ಯಾದಗಿರಿ: ವಿವೇಕಾದನಂದರು ದೇಶದ ಆಧ್ಯಾತ್ಮದ ಶಕ್ತಿಯಾಗಿ ಮೆರೆದವರು ಎಂದು ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಗುರುಮಠಕಲ್ ಪಟ್ಟಣದ ಸರಕಾರಿ ಪಿ.ಯು. ಕಾಲೇಜು ಆವರಣದಲ್ಲಿ ಯಾದಗಿರಿಯ ಶ್ರೀರಾಮ ಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ವಿವೇಕ ಜಯಂತಿ ಪ್ರಯುಕ್ತ ನಡೆಸಿದ ವಿವೇಕ ಸಪ್ತಾಹದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿವೇಕಾನಂದರು ಈ ದೇಶ ಕಂಡ ಮಹಾನ್ ಸನ್ಯಾಸಿಯಾಗಿದ್ದು, ಅವರ ಅಖಂಡ ಶಕ್ತಿಯಿಂದ ಈ ದೇಶದ ಸಂಸ್ಕೃತಿ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಧೀರ ಸನ್ಯಾಸಿ ಎಂದು ಹೇಳಿದರು.
ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಎಂ. ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರ ತತ್ವಗಳನ್ನು ಬರಿ ಕೇಳುವುದಷ್ಟೇ ಅಲ್ಲದೇ ಜೀವನದಲ್ಲಿ ಅನುಷ್ಠಾನಗೊಳಿಸಿದಲ್ಲಿ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಉಪನ್ಯಾಸಕ ಮಲ್ಲಯ್ಯ ಮಠಪತಿ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ವೇಣುಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನ 6 ಹೋಬಳಿಗಳಾದ ಯರಗೋಳ, ರಾಮಸಮುದ್ರ, ಹತ್ತಿಕುಣಿ, ಬಳಿಚಕ್ರ, ಕೊಂಕಲ್, ಸೈದಾಪುರಗಳಲ್ಲಿ ಸಪ್ತಾಹದ ಅಂಗವಾಗಿ ವಿವೇಕಾನಂದರ ಜೀವನ ಚರಿತ್ರೆ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂತರಕಾಲೇಜು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇಂಪಿರಿಯಲ್
ಕಾಲೇಜು, ಬಾಲಕಿಯರ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಬಹುಮಾನ ಪಡೆದರು. ನಾಗೇಶ, ಅಕ್ಷತಾ, ವೆಂಕಟರೆಡ್ಡಿ ಚಂದುಲಾಲ್ ಚೌಧರಿ ಇದ್ದರು. ಕಲ್ಪನಾ ಅನ್ನಮ್ಮ ಪ್ರಾರ್ಥಿಸಿದರು. ಮಹೇಶ್ವರಿ ಸ್ವಾಗತಿಸಿದರು.
ಚಂದ್ರಕಲಾ ವಂದಿಸಿದರು.