Advertisement

ಕಮಲ ಪಡೆಯಲ್ಲಿ ಒಕ್ಕಲಿಗರ ನಾಯಕತ್ವ ಹುಡುಕಾಟ

09:29 PM Apr 21, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಹೇಗಾದರೂ ಮಾಡಿ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕೆಂದು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದೆ. ಆದರೆ, ಟಾರ್ಗೆಟ್‌ 150 ತಲುಪಲು ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯ ಸೆಳೆಯಲು ಸಮರ್ಥ ನಾಯಕನ ಹುಡುಕಾಟದಲ್ಲಿದೆ.

Advertisement

ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದರೂ, ಬಹುತೇಕ ಲಿಂಗಾಯತ ಸಮುದಾಯದ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬ ಅಭಿಪ್ರಾಯ ರಾಜ್ಯದ ಜನರಲ್ಲಿ ಹಾಗೂ ಪಕ್ಷದಲ್ಲಿಯೂ ಇದೆ. ಎರಡು ಬಾರಿಯೂ ಬಿಜೆಪಿಗೆ ಒಳ್ಳೆಯ ಅವಕಾಶವಿದ್ದರೂ, ಸ್ಪಷ್ಟ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಿಲ್ಲ.  ಕರಾವಳಿ, ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಒಕ್ಕಲಿಗ ಸಮುದಾಯ ಪ್ರಬಲವಾಗಿರುವ ದಕ್ಷಿಣ ಕರ್ನಾಟಕ ಭಾಗದಲ್ಲಿ  ತನ್ನ ಶಕ್ತಿಯನ್ನು ಬಲಗೊಳಿಸಲು ಸಾಧ್ಯವಾಗಿಲ್ಲ ಎಂಬ ಬೇಸರ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ  ಮೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಯಕರ ಹುಡುಕಿ: ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿ ಕೋರ್‌ ಕಮಿಟಿ ಸಭೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟಾರ್ಗೆಟ್‌ 150 ತಲುಪಲು ಬೇಕಿರುವ ಕಾರ್ಯತಂತ್ರದ ಕುರಿತು ಕೋರ್‌ ಕಮಿಟಿ ಸದಸ್ಯರಿಂದ ಬ್ಲೂ ಪ್ರಿಂಟ್‌ ನೀಡುವಂತೆ ಸೂಚಿಸಿದ್ದು, ಪ್ರಮುಖವಾಗಿ ಹಳೆ ಮೈಸೂರು ಭಾಗದಲ್ಲಿ  ಒಕ್ಕಲಿಗ ಸಮುದಾಯವನ್ನು ಬಿಜೆಪಿ ಕಡೆ ಸೆಳೆಯಲು ಅಗತ್ಯ ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಹಳೆ ಮೈಸೂರು ಭಾಗದಲ್ಲಿ  ಒಕ್ಕಲಿಗ ಸಮುದಾಯವನ್ನು ಸೆಳೆಯಬಲ್ಲ  ಆ ಸಮುದಾಯದ ನಾಯಕರನ್ನು ಹುಡುಕುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಯಕತ್ವಕ್ಕಾಗಿ ಕಸರತ್ತು:

ರಾಜ್ಯ ಬಿಜೆಪಿಯಲ್ಲಿ  ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಆ ಸಮುದಾಯದ ನಾಯಕರುಗಳ ನಡುವೆ ತೀವ್ರ ಪೈಪೋಟಿಯೂ ನಡೆಯುತ್ತಿದ್ದು, ಪ್ರಮುಖವಾಗಿ ಹಾಲಿ ಸಚಿವರಾಗಿರುವ ಆರ್‌. ಅಶೋಕ್‌, ಡಾ. ಸಿ.ಎನ್‌. ಅಶ್ವತ್ಥ್ ನಾರಾಯಣ, ಡಾ. ಕೆ. ಸುಧಾಕರ್‌, ಬಿಜೆಪಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಜೆಡಿಎಸ್‌ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮುದಾಯದ ನಾಯಕತ್ವ ಗಳಿಸಲು ಪ್ರಯತ್ನಿಸುತ್ತಿದ್ದಾರೆ.

