Advertisement

Supreme Court: ಮಹಿಳೆಯರ ಬಗೆಗಿನ ಪದಕೋಶ ಶ್ಲಾಘನೀಯ

07:54 PM Aug 17, 2023 | Team Udayavani |

ಮಹಿಳೆಯರ ಹಕ್ಕುಗಳು ಮತ್ತು ಗೌರವ ಕಾಪಾಡುವ ನಿಟ್ಟಿನಲ್ಲಿ ಐತಿಹಾಸಿಕ ದಿನಗಳಿಂದಲೂ ಒಂದಲ್ಲ ಒಂದು ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಅದಕ್ಕೆ ಕೆಲವೊಂದು ಹಂತದಲ್ಲಿ ಉತ್ತಮ ರೀತಿಯಲ್ಲಿ ಸ್ಪಂದನೆ ವ್ಯಕ್ತವಾದರೆ, ಇನ್ನೊಂದು ಹಂತದಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಉದಾಹರಣೆಗಳೂ ಉಂಟು. ಪರಂಪರಾಗತವಾಗಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ, ವ್ಯಂಗ್ಯವಾಗಿ ಆಡುವಂಥ ಮಾತುಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ದೇಶದ ಸುಪ್ರೀಂಕೋರ್ಟ್‌ ಚರಿತ್ರಾರ್ಹವಾದ ಕ್ರಮಗಳನ್ನು ಕೈಗೊಂಡಿದೆ ಎಂದರೆ ತಪ್ಪಾಗಲಾರದು. ನ್ಯಾಯದಾನದ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ಉಲ್ಲೇಖೀಸಬೇಕಾದ ಪದ ಪ್ರಯೋಗದ ಬಗ್ಗೆ ಒಂದು ಪ್ರಯತ್ನ ನಡೆದಿದೆ. ಸತತ ಎರಡು ವರ್ಷಗಳ ಕಾಲ ಈ ಬಗ್ಗೆ ಅಧ್ಯಯನ ನಡೆಸಿ ಯಾವ ಪದ ಪ್ರಯೋಗ ಮಾಡಿದರೆ ಸೂಕ್ತ ಎಂಬುದನ್ನು ನ್ಯಾಯಮೂರ್ತಿಗಳು ಮತ್ತು ಇತರ ಆದ್ಯ ಹಂತಗಳಲ್ಲಿ ಪರಾಮರ್ಶೆ ನಡೆಸಿ ಒಂದು ಕೈಪಿಡಿ ಬಿಡುಗಡೆ ಮಾಡಲಾಗಿದೆ.

Advertisement

“ಹ್ಯಾಂಡ್‌ಬುಕ್‌ ಆನ್‌ ಕಾಂಬಾಟಿಂಗ್‌ ಜೆಂಡರ್‌ ಸ್ಟೀರಿಯೋಟೈಪ್ಸ್‌’ ಎಂಬ ಕೈಪಿಡಿ ಬುಧವಾರ ಲೋಕಾರ್ಪಣೆಗೊಂಡಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂಥ ಒಂದು ಕ್ರಮ ಅತ್ಯಂತ ಸ್ವಾಗತಾರ್ಹವಾದದ್ದು. ಇದು ತೀರಾ ಮೇಲ್ಮಟ್ಟದಲ್ಲಿ ಆಗುತ್ತಿರುವಂಥ ಶ್ಲಾಘನೀಯ ಬದಲಾವಣೆ. ಹಂತ ಹಂತವಾಗಿ ಅದು ಸಮಾಜದ ತೀರಾ ಕೆಳಹಂತದವರೆಗೆ ಗೌರವಯುತ ಪದಪ್ರಯೋಗ ಆಗಲಿದೆ ಎನ್ನುವುದು ಉತ್ತಮ ನಿರೀಕ್ಷೆಯ ವಿಚಾರವೇ ಆಗಿದೆ. ಹೊಸ ಕೈಪಿಡಿಯಲ್ಲಿ ಯಾವ ಶಬ್ದ ಪ್ರಯೋಗ ಸೂಕ್ತ ಎಂಬುದರ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ನ್ಯಾ.ಮೌಸಮಿ ಭಟ್ಟಾಚಾರ್ಯ, ನ್ಯಾ.ಪ್ರತಿಭಾ ಸಿಂಗ್‌, ಪ್ರೊ.ಜುಮಾ ಸೆನ್‌ ನೇತೃತ್ವದಲ್ಲಿ ಸಿದ್ಧಗೊಂಡ ಈ ಕೈಪಿಡಿಯಲ್ಲಿ ಹೊಸ ರೀತಿಯ ಶಬ್ದ ಪ್ರಯೋಗಗಳನ್ನು ನಡೆಸಲಾಗಿದೆ.

