ಎಲ್ಲೆಡೆ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿರುವಂತೆ ಗದಗ ನಗರದಲ್ಲಿ ವಿವಿಂಗ್ ಮಾಸ್ತರರೊಬ್ಬರ ಕಂಪನಿ ವಿರೋಧಿ ಚಟುವಟಿಕೆಗಳಿಂದ ಬ್ರಿಟಿಷ್ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದರು. ತುರ್ತು ಸಮಯದಲ್ಲೇ ರೈಲ್ವೆ ಹಳಿ ತಪ್ಪಿಸುವ ತಂತಿ ಕೀಳುವುದು, ಬಾಂಬ್ ತಯಾರಿಸುವ ಮೂಲಕ ಅಧಿಕಾರಿಗಳ ತಲೆನೋವಿಗೆ ಕಾರಣರಾಗಿದ್ದರು.
1942ರಲ್ಲಿ ಗದುಗಿನ ಎನ್.ಸಿ. ಮಿಲ್ಲಿನಲ್ಲಿ ಶ್ರೀ ಗುಪ್ತ ಎಂಬ ಮಹಾರಾಷ್ಟ್ರದ ಯುವಕರೊಬ್ಬರು ವಿವಿಂಗ್ ಮಾಸ್ತರರಾಗಿದ್ದರು.ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದ ಅವರು, ಸ್ವಾತಂತ್ರ್ಯ ಚಳವಳಿಯತ್ತವಾಲಿದ್ದರು. ಹೋರಾಟಗಾರರನ್ನು ಬೆಂಬಲಿಸುವುದರೊಂದಿಗೆ ಬ್ರಿಟಿಷ್ ಸರಕಾರದ ಸೇವೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದರು.
ರೈಲ್ವೆ ಹಳಿ ತಪ್ಪಿಸುವ, ತಂತಿ ಕೀಳುವುದು, ಸಣ್ಣ ಪ್ರಮಾಣದ ಬಾಂಬ್‌ಗಳನ್ನು ತಯಾರಿಸಿ, “ಮುಟ್ಟದಿರು ಎನ್ನ’ ಎಂಬ ಗೊಂಬೆಗಳನ್ನು ಪೇಟೆಯ ಪ್ರಮುಖಸ್ಥಳಗಳಲ್ಲಿ ಇಡಲಾಗುತ್ತಿತ್ತು. ಈ ಮೂಲಕ ಕಂಪನಿಗೆ ಪರೋಕ್ಷವಾಗಿ ಸ್ಫೋಟಿಸುವ ಬೆದರಿಕೆಯ ಸಂದೇಶ ರವಾನಿಸಲಾಗುತ್ತಿತ್ತು ಎಂಬುದು ಇತಿಹಾಸ.
ಅದಕ್ಕಾಗಿ ವಿವಿಧೆಡೆಯಿಂದ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿ ಶ್ರೀ ಗುಪ್ತೆ ಬಾಂಬ್ ಮುಂದಾಳತ್ವದಲ್ಲಿ ಕೇಶವರಾವ್ ಕುಲ್ಕರ್ಣಿ ಮತ್ತು ಎಫ್.ಜಿ. ಫಡನಿಸ್ ಬಾಂಬ್ ತಯಾರಿಸ ಲಾಗುತ್ತಿತ್ತು. ಅದಕ್ಕಾಗಿ ಇಲ್ಲಿನ ನಗರಸಭೆಯ ಮುನ್ಸಿಪಲ್ ಹೈಸ್ಕೂಲ್‌ನ ಪ್ರಯೋಗಾಲಯ ವನ್ನು ಬಳಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಸುಳಿವು ಪಡೆದ ಬ್ರಿಟಿಷ್ ಅಧಿಕಾರಿಗಳು, ಶ್ರೀ ಗುಪ್ತೆ ಅವರನ್ನು ಬಂಧಿಸಿದ್ದರು. ಆದರೆ ಸೂಕ್ತ ಸಾಕ್ಷಾಧಾರಗಳ ಇಲ್ಲದ ಕಾರಣ ಯಾವುದೇ ರೀತಿ
ಮೊಕದ್ದಮೆ ದಾಖಲಿಸದೇ ಬಿಟ್ಟು ಕಳುಹಿಸಿದ್ದರು.
ಅದಾಗಲೇ ಎಲ್ಲೆಡೆ ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ ಚಳವಳಿ ತೀವ್ರಸ್ವರೂಪ ಪಡೆದಿತ್ತು. ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಬಾಲಗಂಗಾಧರ ತಿಲಕ್ ಸೇರಿದಂತೆ ಅನೇಕ ಮಹನೀಯರು ಗದಗಿಗೆ ಭೇಟಿ ನೀಡಿದ್ದರಿಂದ ಈ ಭಾಗದಲ್ಲಿ ಚಳವಳಿ ಜೋರಾಗಿತ್ತು. ಶ್ರೀ ಗುಪ್ತ ಅವರನ್ನು ಬಿಟ್ಟು ಕಳುಹಿಸಲು ಅದೂ ಒಂದು ಕಾರಣವಾಗಿರಬಹುದು ಎಂದು ನಂಬಲಾಗಿದೆ.
● ವೀರೇಂದ್ರ ನಾಗಲದಿನ್ನಿ