ಮಾಸ್ಕೋ: ನೆರೆಯ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಪರೋಕ್ಷವಾಗಿ ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ಮೇಲಿನ ಅಣ್ವಸ್ತ್ರ ಬಾಂಬ್‌ಗಳ ಪ್ರಯೋಗ ಬಗ್ಗೆ ಪ್ರಸ್ತಾವಿಸಿದ್ದು, ಅಣು ಯುದ್ಧದ ಆತಂಕ ಮೂಡಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ಜತೆಗೆ ಮಾತನಾಡುವಾಗ, ಎರಡನೇ ಮಹಾಯುದ್ಧವನ್ನು ನಿಲ್ಲಿ ಸುವ ಸಲುವಾಗಿ ಜಪಾನ್‌ನ ಎರಡು ಪ್ರಮುಖ ನಗರಗಳಾದ ಹಿರೋ ಶಿಮಾ ಮತ್ತು ನಾಗಸಾಕಿ ಮೇಲೆ ಅಣ್ವಸ್ತ್ರ ಬಾಂಬ್ ಹಾಕಲಾಗಿತ್ತು ಎಂದಿದ್ದಾರೆ. ಆದರೆ ಯುದ್ಧ ನಿಲ್ಲಿಸುವ ಸಲುವಾಗಿ ಪ್ರಮುಖ ನಗರಗಳ ಮೇಲೆ ದಾಳಿ ನಡೆಸ ಬೇಕಾಗಿಲ್ಲ ಎಂದೂ ಪುತಿನ್ ಹೇಳಿದ್ದಾರೆ ಎನ್ನಲಾಗಿದೆ.
ಪುತಿನ್ ಮಾತು ಪಾಶ್ಚಿಮಾತ್ಯ ದೇಶಗಳ ನಾಯಕರ ನಿದ್ದೆಗೆಡಿಸಿದೆ. ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂದು ಆರಂಭದಿಂದಲೂ ಪುತಿನ್ ಹೇಳಿ ಕೊಂಡು ಬಂದಿದ್ದರೂ ಇದನ್ನು ನಂಬಲು ಪಾಶ್ಚಿಮಾತ್ಯ ದೇಶ ಗಳ ನಾಯಕರು ಸಿದ್ಧರಿಲ್ಲ. ಅಲ್ಲದೆ, ಯುದ್ಧದಲ್ಲಿ ಪ್ರಯೋಗಿಸುವ ಸಲುವಾ ಗಿಯೇ ಡರ್ಟಿ ಬಾಂಬ್‌ಗಳನ್ನು ಸಿದ್ಧಪಡಿಸಲಾಗಿದೆ ಎಂಬ ಮಾತು ಗಳೂ ಇವೆ. ಇದರ ಮಧ್ಯೆಯೇ ಹಿರೋಶಿಮಾ, ನಾಗಸಾಕಿ ಪ್ರಸ್ತಾವ ವನ್ನು ಯಾಕೆ ಮಾಡಿದರು ಎಂಬ ಚಿಂತೆಯೂ ಶುರುವಾಗಿದೆ.
ಕಳೆದ ಫೆಬ್ರವರಿಯಲ್ಲಿ ಈ ಯುದ್ಧ ಆರಂಭವಾಗಿದ್ದು, ಈಗಲೂ ಮುಂದು ವರಿದಿದೆ. ಯುದ್ಧದಲ್ಲಿ ರಷ್ಯಾವೇ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ. ಹೀಗಾಗಿ ತನ್ನ ಬಲ ಕಡಿಮೆಯಾದರೆ ಪುತಿನ್ ಅಣ್ವಸ್ತ್ರ ಬಳಸುವ ಆತಂಕವೂ ಇದೆ.