Advertisement

ಕಂದಾಯ ಸಚಿವ ಆರ್‌. ಅಶೋಕ್‌ ಬಿಜೆಪಿಯಲ್ಲಿ ಇರುವ ಒಕ್ಕಲಿಗ ನಾಯಕರಲ್ಲಿ  ಹಿರಿಯರಾಗಿದ್ದು, ಹಲವಾರು ಖಾತೆ ಜವಾಬ್ದಾರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನಿರ್ವಹಿಸಿರುವುದರಿಂದ ಒಕ್ಕಲಿಗ ಸಮುದಾಯದ ನಾಯಕತ್ವ ವಹಿಸಿಕೊಂಡು ಪಕ್ಷಕ್ಕೆ  ಸಮುದಾಯದ ಮತ ಸೆಳೆಯಬಲ್ಲೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಅದಕ್ಕಾಗಿ ಕಾರ್ಯತಂತ್ರವನ್ನೂ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೊಂದೆಡೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ತಮ್ಮ ನಾಯಕತ್ವ ಸಾಬೀತು ಪಡಿಸಲು ಸಾಫ್ಟ್ ಅನ್ನುವ ಹಣೆ ಪಟ್ಟಿಯಿಂದ ಹೊರ ಬಂದು ಪಕ್ಷದಲ್ಲಿ ಸಮುದಾಯದ ನಾಯಕ ಎನ್ನುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ಒಕ್ಕಲಿಗ ಸಮುದಾಯದ ನಾಯಕನೆಂದು ಗುರುತಿಸಿಕೊಳ್ಳುವುದಕ್ಕಿಂತ ಪಕ್ಷದ ನಿಷ್ಠಾವಂತ ಎನ್ನುವುದನ್ನು ಬಿಂಬಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷ ಜವಾಬ್ದಾರಿ ವಹಿಸಿದರೆ ನಿರ್ವಹಿಸಬಲ್ಲೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇವರ ನಡುವೆಯೇ ಕಾಂಗ್ರೆಸ್‌ನಿಂದ ವಲಸೆ ಹೋಗಿ ಆರೋಗ್ಯ ಸಚಿವರಾಗಿರುವ ಡಾ.ಕೆ.ಸುಧಾಕರ್‌, ಮಂಡ್ಯ, ಮೈಸೂರು ಭಾಗದಲ್ಲಿ ಬೇರೆ ಪಕ್ಷಗಳ ನಾಯಕರನ್ನು ಸಂಪರ್ಕಿಸಿ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಈ ಮೂಲಕ ತಾವು ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವ ವಹಿಸಬಲ್ಲೆ ಎನ್ನುವ ಸಂದೇಶ ಸಾರುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜವಾಬ್ದಾರಿ ಕೊಡಿ ನಿಭಾಯಿಸುವೆ:

ಇವರೆಲ್ಲರ ನಡುವೆ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌, ಹಳೆ ಮೈಸೂರು ಭಾಗದಲ್ಲಿ  ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಪರ್ಯಾಯವಾಗಿ ಪಕ್ಷ ಬಲಪಡಿಸಿ, ಒಕ್ಕಲಿಗ ಸಮುದಾಯವನ್ನು ಬಿಜೆಪಿ ಕಡೆಗೆ ಸೆಳೆಯಲು ಪಕ್ಷದಲ್ಲಿ ಜವಾಬ್ದಾರಿ ವಹಿಸುವಂತೆ ಪಕ್ಷದ ಹೈಕಮಾಂಡ್‌ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಆದರೆ, ಈ ಬಗ್ಗೆ ಪಕ್ಷದ ಹೈಕಮಾಂಡ್‌ ಯಾವುದೇ ಸ್ಪಷ್ಟ  ನಿಲುವು ತೆಗೆದುಕೊಂಡಿಲ್ಲ ಎನ್ನಲಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಸೆಳೆಯುವ ನಾಯಕರನ್ನು ಹುಡುಕಿ ಎಂದು ಸೂಚಿಸಿರುವುದು. ರಾಜ್ಯ ಒಕ್ಕಲಿಗ ಬಿಜೆಪಿ ನಾಯಕರಲ್ಲಿ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.

ಶೀತಲ ಸಮರ:

ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರಲ್ಲಿ  ಸಮುದಾಯದ ನಾಯಕತ್ವಕ್ಕಾಗಿ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕಳೆದ ವರ್ಷ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಕ್ಕೆ ಅಶೋಕ್‌ ಅವರನ್ನು ಆಹ್ವಾನಿಸದೇ ಇದ್ದುದರಿಂದ ಸಚಿವ ಅಶ್ವತ್ಥ್ ನಾರಾಯಣ ವಿರುದ್ದ ಅಶೋಕ್‌ ಮುನಿಸಿಕೊಂಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.

ಈಗ ಡಾ. ಸುಧಾಕರ್‌ ಅವರು ಮಂಡ್ಯ, ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸುತ್ತಿರುವುದು ಸಚಿವರಾದ ಅಶೋಕ್‌ ಮತ್ತು ಅಶ್ವತ್ಥ್ ನಾರಾಯಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next