“ಸ್ಟ್ರೀಟ್‌ ಸೆಕ್ಷುವಲ್‌ ಹೆರಾಸ್‌ಮೆಂಟ್‌’, “ಟ್ರಾನ್ಸ್‌ ಜೆಂಡರ್‌’, “ಅನ್‌ಮ್ಯಾರೀಡ್‌ ವುಮನ್‌’ ಹೀಗೆ ಹಲವು ಹೊಸ ಪದಗಳನ್ನು ಸೃಷ್ಟಿಸಿ ನ್ಯಾಯದಾನದ ಸಂದರ್ಭದಲ್ಲಿ ಬಳಕೆ ಮಾಡಲು ಹೊಸ ದಾರಿಯನ್ನು ಸುಪ್ರೀಂಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮಾಡಿಕೊಟ್ಟಿದ್ದಾರೆ. ಇದುವರೆಗೆ ವಿವಾಹದ ಬಳಿಕ ಉದ್ಯೋಗಕ್ಕೆ ತೆರಳದೆ ಇರುವ ಮಹಿಳೆಯರನ್ನು “ಹೌಸ್‌ವೈಫ್’ ಎಂದು ಕರೆಯಲಾಗುತ್ತಿತ್ತು.

ಅದಕ್ಕಾಗಿ”ಹೋಮ್‌ ಮೇಕರ್‌’ ಶಬ್ದ ಬಳಸಲು ಸೂಚಿಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯವೇ ಹೌದು. ನಗರ ಪ್ರದೇಶಗಳಲ್ಲಿ ಇರುವ ಮಹಿಳೆಯರಿಗೆ ಇರುವಷ್ಟು ಉದ್ಯೋಗದ ಅವಕಾಶಗಳು ಹೆಚ್ಚಿನ ಸಂದರ್ಭದಲ್ಲಿ ಗ್ರಾಮೀಣ, ಅರೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವರಿಗೆ ಸಿಗುತ್ತಿಲ್ಲ. ಮನೆ ವಾರ್ತೆಯನ್ನೂ ನೋಡಿಕೊಳ್ಳುವುದೂ ಒಂದು ಉದ್ಯೋಗ ಮತ್ತು ಅದು ಗೌರವಯುತ ಜತೆಗೆ ಅಷ್ಟೇ ಜವಾಬ್ದಾರಿಯದ್ದೂ ಆಗಿದೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆಯರ ಹಿರಿಮೆಯನ್ನು ಗೌರವಿಸುವುದು ಆದ್ಯ ಕರ್ತವ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಶತಮಾನಗಳಿಂದ ಇರುವ ಅಭಿಪ್ರಾಯವನ್ನು ಒಂದೇ ಹಂತದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ, ಆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ವತಿಯಿಂದಲೇ ಆರಂಭವಾದದ್ದು ಮೆಚ್ಚತಕ್ಕ ವಿಚಾರ. ಅದು ಕೇವಲ ನ್ಯಾಯಾಲಯಗಳ ಮಟ್ಟದಲ್ಲಿ ಆದರೆ ಸಾಲದು. ಉದ್ಯೋಗ, ಮನೆ ಸೇರಿದಂತೆ ಜೀವನದ ಎಲ್ಲಾ ಹಂತಗಳಲ್ಲೂ ಮನಃಪೂರ್ವಕವಾಗಿ ಅನುಷ್ಠಾನವಾಗಬೇಕಾದದ್ದು ಪ್ರಧಾನವಾಗಬೇಕು. ದೂರದ ನಡಿಗೆಗೆ ಮೊದಲ ಹೆಜ್ಜೆಯೇ ಶ್ರೀಕಾರವೆಂಬಂತೆ ಹಾಲಿ ಇರುವ ಮನಃಸ್ಥಿತಿ ಬದಲಾವಣೆಗೆ ಒಂದು ಹೆಜ್ಜೆ ಮುಂದಿರಿಸಲಾಗಿದೆ. ಅದಕ್ಕೆ ಎಲ್ಲರೂ ಕೈಜೋಡಿಸಿದಾಗ ಆ ಕೈಪಿಡಿಯ ಆಶಯ ಪೂರ್ಣವಾಗಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next