ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ PM Narendra Modi ಬಯೋಪಿಕ್ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಮೋದಿ ಪಾತ್ರವನ್ನು ವಹಿಸಲಿದ್ದಾರೆ.
ಈಚೆಗೆ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿರುವ ಒಬೆರಾಯ್ ಅವರು ಮೋದಿ ಬಯೋಪಿಕ್ ಚಿತ್ರದಲ್ಲಿ ಮೋದಿ ಪಾತ್ರವನ್ನು ವಹಿಸುವರೆಂಬ ಸುದ್ದಿಯನ್ನು ಖ್ಯಾತ ಚಿತ್ರ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಮೇರಿ ಕೋಮ್ ಬಯೋಪಿಕ್ ನಿರ್ದೇಶಿಸಿದ್ದ ಉಮಂಗ್ ಕುಮಾರ್ ಮೋದಿ ಬಯೋಪಿಕ್ ಚಿತ್ರವನ್ನು ನಿರ್ದೇಶಿಸಲಿದ್ದು, ಸಂದೀಪ್ ಸಿಂಗ್ ನಿರ್ಮಿಸಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಇದೇ ಜನವರಿ 7ರಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಇದೇ ಜನವರಿ ತಿಂಗಳ ಮಧ್ಯ ಭಾಗದಿಂದ ಆರಂಭವಾಗಲಿದೆ ಎಂದು ತರಣ್ ಆದರ್ಶ್ ತಿಳಿಸಿದ್ದಾರೆ.
ಉಮಂಗ್ ಕುಮಾರ್ ಅವರ ತಾಜಾ ನಿರ್ದೇಶನದ ಚಿತ್ರ ಭೂಮಿ. ಇದರಲ್ಲಿ ಸಂಜಯ್ ದತ್ ಮತ್ತು ಆದಿತಿ ರಾವ್ ಹೈದರಿ ನಟಿಸಿದ್ದಾರೆ. ಈ ಚಿತ್ರವನ್ನು ದತ್ ಅವರ ಪುನರಾಗಮನದ ಚಿತ್ರವೆಂದು ಬಣ್ಣಿಸಲಾಗಿದೆ.
ಮೋದಿ ಬಯೋಪಿಕ್ ಚಿತ್ರಕ್ಕೆ “ಪಿಎಂ ನರೇಂದ್ರ ಮೋದಿ’ ಎಂದು ಹೆಸರಿಡಲಾಗಿದೆ.