ಕುಂದಾಪುರ: ಹಳೆ ವಿದ್ಯಾರ್ಥಿಗಳ ಮತ್ತು ವಿದ್ಯಾಭಿಮಾನಿಗಳ ಸಹಕಾರದಿಂದ ಈಗಾಗಲೇ ರಜತ ಮಹೋತ್ಸವ, ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡು ಬಂದ ವಿವೇಕೋದಯ ಅನುದಾನಿತ ಹಿ.ಪ್ರಾ. ಶಾಲೆ ಹೊಂಬಾಡಿ ಮಂಡಾಡಿ ಇದರ ವಜ್ರ ಮಹೋತ್ಸವ ಜ.12 ಮತ್ತು 13ರಂದು ನಡೆಯಲಿದೆ.
ಜ. 12ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕ ಹಳೆ ವಿದ್ಯಾರ್ಥಿ ಗಳನ್ನು ಸಮ್ಮಾನಿಸಲಾಗುವುದು. ರಾತ್ರಿ 8ರಿಂದ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಶಾಲಾ ಮಕ್ಕಳಿಂದ ಪನ್ನದಾಸಿ ನಾಟಕ ಹಾಗೂ ಹಳೆ ವಿದ್ಯಾರ್ಥಿಗಳಿಂದ ರಾಜಾ ವತ್ಸಾಖ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜ. 13ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ವಹಿಸಲಿದ್ದು, ಇದೇ ಸಂದರ್ಭದಲ್ಲಿ ಸಾಧಕ ಹಳೆ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಗುವುದು. ಅನಂತರ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿನೋದಾವಳಿ, ನಾಟಕ ಪ್ರದರ್ಶನಗೊಳ್ಳಲಿವೆ ಎಂದು ಶಾಲಾ ಸಂಚಾಲಕ ಎಸ್. ದಿನಕರ ಶೆಟ್ಟಿ, ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ರತ್ನಾಕರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್. ದಿನಕರ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ನರಸಿಂಹ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಕೆ. ರಘುರಾಮ ಶೆಟ್ಟಿ, ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಕಾಳಾವರ ಉದಯಕುಮಾರ್ ಶೆಟ್ಟಿ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ನಾಗೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.
15 ಲಕ್ಷ ರೂ. ಯೋಜನೆ
ವಿದ್ಯಾಸಂಸ್ಥೆಗೆ 60 ವರ್ಷ ತುಂಬಿದ ಪ್ರಯುಕ್ತ ವಜ್ರಮಹೋತ್ಸವದ ಸವಿನೆನಪಿಗಾಗಿ ಶಾಲಾ ವಾಹನದ ವ್ಯವಸ್ಥೆ, ವಿದ್ಯಾನಿಧಿಗೆ ಶಾಶ್ವತ ನಿಧಿ, ಶಾಲಾ ದುರಸ್ತಿ, ಶಾಲೆಗೆ ಬಣ್ಣ ಹೀಗೆ ಒಟ್ಟು 15 ಲಕ್ಷ ರೂ.ಗಳ ಯೋಜನೆ ಹಾಕಿಕೊಳ್ಳಲಾಗಿದೆ.