ಮುದ್ದೇಬಿಹಾಳ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ಯುವ ಬ್ರಿಗೇಡ್ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಆಚರಣೆ ಹಾಗೂ ರಾಜ್ಯಮಟ್ಟದ ಅಟಲ್‌ಬಿಹಾರಿ ವಾಜಪೇಯಿ ಕಬಡ್ಡಿ ಪಂದ್ಯಾವಳಿ ಸಮಾರೋಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಬಾಗಲಕೋಟೆ ಜಿಲ್ಲೆ ಬೆಣ್ಣೂರ ಗ್ರಾಪಂ ಅಧ್ಯಕ್ಷೆ, ಮುದ್ದೇಬಿಹಾಳ ಬಿಜೆಪಿ ಮಹಿಳಾ ನಾಯಕಿ ಕಾಶೀಬಾಯಿ ಬಿರಾದಾರ ಅವರು 26 ಬಡವರು ಮತ್ತು ವಿಧವೆಯರಿಗೆ ಉಚಿತವಾಗಿ ಬಟ್ಟೆ, ಆಹಾರ ಧಾನ್ಯ ವಿತರಿಸಿದರು. ಇದೇ ವೇಳೆ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಚಿನ್ಮಯೇಶ್ವರ ಕಬಡ್ಡಿ ತಂಡ ಕೊಣ್ಣೂರ, ದ್ವಿತೀಯ ಸ್ಥಾನ ಪಡೆದ ಅಗಸಬಾಳ ಕಬಡ್ಡಿ ತಂಡ ಮತ್ತು ತೃತೀಯ ಬಹುಮಾನ ಪಡೆದ ವಿಶ್ವ ಹಿಂದೂ ಪರಿಷತ್ ಕಬಡ್ಡಿ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಮುದ್ದೇಬಿಹಾಳ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ ಕೂಚಬಾಳ, ವಿಶ್ವಗುರು ಬಸವಣ್ಣನ ಅನುಯಾಯಿಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಡಾ| ಬಸವರಾಜ ಅಸ್ಕಿ, ಬಿಜೆಪಿ ಮಹಿಳಾ ನಾಯಕಿ ಕಾಶೀಬಾಯಿ ರಾಂಪುರ, ಬಿಜೆಪಿ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಎಂ.ಎಸ್. ಪಾಟೀಲ ಅವರು ಸ್ವಾಮಿ ವಿವೇಕಾನಂದ, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರಿತು ಮತ್ತು ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದರು.
ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಮೂರ್ತಿ ಶ್ರೀನಾಥಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಮಹಾದೇವಿ ಗಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಗುರುಬಾಯಿ ನಾಯ್ಕೋಡಿ, ಗ್ರಾಪಂ ಅಧ್ಯಕ್ಷೆ ಲಾಲಬಿ ವಾಲೀಕಾರ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷೆ ಕಲಾವತಿ ಆಲೂರ, ಪದಾಧಿಕಾರಿಗಳಾದ ಯಲಗೂರೇಶ ನಾಯ್ಕೋಡಿ, ಶಿವಾನಂದ ಆಲೂರ, ಶಶಿಕುಮಾರ ದಡ್ಡೇಣ್ಣವರ, ಪರಶುರಾಮ ಮೇಲಿನಮನಿ, ಶ್ರೀಶೈಲ ಬೆಕಿನಾಳ, ಆಕಾಶ ಹತ್ತೂರ, ಶಿವಲಿಂಗ ಸಾತಿಹಾಳ, ಶಿವಾನಂದ ಹತ್ತೂರ, ದ್ಯಾಮಣ್ಣ ಮಾದರ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ವಿವೇಕಾನಂದರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ನಡೆಸಲಾಯಿತು. ರಮೇಶ ಆಲೂರ ನಿರೂಪಿಸಿದರು.