ಬೆಂಗಳೂರು: ಒಂದು ವರ್ಷ 10 ತಿಂಗಳ ಪುಟಾಣಿ ಬಾಲಕ ಗುಹಾನ್ ಸಿ.ಎಚ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಗಂಜಲಗೋಡು ಗ್ರಾಮದ ಹರೀಶ್ ಜಿ.ಆರ್ ಹಾಗೂ ಚೈತ್ರಾ ದಂಪತಿ ಪುತ್ರ ಚಿಕ್ಕ ವಯಸ್ಸಿನಲ್ಲಿಯೇ ಅಪ್ರತಿಮ ಸಾಧನೆ ಮಾಡಿದ್ದಾನೆ.
ಒಂದು ನಿಮಿಷದಲ್ಲಿ 22 ಪ್ರಾಣಿಗಳ ಧ್ವನಿಯನ್ನು ನಕಲು ಮಾಡುವ ವಿಷಯವಾಗಿ ಗುಹಾನ್ ಸಿ.ಎಚ್ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದೆ. ಜ.10 2022ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಗುಹಾನ್ ಹೆಸರನ್ನು ಇಂಡಿಯಾ ಬುಕ್ ರೆಕಾರ್ಡ್ ಗೆ ಸೇರಿಸಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿ ಪ್ರಾಣಿಗಳ ಧ್ವನಿ ನಕಲು ಮಾಡುವ ದಾಖಲೆ ಗುಹಾನ್ ಹೆಸರಿನಲ್ಲಿ ಸೇರಿದೆ.
ಅಲ್ಲದೆ ಈ ಪುಟ್ಟ ಬಾಲಕ 50 ಪ್ರಾಣಿ ಪಕ್ಷಿಗಳನ್ನು ಗುರುತಿಸಿ ಅವುಗಳ ಹೆಸರನ್ನು ಹೇಳುವುದು, 25 ವಾಹನಗಳ ಹೆಸರು, 20 ದೇಹದ ಅಂಗಗಳ ಹೆಸರು, 10 ಬಣ್ಣಗಳ ಹೆಸರು, 10 ಕೀಟಗಳು ಮತ್ತು ಸರೀಸೃಪಗಳ ಹೆಸರು, 20 ಬಗೆಯ ಆಹಾರ ಪದಾರ್ಥಗಳ ಹೆಸರು, 21 ಹಣ್ಣುಗಳು, 15 ತರಕಾರಿಗಳ ಹೆಸರು, 20 ಅನಿಮೇಷನ್ ಪಾತ್ರಗಳು, ಎ ಟು ಝಡ್ ಇಂಗ್ಲೀಷ್ ವರ್ಣಮಾಲೆಯ ಪದಗಳನ್ನು ಪಟ ಪಟನೆ ಹೇಳುತ್ತಾನೆ.
ಒಂದು ವರ್ಷದ ವಯಸ್ಸಿದ್ದಾಗ ಗುಹಾನ್ ಮನೆ ಹೊರಗಡೆ ಹೋಗುವುದಕ್ಕೆ ಹೆಚ್ಚು ಹಠ ಮಾಡುತ್ತಿದ್ದ. ಮನೆ ಹೊರಗಡೆ ಹೋದಾಗ ಪ್ರಾಣಿಗಳನ್ನು ಕಂಡಾಗ ಧ್ವನಿಯನ್ನು ನಕಲು ಮಾಡುತ್ತಿದ್ದ, ಮನೆಗೆ ಬಂದ ಬಳಿಕವೂ ರೀಪೀಟ್ ಮಾಡುತ್ತಿದ್ದ, ಪ್ರಾಣಿಗಳ ಧ್ವನಿ ಮರೆಯುತ್ತಿರಲಿಲ್ಲ. ನೆನಪಿನ ಶಕ್ತಿಯನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರನ್ನು ಸಂಪರ್ಕಿಸಿದ್ದೆವು. ಅವರು ಇವನ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಿದ್ದಾರೆ ಎಂದು ಗುಹಾನ್ ತಾಯಿ ಚೈತ್ರಾ ಎ.ಎಸ್. ತಿಳಿಸಿದ್ದಾರೆ.
ಇದನ್ನೂ ಓದಿ : ಜಮೀರ್ ಹೇಳಿಕೆಯನ್ನು ಒಪ್ಪುವುದಿಲ್ಲ, ಅವರು ಕ್ಷಮೆ ಕೇಳಬೇಕು: ಡಿ ಕೆ ಶಿವಕುಮಾರ್