ಮುಂಬಯಿ: 68ನೇ ಫಿಲ್ಮ್ ಫೇರ್ ಅವಾರ್ಡ್ಸ್ ಗುರುವಾರ (ಎ.27) ರಂದು ಮುಂಬೈಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಅದ್ಧೂರಿ ಕಾರ್ಯಕ್ರಮ ಬಾಲಿವುಡ್ ಸಜ್ಜಾಗಿದೆ.
ಫಿಲ್ಮ್ ಫೇರ್ ನಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ 7 ವಿಭಾಗದಲ್ಲಿ ನಾಮಿನೇಟ್ ಆಗಿದೆ. ಆದರೆ ಈ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರ್ದೇಶಕರು ನಿರಾಕರಿಸಿರುವುದು ಇದೀಗ ಬಿಟೌನ್ ನಲ್ಲಿ ಸುದ್ದಿಯಾಗಿದೆ.
ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ “68ನೇ ಫಿಲ್ಮ್ ಫೇರ್ ನಲ್ಲಿ 7 ವಿಭಾಗದಲ್ಲಿ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ನಾಮಿನೇಟ್ ಆಗಿರುವುದನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಈ ಪ್ರಶಸ್ತಿಗಳನ್ನು ನಾನು ನಯಾವಾಗಿ ತಿರಸ್ಕರಿಸುತ್ತೇನೆ. ಫಿಲ್ಮ್ ಫೇರ್ ಪ್ರಕಾರ ಸ್ಟಾರ್ ಗಳ ಮುಖವೇ ಮುಖ್ಯ ಹೊರತು ಬೇರೆ ಯಾರೂ ಕೂಡ ಮುಖ್ಯವಲ್ಲ. ದಿಗ್ಗಜ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ, ಸೂರಜ್ ಆರ್. ಬರ್ಜತ್ಯಾ, ಅನೀಸ್ ಬಾಜ್ಮೀ ರಂತಹವರ ಮುಖ ಮುಖ್ಯವಲ್ಲ. ಫಿಲ್ಮ್ ಫೇರ್ ಗೆ ಸಂಜಯ್ ಲೀಲಾ ಬನ್ಸಾಲಿ ಅವರು ಆಲಿಯಾರಂತೆ, ಸೂರಜ್ ಅವರು ಬಚ್ಚನ್ ರಂತೆ ಕಾಣುತ್ತಾರೆ. ಅನೀಸ್ ಬಾಜ್ಮೀ ಅವರು ಕಾರ್ತಿಕ್ ಆರ್ಯನ್ ರಂತೆ ಕಾಣುತ್ತಾರೆ. ಫಿಲ್ಮ್ ಫೇರ್ ನಿಂದ ನಿರ್ದೇಶಕರಿಗೆ ಘನತೆ ಬರುವುದಿಲ್ಲ. ಆದರೆ ಈ ಅವಮಾನಕರ ವ್ಯವಸ್ಥೆ ಕೊನೆಗೊಳ್ಳಬೇಕು” ಎಂದಿದ್ದಾರೆ.
ಬಾಲಿವುಡ್‌ನ ಭ್ರಷ್ಟ, ಅನೈತಿಕ ಹಾಗೂ ನಾಟಕೀಯತೆಯನ್ನು ನಾನು ಪ್ರತಿಭಟಿಸುತ್ತೇನೆ. ಇದೇ ಕಾರಣವಾಗಿ ನಾನು ಇಂತಹ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಇಂತಹ ಅವಾರ್ಡ್ ಕಾರ್ಯಕ್ರಮಗಳು ಅದು ಬರಹಗಾರರು, ನಿರ್ದೇಶಕರು, ತಾಂತ್ರಿಕ ಸಿಬ್ಬಂದಿಗಳನ್ನು ಕೀಳು ಅಥವಾ ಸ್ಟಾರ್ಸ್ ಗಳ ಗುಲಾಮರಂತೆ ನೋಡುತ್ತವೆ ಎಂದು ಖಾರವಾಗಿ ನುಡಿದಿದ್ದಾರೆ.
ಪ್ರಶಸ್ತಿ ಗೆದ್ದ ಎಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಗೆಲ್ಲದವರಿಗೆ ಹೆಚ್ಚು ಎಂದು ಬರೆದುಕೊಂಡಿದ್ದಾರೆ.