ಹೊಸದಿಲ್ಲಿ: ಟೆಲಿಫೋನ್ ಕ್ಷೇತ್ರದಲ್ಲಿ ನಡೆಯುತ್ತಿದ್ದ ದರ ಸಮರದಿಂದ ಗ್ರಾಹಕರು ಒಂದು ನೆಟ್‌ವರ್ಕ್‌ನಿಂದ ಮತ್ತೂಂದು ನೆಟ್‌ವರ್ಕ್ ಬದಲಾಗುತ್ತಿದ್ದು, 7.37 ಲಕ್ಷ ಬಳಕೆದಾರರು ಬಿಎಸ್‌ಎನ್‌ಎಲ್ ನತ್ತ ಮುಖಮಾಡಿದ್ದಾರೆ ಎಂದು ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್ ಮಾಹಿತಿ ನೀಡಿದೆ.
ಟೆಲಿಫೋನ್ ಇಂಡಸ್ಟ್ರೀಯಲ್ಲಿ ದರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಬದಲಾವಣೆಗಳು ನಡೆಯುತ್ತಿದ್ದು, ಗ್ರಾಹಕರು ಬೆಸ್ಟ್ ನೆಟ್‌ವರ್ಕ್ ಆಯ್ಕೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನಲೆ ಸಂಕಷ್ಟದಲ್ಲಿದ್ದ ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಬಳಕೆದಾರರ ಸಂಖ್ಯೆ ಏರಿಕೆಯಾಗಿದ್ದು, 11.69 ಕೋಟಿಗೆ ತಲುಪಿದೆ.
ದೇಶ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಾದ ವೊಡಾಫೋನ್- ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು ಸೆಪ್ಟೆಂಬರ್ ತಿಂಗಳಲ್ಲಿ 49 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದ್ದು, ಇದೇ ಸಮಯದಲ್ಲಿ ರಿಲಯನ್ಸ್ ಜಿಯೋಗೆ 69.83 ಲಕ್ಷ ಹೊಸ ಬಳಕೆದಾರರು ಸೇರ್ಪಡೆ ಆಗಿದ್ದಾರೆ ಎಂದು ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್ ಮಾಹಿತಿ ನೀಡಿದೆ.
ದೇಶದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಒಟ್ಟು 117.1 ಕೋಟಿ ಇದ್ದ ವೈರ್‌ಲೆಸ್ ಚಂದಾದಾರರ ಸಂಖ್ಯೆ (ಜಿಎಸ್‌ಎಂ, ಸಿಡಿಎಂಎ ಮತ್ತು ಎಲ್‌ಟಿಇ) ಸೆಪ್ಟೆಂಬರ್ ಅಂತ್ಯದ ವೇಳೆಗೆ 117.37 ಕೋಟಿಗೆ ಏರಿಕೆಯಾಗುವ ಮೂಲಕ ಮಾಸಿಕ ವರದಿಯಲ್ಲಿ ಶೇ.0.23 ರಷ್ಟು ಬೆಳವಣಿಗೆ ಕಾಯ್ದುಕೊಂಡಿದೆ. ನಗರ ಪ್ರದೇಶಗಳಲ್ಲಿ ವೈರ್‌ಲೆಸ್ ಚಂದಾದಾರಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ 65.91 ಕೋಟಿಗೆ ಇಳಿದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ 51.45 ಕೋಟಿಗೆ ಏರಿಕೆಯಾಗಿದೆ.ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್‌ನಲ್ಲಿ 23.8 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದ್ದು, 32.55 ಕೋಟಿಗೆ ಬಂದು ನಿಂತಿದೆ. ವೊಡಾಫೋನ್- ಐಡಿಯಾ 25.7 ಲಕ್ಷ ಬಳಕೆದಾರರನ್ನು ಕಳೆದುಕೊಳ್ಳುವ ಮೂಲಕ 37.24 ಕೋಟಿಗೆ ತಲುಪಿದೆ.
ಇದೇ ಅವಧಿಯಲ್ಲಿ ರಿಲಯನ್ಸ್ ಜಿಯೋ 69.83 ಲಕ್ಷ ಬಳಕೆದಾರರನ್ನು ಹೊಂದುವ ಮೂಲಕ 35.52 ಕೋಟಿಗೆ ಏರಿದೆ. ಸೆಪ್ಟೆಂಬರ್ 30ರ ಹೊತ್ತಿಗೆ ವೊಡಾಫೋನ್- ಐಡಿಯಾ ಮಾರುಕಟ್ಟೆಯಲ್ಲಿ ಶೇ.31.73 ರಷ್ಟು ಚಂದಾದಾರರ ಪಾಲನ್ನು ಹೊಂದಿದ್ದರೆ, ಜಿಯೋ ಶೇ 30.26 ರಷ್ಟು ಮತ್ತು ಭಾರ್ತಿ ಏರ್‌ಟೆಲ್ ಶೇ.27.74 ರಷ್ಟನ್ನು ಪಾಲು ಹೊಂದಿದೆ.
ಸರಕಾರಿ ಸ್ವಾಮ್ಯದ ಎಂಟಿಎನ್‌ಎಲ್ 33.93 ಲಕ್ಷ ಬಳಕೆದಾರರ ಸಂಖ್ಯೆ, 7.37 ಲಕ್ಷ ಬಳಕೆದಾರರನ್ನು ಬಿಎಸ್‌ಎನ್‌ಎಲ್ ಕುಟುಂಬಕ್ಕೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು ಬಳಕೆದಾರರ ಸಂಖ್ಯೆ 11.69 ಕೋಟಿಗೆ ತಲುಪಿದ್ದು, ದೇಶದಲ್ಲಿ ವೈರ್‌ಲೆಸ್ ದೂರವಾಣಿ ದಟ್ಟಣೆ ಆಗಸ್ಟ್ ಅಂತ್ಯದಲ್ಲಿ ಶೇ.88.77 ರಷ್ಟು ಇದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ.88.90ಕ್ಕೆ ಏರಿದೆ ಎಂದು ಟ್ರಾಯ್ ತಿಳಿಸಿದೆ.