Advertisement

ವೊಡಾಫೋನ್‌-ಐಡಿಯಾ ವಿಲೀನ; 2  ವರ್ಷಗಳಲ್ಲೇ “ದಿಗ್ಗಜ’ನ ಜನನ

03:50 AM Mar 21, 2017 | Team Udayavani |

ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ “ಜಿಯೋ’ ಇಡೀ ಮೊಬೈಲ್‌ ಜಗತ್ತನ್ನೇ ತಲ್ಲಣಗೊಳಿಸಿದ ಬೆನ್ನಲ್ಲೇ ದೂರಸಂಪರ್ಕ ವಲಯದಲ್ಲಿ ಅತಿದೊಡ್ಡ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬ್ರಿಟನ್‌ನ ದೂರಸಂಪರ್ಕ ಕಂಪೆನಿ ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ ಮಾಲೀಕತ್ವದ ಐಡಿಯಾ ಸೆಲ್ಯುಲರ್‌ ಕಂಪೆನಿಯು ವಿಲೀನಗೊಂಡು ಹೊಸ ಟೆಲಿಕಾಂ ದಿಗ್ಗಜನ ಹುಟ್ಟಿಗೆ ಕಾರಣವಾಗಲಿದೆ.

Advertisement

ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯನ್ಸ್‌ ಜಿಯೋದ ಪಾರುಪತ್ಯಕ್ಕೆ ಕಡಿವಾಣ ಹಾಕುವಂತೆ, ವೊಡಾಫೋನ್‌ ಮತ್ತು ಐಡಿಯಾ ಕಂಪೆನಿಯು ವಿಲೀನಗೊಳ್ಳುವ ಅಧಿಕೃತ ಘೋಷಣೆ ಸೋಮವಾರ ಹೊರಬಿದ್ದಿದೆ. ಅದರಂತೆ, ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ, ಅಂದರೆ ಇನ್ನೆರಡು ವರ್ಷಗಳಲ್ಲಿ ಹೊಸ ಟೆಲಿಕಾಂ ಕಂಪೆನಿ  ಜನ್ಮತಾಳಲಿದೆ. ಕುಮಾರ ಮಂಗಲಂ ಬಿರ್ಲಾ ಅವರೇ ಈ ನೂತನ ಕಂಪೆನಿಯ ಅಧ್ಯಕ್ಷರಾಗಲಿದ್ದಾರೆ.  

ಬಿರ್ಲಾ ಹಾಗೂ ವೊಡಾಫೋನ್‌ ಸಿಇಒ ವಿಟ್ಟೋರಿಯೋ ಕೊಲಾವೋ ಅವರು ಮುಂಬಯಿನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ವಿಲೀನಗೊಂಡ ಬಳಿಕ ಶೇ.35ರಷ್ಟು ಮಾರುಕಟ್ಟೆ ಪಾಲು ಹೊಂದುವ ಮೂಲಕ ವೊಡಾಫೋನ್‌-ಐಡಿಯಾ ಗ್ರೂಪ್‌ ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಷ್ಟೇ ಅಲ್ಲ, ಈ ನಿರ್ಧಾರವು ಎರಡೂ ಕಂಪೆನಿಗಳಿಗೆ ಹೊಸ ದರ ಸಮರವನ್ನು ಎದುರಿಸುವ ಶಕ್ತಿಯನ್ನೂ ನೀಡಲಿದೆ.

