Advertisement
ಬುಧವಾರ ಬೆಳಗ್ಗೆ 11ಕ್ಕೆ ವಿಟ್ಲ ಪ.ಪಂ.ನ ಫೆಬ್ರವರಿ ತಿಂಗಳ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಈ ಸಭೆಗೆ ಪಂ. ಮುಖ್ಯಾಧಿಕಾರಿ ಮಾಲಿನಿ ಅವರನ್ನು ಹೊರತುಪಡಿಸಿ ಕಂದಾಯ ನಿರೀಕ್ಷಕರು, ಎಂಜಿನಿಯರ್ ಹಾಜರಾಗಿರಲಿಲ್ಲ. ಸಭೆ ಆರಂಭಗೊಳ್ಳುತ್ತಿದ್ದಂತೆ ಮಾಜಿ ಅಧ್ಯಕ್ಷ ಅರುಣ್ ಎಂ. ವಿಟ್ಲ, ಸದಸ್ಯ ಶ್ರೀಕೃಷ್ಣ, ರವಿಪ್ರಕಾಶ್ ಅವರು ಅಧಿಕಾರಿಗಳು ಹಾಜರಾಗದಿರಲು ಕಾರಣವೇನು ಪ್ರಶ್ನಿಸಿದರು. ದೂರವಾಣಿ ಕರೆ ಮಾಡಿ ಸಾಮಾನ್ಯ ಸಭೆಗೆ ಆಗಮಿಸಬೇಕೆಂದು ಹೇಳಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿ ಕಚೇರಿಗೆ ತೆರಳಿರುವುದರಿಂದ ಅವರು ಆಗಮಿಸಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.
ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಅಧಿಕಾರಿಗಳು ಇಲ್ಲದಿದ್ದರೆ ಸಭೆ ನಡೆಸುವುದು ಹೇಗೆ? ಸಮಸ್ಯೆ ಯಾರಲ್ಲಿ ಹೇಳುವುದು? ಅವರು ಬಂದ ಬಳಿಕವೇ ಸಭೆ ನಡೆಸಬೇಕು ಎಂದು ಆಗ್ರಹಿಸಿದರು. ಕಳೆದ ಅವಧಿಯಲ್ಲಿ ಎಂಜಿನಿಯರ್, ಕಂದಾಯ ಅಧಿಕಾರಿಗಳು ಇಲ್ಲದೆ ಒಂದೂ ಸಭೆ ಕರೆದಿರಲಿಲ್ಲ. ಇದೀಗ ಅವರು ಗೈರು ಹಾಜರಿದ್ದರೂ ಸಭೆ ಕರೆಯಲಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಸಿಗುತ್ತಿಲ್ಲ. ಸಭೆಯಲ್ಲಿ ಆದರೂ ಸಿಗಲಿ ಎಂಬುದು ನಮ್ಮ ಬೇಡಿಕೆ ಆಗಿದೆ. ಎಂಜಿನಿಯರ್‌ಗೆ ಸದಸ್ಯರು ಕರೆ ಮಾಡಿದರೂ ಅವರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಅರ್ಧ ಗಂಟೆ ವರೆಗೆ ನಾವು ಕಾಯುತ್ತೇವೆ ಅದರೊಳಗಡೆ ಅಧಿಕಾರಿಗಳು ಬಾರದಿದ್ದಲ್ಲಿ ಸಭೆ ಮುಂದೂಡಬೇಕು ಎಂದು ಹೇಳಿ ಬಿಜೆಪಿ ಸದಸ್ಯರು ಹೊರನಡೆದರು. ಮಾ. 1ರಂದು ಸಭೆ
ಸಭೆ ನಡೆಸಲು ಕೋರಂ ಸಮಸ್ಯೆ ಎದುರಾಗಿ, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಅಧಿಕಾರಿಗಳಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಚುನಾವಣೆ ಕರ್ತವ್ಯದಲ್ಲಿದ್ದೇವೆ ಎಂದು ಅವರು ಹೇಳಿದ ಬಳಿಕ ಸಭೆಯನ್ನು ರದ್ದುಗೊಳಿಸಿದರು. ಮಾ.1ರಂದು ಅಪರಾಹ್ನ 3 ಗಂಟೆಗೆ ಸಭೆ ನಡೆಸಲು ತೀರ್ಮಾನಿಸಲಾಯಿತು.