವ ಕೆಲಸಕ್ಕೆ ಕೈಹಾಕಿದೆ. 

ಹೌದು, ದಲಿತರ ಒಡಲಿಂದ ಬಂದ, ದಲಿತರೇ ಹೊರತಂದ ಮೊದಲ ಪತ್ರಿಕೆ ಎಂಬ ಹಿರಿಮೆಗೆ ಪಾತ್ರವಾಗಿರುವ ಪಂಚಮ ಪತ್ರಿಕೆ  ಹಲವು ದಲಿತ ಚಳವಳಿಗೆ ಹುರುಪು ತುಂಬಿತ್ತು. 1970ರ ದಶಕದಲ್ಲಿ ದಲಿತ ಚಳವಳಿಗಳಿಗೆ ಚೈತನ್ಯ ಶಕ್ತಿಯಾಗಿತ್ತು. ಆರ್ಥಿಕ ಮುಗಟ್ಟಿನ ನಡುವೆಯೂ ದಲಿತರ ನೋವು-ನಲಿವು, ಹೋರಾಟಗಳು, ಪ್ರತಿಭಟನೆಗಳು ಸೇರಿದಂತೆ ಹಲವು ಸಂದೇಶಗಳನ್ನು ಹೊತ್ತು ತರುತ್ತಿತ್ತು.

ಈ ಪತ್ರಿಕೆ ದಲಿತ ಸಂಘಟನೆಗಳಿಗೆ ಸಂಬಂಧಿಸಿದ ಬೇರೆ, ಬೇರೆ ಪತ್ರಿಕೆಗಳ ಹುಟ್ಟಿಗೆ ಕಾರಣವಾಯಿತು. ಆದರೆ ಆ ಯಾವುದೇ ಪತ್ರಿಕೆಗಳು ಪಂಚಮ ಪತ್ರಿಕೆ ಮಾಡಿದ ಸಾಹಸ ಮಾಡಿಲ್ಲ. ಹೀಗಾಗಿ, ಚಾರಿತ್ರಿಕ ನೆಲೆಯಿಂದ ಮತ್ತು ದಾಖಲಾತಿಯ ದೃಷ್ಟಿಯಿಂದ ಪತ್ರಿಕೆಗಳನ್ನು “ಸ್ಕ್ಯಾನ್‌’ ಮಾಡಿ, ಇದ್ದ ಸ್ಥಿತಿಯಲ್ಲಿಯೇ ಮುದ್ರಿಸಬೇಕು ಎಂಬ ತೀರ್ಮಾನಕ್ಕೆ  ಸಾಹಿತ್ಯ ಅಕಾಡೆಮಿ ಬಂದಿದೆ. 