ಷೇರುಗಳ ಕಥೆಯೇನು?: ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವಾಗ ಹೊಸ ಕಂಪೆನಿಯಲ್ಲಿ ವೊಡಾಫೋನ್‌ ಶೇ.45.1 ಷೇರುಗಳನ್ನು ಹೊಂದಿರಲಿದೆ. ಶೇ.4.9ರಷ್ಟು ಷೇರುಗಳನ್ನು 3,874 ಕೋಟಿ ರೂ.ಗೆ ಆದಿತ್ಯ ಬಿರ್ಲಾ ಗ್ರೂಪ್‌ಗೆ ವರ್ಗಾಯಿಸಲಿದೆ. ಐಡಿಯಾ ಕಂಪೆನಿಯು ಶೇ.26ರಷ್ಟು ಷೇರುಗಳನ್ನು ಪಡೆಯಲಿದೆ. ಉಳಿದ ಷೇರು ಗಳಿಗೆ ಸಾರ್ವಜನಿಕ ಷೇರುದಾರರೇ ಮಾಲೀಕರಾಗಿರುತ್ತಾರೆ. ಆದರೆ, ಇಂಡಸ್‌ ಟವರ್ಸ್‌ನಲ್ಲಿರುವ ವೊಡಾಫೋನ್‌ನ ಶೇ.42 ಷೇರುಗಳು ಮಾತ್ರ ಇದರಿಂದ ಹೊರತಾಗಿರಲಿದೆ. 

2ನೇ ಸ್ಥಾನಕ್ಕಿಳಿಯುವ ಏರ್‌ಟೆಲ್‌: 204.68 ದಶಲಕ್ಷ ಗ್ರಾಹಕರನ್ನು ಹೊಂದಿರುವ ವೊಡಾಫೋನ್‌ ಶೇ.18.16ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಐಡಿಯಾವು ಶೇ.16.9 ಮಾರುಕಟ್ಟೆ ಪಾಲಿನ ಮೂಲಕ 190.51 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಇನ್ನೊಂದೆಡೆ, 265.85 ದಶಲಕ್ಷ ಗ್ರಾಹಕರು ಹಾಗೂ ಶೇ.23.58 ಮಾರುಕಟ್ಟೆ ಪಾಲು ಹೊಂದಿರುವ ಏರ್‌ಟೆಲ್‌ ಸದ್ಯಕ್ಕೆ ಆದಾಯ ಮತ್ತು ಗ್ರಾಹಕರ ಬೇಸ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಸಿಎಲ್‌ಎಸ್‌ಎ ವರದಿ ಪ್ರಕಾರ, ಈಗಿನ ವಿಲೀನ ಪ್ರಕ್ರಿಯೆಯಿಂದ ಹುಟ್ಟುವ ಹೊಸ ಸಂಸ್ಥೆಯು 80 ಸಾವಿರ ಕೋಟಿ ರೂ. ಆದಾಯ ಗಳಿಸಲಿದ್ದು, 40 ಕೋಟಿ ಗ್ರಾಹಕರೊಂದಿಗೆ ಶೇ.43 ಆದಾಯದ ಪಾಲು ಮತ್ತು ಶೇ.40ರಷ್ಟು ಸಕ್ರಿಯ ಗ್ರಾಹಕರನ್ನು ಪಡೆಯುವ ಮೂಲಕ ಹೊಸ ದಾಖಲೆ ಮಾಡಲಿದೆ. 

Advertisement

ಪರಿಣಾಮಗಳೇನು?
ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿರುವ ವೊಡಾಫೋನ್‌ ಮತ್ತು ಐಡಿಯಾ ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲಿ ನಂ.1 ಸ್ಥಾನಕ್ಕೇರಲಿವೆ. ಪ್ರಸ್ತುತ ನಂ.1 ಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್‌ ಎರಡನೇ ಸ್ಥಾನಕ್ಕೆ ಇಳಿಯಲಿದೆ.

ಎರಡೂ ಸಂಸ್ಥೆಗಳ ಜಂಟಿ ಗ್ರಾಹಕರ ಸಂಖ್ಯೆ 40 ಕೋಟಿಗೇರಲಿದೆ. ಸದ್ಯಕ್ಕೆ ಏರ್‌ಟೆಲ್‌ಗೆ 27 ಕೋಟಿ, ಜಿಯೋಗೆ 7.2 ಕೋಟಿ ಗ್ರಾಹಕರಿದ್ದಾರೆ.

