Advertisement

ಕೋಟೆಗೆ ಧ್ವನಿ-ಬೆಳಕು ವ್ಯವಸ್ಥೆ

02:36 PM Sep 28, 2018 | Team Udayavani |

ಚಿತ್ರದುರ್ಗ: ಐತಿಹಾಸಿಕ ಕೋಟೆಗೆ ಆಧುನಿಕ ಬೆಳಕಿನ ವ್ಯವಸ್ಥೆ ಮತ್ತು ಧ್ವನಿವರ್ಧಕಗಳ ಅಳವಡಿಕೆ ಮಾಡುವ ಯೋಜನೆ
ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

Advertisement

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಸರ್ಕಾರಿ ಕಲಾ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಬಹುತೇಕ ಪ್ರವಾಸಿ ತಾಣಗಳಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇದೆ. ಅದನ್ನು ಇಲ್ಲಿನ ಕೋಟೆಗೂ ಅಳವಡಿಸಿ ಐತಿಹಾಸಿಕ ಕೋಟೆಯ ಮಹತ್ವವನ್ನು ರಾಜ್ಯ, ದೇಶ, ವಿದೇಶಿ ಪ್ರವಾಸಿಗರಿಗೆ ತಿಳಿಸಲಾಗುವುದು. ನೆರೆ ರಾಜ್ಯ ಕೇರಳ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕ ಕೂಡ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊರತಾಗಿಲ್ಲ.

ಇಲ್ಲಿ ಅತ್ಯಂತ ವಿಶಿಷ್ಟ ಪ್ರವಾಸಿತಾಣಗಳಿವೆ. ಪಶ್ಚಿಮ ಘಟ್ಟ, ಬಯಲುಪ್ರದೇಶ, ವಿವಿಧ ಜಾತಿಗಳ ಸಂಸ್ಕೃತಿ, ವಿಜಯನಗರ
ಸಾಮ್ರಾಜ್ಯ, ಮೈಸೂರು ಅರಮನೆ, ಚಿತ್ರದುರ್ಗ ಕೋಟೆಯನ್ನು ಒಳಗೊಂಡಂತೆ ವೈವಿಧ್ಯಮಯ ಪ್ರವಾಸಿತಾಣಗಳನ್ನು ಇಲ್ಲಿ ಕಾಣಬಹುದು ಎಂದರು.

“ದೇಶ ಸುತ್ತಬೇಕು ಕೋಶ ಓದಬೇಕು’ ಎನ್ನುವ ಗಾದೆಯಂತೆ ದೇಶ ಸುತ್ತುವುದರಿಂದ ವಿವಿಧ ಸಂಸ್ಕೃತಿ, ಸಹಿಷ್ಣುತೆ, ನಾಗರಿಕತೆಯ ಪರಿಚಯ ಮಾಡಿಕೊಳ್ಳಬಹುದು. ಅಲ್ಲದೆ ಇತರರ ಸಂಸ್ಕೃತಿಯನ್ನು ಗೌರವಿಸಿದಂತಾಗುವುದು. ದೇಶದ ಜಿಡಿಪಿಗೆ ಪ್ರವಾಸೋದ್ಯಮ ಇಲಾಖೆ ಶೇ. 10 ರಷ್ಟು ಕೊಡುಗೆ ನೀಡಿದೆ. ಪ್ರಪಂಚದಲ್ಲಿ 1.3 ಮಿಲಿಯನ್‌ ಜನರು ಪ್ರವಾಸಕ್ಕೆ ತೆರಳುತ್ತಾರೆ. ನಮ್ಮ ದೇಶಕ್ಕೆ ಒಂದು ಕೋಟಿ ಜನರು ಪ್ರವಾಸಕ್ಕೆ ಆಗಮಿಸುತ್ತಾರೆ. ಭಾರತ ದೇಶ ವಿದೇಶಿ ವಿನಿಮಯದಿಂದ ಸುಮಾರು 3 ಬಿಲಿಯನ್‌ ಆದಾಯ ಗಳಿಸುತ್ತಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ಗಣಿ ಪ್ರದೇಶಾಭಿವೃದ್ಧಿ ಯೋಜನೆಯಡಿ 31 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಯವರ ಪ್ರಯತ್ನದಿಂದ ಅದನ್ನು 45 ಕೋಟಿ ರೂ. ರೂ.ಗೆ ಹೆಚ್ಚಿಸಲಾಗಿದೆ. ಏಕೆಂದರೆ ಚಿತ್ರದುರ್ಗಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವುದರಿಂದ ರಸ್ತೆ ನಿರ್ಮಾಣಕ್ಕೆ 50 ಕೋಟಿ ರೂ.ಗಳ ಅಗತ್ಯವಿದೆ ಎಂದು ತಿಳಿಸಿದರು. 

Advertisement

ಚಿತ್ರದುರ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಕಟಿಸಿದ ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಜಿಲ್ಲಾಧಿಕಾರಿಯವರು ಬಿಡುಗಡೆಗೊಳಿಸಿದರು. ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ| ನಂದಿನಿ ದೇವಿ, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಸುಧಾಕರ್‌, ಪ್ರೊ| ನಾಗರಾಜಪ್ಪ, ಗುಡದೇಶ್ವರಪ್ಪ, ರಾಮರಾವ್‌ ಇದ್ದರು.

ಮಾರ್ಗದರ್ಶಕರ ಕೊರತೆ
ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಪ್ರೇಕ್ಷಣೀಯ ಸ್ಥಳಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಮಾಹಿತಿ ನೀಡಲು ಮಾರ್ಗದರ್ಶಕರು (ಗೈಡ್‌) ಲಭ್ಯ ಇರಬೇಕು. ಬಹುತೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಾರ್ಗದರ್ಶಕರ ಕೊರತೆಯಿದೆ. ಹಾಗಾಗಿ ನಿರುದ್ಯೋಗಿಗಳಿಗೆ ತರಬೇತಿ ನೀಡಿದರೆ ಪ್ರವಾಸಿಗರಿಗೆ ಹಾಗೂ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಯವರು ಅಭಿಪ್ರಾಯಪಟ್ಟರು. 

ಪ್ರವಾಸಿ ತಾಣಗಳು ಮತ್ತು ಪ್ರವಾಸಿಗರ ಸುರಕ್ಷತೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಪ್ರವಾಸಿಗರನ್ನು ದೇವರಂತೆ ಕಾಣಬೇಕು. ಅವರಿಗೆ ಮೋಸ ಮಾಡಬಾರದು. ಪ್ರಕೃತಿ ನಾಶವಾದರೆ ಇಡೀ ಜೀವಸಂಕುಲವೇ ನಾಶವಾದಂತೆ. ಹಾಗಾಗಿ ಸ್ವತ್ಛತೆಯ ಮೂಲಕ ಅರಿವು ಮೂಡಿಸಬೇಕು. ಪ್ರವಾಸಿ ತಾಣಗಳಲ್ಲಿ ಸ್ವತ್ಛತೆ ನಿರ್ವಹಣೆ ಮತ್ತು ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next