ಎಸ್ಸಿಎಸ್ಟಿ ಅನುದಾನ ಬಳಕೆ: ಪರಿಶಿಷ್ಟ ಜಾತಿ ಮತ್ತು ಪಂಗಡ ಉಪಯೋಜನೆಯಡಿ ಅಕಾಡೆಮಿಯಲ್ಲಿರುವ ಅನುದಾನವನ್ನು ಪಂಚಮ ಪತ್ರಿಕೆಯ ಸಂಪುಟ ರಚನೆಗೆ ಬಳಸಿಕೊಳ್ಳುವ ಚಿಂತನೆ ನಡೆದಿದೆ. ಎರಡು ಸಂಪುಟಗಳಲ್ಲಿ ಪತ್ರಿಕೆಯನ್ನು ಹೊರತರುವ ಆಲೋಚನೆ ಮಾಡಲಾಗಿದ್ದು, ಪ್ರತಿ ಸಂಪುಟ ಅಂದಾಜು 400ರಿಂದ 450 ಪುಟಗಳನ್ನು ಒಳಗೊಳ್ಳಲಿವೆ. ಇದಕ್ಕೆ 4ರಿಂದ 5 ಲಕ್ಷ ರೂ. ವೆಚ್ಚವಾಗುವ ಸಾಧ್ಯತೆಯಿದ್ದು, ಉಪಯೋಜನೆ ಅನುದಾನ ಬಳಸಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಈ ಹಿಂದೆ ಪ್ರಕಟವಾಗಿದ್ದ ಪಂಚಮ ಪತ್ರಿಕೆಯನ್ನು ಪುನರ್‌ ಮುದ್ರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಪತ್ರಿಕೆಯಲ್ಲಿ ಕೆಲಸ ಮಾಡಿದವರನ್ನು ಸಲಹಾ ಸಮಿತಿಗೆ ನೇಮಿಸಲಾಗಿದೆ. ಇದುವರೆಗೆ ಪತ್ರಿಕೆಯ ಶೇ. 60ರಷ್ಟು ಪ್ರತಿಗಳು ಸಿಕ್ಕಿದ್ದು, ಬಾಕಿ ಇರುವ ಶೇ. 40ರಷ್ಟು ಪ್ರತಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಸಂಪುಟ ಹೊರತರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕೆಗಾಗಿ ದುಡಿದವರೊಂದಿಗೆ ಅಕಾಡೆಮಿ ಸಮಾಲೋಚನೆ ನಡೆಸಿದೆ. ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇನೂ,° ಸಿಗಬೇಕಾಗಿರುವ ಪತ್ರಿಕೆಯ ಪುಟಗಳ ಹುಡುಕಾಟದಲ್ಲಿ ಮೈಸೂರು ವಿವಿ ಅಂಬೇಡ್ಕರ್‌ ಪೀಠದ ನಿರ್ದೇಶಕ ನರೇಂದ್ರ ಕುಮಾರ್‌ ಮತ್ತು ಡಾ.ತುಕರಾಂ ನಿರತವಾಗಿದ್ದಾರೆ. ಈ ಸಂಬಂಧ ಈಗಾಗಲೇ ಸಂಪಾದಕ ಮಂಡಳಿ ರಚಿಸಲಾಗಿದ್ದು, ಇದರಲ್ಲಿ ಕೋಟಿಗಾನಹಳ್ಳಿ ರಾಮಯ್ಯ (ಪತ್ರಿಕೆಯ ಸಂಪಾದಕರಾಗಿದ್ದವರು) ಕೂಡ ಸೇರಿದ್ದಾರೆ. ಖ್ಯಾತ ಕಾದಂಬರಿಕಾರ ದೇವನೂರು ಮಹಾದೇವ ಕೂಡ ಸಲಹಾ ಸಮಿತಿಯಲ್ಲಿದ್ದಾರೆ.

ಮೈಸೂರು ಭಾಗದಲ್ಲಿ ಹುಟ್ಟಿಕೊಂಡಿದ್ದ ಪಂಚಮ ಪತ್ರಿಕೆ ಹಲವು ದಲಿತ ಚಳುವಳಿಗಳಿಗೆ ಪ್ರೇರಣೆ ನೀಡಿದೆ. ಯುವ ಪೀಳಿಗೆಗೆ ಇದು ಪ್ರೇರಣೆ ಶಕ್ತಿಯಾಗಲಿ. ಹೊಸ ಚಳವಳಿಗಳನ್ನು ಇದು ಕಟ್ಟಿ ಕೊಡಬಹುದು ಎಂಬ ಉದ್ದೇಶದಿಂದ ಪತ್ರಿಕೆಯನ್ನು ಸಂಪುಟ ರೂಪದಲ್ಲಿ ತರುವ ಪ್ರಯತ್ನಕ್ಕೆ ಕೈಹಾಕಲಾಗಿದೆ. 
-ಪ್ರೊ.ಅರವಿಂದ ಮಾಲಗತ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ದಲಿತ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಈ ಪತ್ರಿಕೆಯಲ್ಲಿ ನಾನು ಕೂಡ ತೊಡಗಿಸಿಕೊಂಡಿದ್ದೆ. ಆದರೆ, ಇಂದು ಜನಮಾನಸದಲ್ಲಿ ಇದು ಮರೆಯಾಗಿದೆ. ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿ ಆ ಪತ್ರಿಕೆಯ ಪುಟಗಳನ್ನು “ಸ್ಕ್ಯಾನ್‌’ ಮಾಡಿ ಎರಡು ಸಂಪುಟಗಳಲ್ಲಿ ತರುತ್ತಿರುವುದು ಶ್ಲಾಘನೀಯ.
-ಸಿದ್ದಲಿಂಗಯ್ಯ, ಕವಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next