ವಿಲೀನಗೊಂಡ ಕಂಪೆನಿ ಸಾಕಷ್ಟು ಸಂಪನ್ಮೂಲ ಹೊಂದಿರುವ ಕಾರಣ, ದರ ಸಮರವು ತಾರಕಕ್ಕೇರಲಿವೆ. ಆಗ ಗ್ರಾಹಕರೇ ರಾಜನಾಗುವುದು ಖಚಿತ. ಏಕೆಂದರೆ, ಎಲ್ಲ ಕಂಪೆನಿಗಳೂ ಅಗ್ಗದ ದರದಲ್ಲಿ ಕರೆ, ಸಂದೇಶ ಹಾಗೂ ಡಾಟಾ ಸೇವೆಯನ್ನು ನೀಡಲಿವೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲ ಹೆಚ್ಚು.

ಕಂಪೆನಿಗಳು ಒಂದೆರಡು ವರ್ಷಗಳ ಕಾಲ ದರ ಸಮರದಲ್ಲಿ ಹೋರಾಟಕ್ಕಿಳಿಯಬಹುದು. ಆದರೆ, ದೀರ್ಘ‌ಕಾಲದಲ್ಲಿ ಮತ್ತೆ ದರ ಏರಿಕೆಯಾಗಬಹುದು. ಈ ವಲಯದಲ್ಲಿನ ಕಂಪೆನಿಗಳ ಸಂಖ್ಯೆ ಕಡಿಮೆಯಿರುವ ಕಾರಣ, ದರದ ವಿಚಾರದಲ್ಲಿ ಅವುಗಳೇ ಒಮ್ಮತಕ್ಕೆ ಬರಬಹುದು. 

ಈ ಕ್ರೋಡೀಕರಣವು ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟೆಲಿಕಾಂ ವಲಯಕ್ಕೆ ಆಕ್ಸಿಜನ್‌ ಆಗಲಿದೆ. ವಿಲೀನ ಪ್ರಕ್ರಿಯೆಗಳಿಂದಾಗಿ ಕೊನೆಗೆ ಮೂರೇ ಕಂಪೆನಿಗಳು ಉಳಿಯುವ ಕಾರಣ, ಸ್ಪರ್ಧೆಗಳು ಕಡಿಮೆಯಾಗಿ, ಆದಾಯ ಹೆಚ್ಚಲಿವೆ.

ವೊಡಾಫೋನ್‌-ಐಡಿಯಾ ವಿಲೀನದಿಂದಾಗಿ ದೇಶಾದ್ಯಂತ ಸಂಪನ್ಮೂಲಗಳ ಸಂಖ್ಯೆ ಹೆಚ್ಚಾಗುವ ಕಾರಣ, ಹಲವರು ಕೆಲಸ ಕಳೆದುಕೊಳ್ಳಬಹುದು

ಈ ವಲಯದಲ್ಲಿ ಪೈಪೋಟಿ ಹೆಚ್ಚುವುದರಿಂದ, ಗ್ರಾಹಕರಿಗೆ ಗುಣಮಟ್ಟದ ಸೇವೆಗಳು ಸಿಗಬಹುದು. 

ಭಾರತದಲ್ಲಿ ಶೀಘ್ರವೇ 5ಜಿ ಸೇವೆ
ಐಡಿಯಾ-ವೊಡಾಫೋನ್‌ ವಿಲೀನದಿಂದ ಹುಟ್ಟುವ ಹೊಸ ಕಂಪೆನಿಯು ಆದಷ್ಟು ಬೇಗ ಭಾರತದಲ್ಲಿ 5ಜಿ ಸೇವೆ ಒದಗಿಸಲಿದೆ ಎಂದು ವೊಡಾಫೋನ್‌ ಪಿಎಲ್‌ಸಿ ಸಿಇಒ ವಿಟ್ಟೋರಿಯೋ ಕೊಲಾವೋ ಹೇಳಿದ್ದಾರೆ. ಜತೆಗೆ, ದೇಶದಲ್ಲಿ 4ಜಿ ಸೇವೆಯ ಲಭ್ಯತೆಯನ್ನು ಹೆಚ್ಚಿಸುವುದಾಗಿ ಹಾಗೂ ಅತ್ಯುತ್ತಮ ದರ್ಜೆಯ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ರೋಮಿಂಗ್‌ ಸೇವೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next