Advertisement

ಶ್ರಮದಾನದಿಂದ ಸ್ವತ್ಛಗೊಂಡ ವಿಠಲವಾಡಿ ಕೆರೆ

10:51 PM Mar 27, 2019 | sudhir |

ಕುಂದಾಪುರ: ಬಿಸಿಲಿನ ಹೊಡೆತಕ್ಕೆ ಅವಶ್ಯಕತೆಗೆ ಬೇಕಾದಷ್ಟು ನೀರು ದೊರೆಯದೇ ಹೋದಾಗ ನೀರಿನ ಮೌಲ್ಯ ನಮಗೆ ಅನುಭವಕ್ಕೆ ಬರುವುದು.

Advertisement

ಇದು ಪ್ರತಿ ವರ್ಷದ ಕತೆಯಾದರೂ, ಜಲಸಂರಕ್ಷಣೆಗೆ ಮನಸ್ಸು ಮಾಡುವವರ ಸಂಖ್ಯೆ ಕಡಿಮೆ. ಹೀಗಿರುವಾಗ ವಿಠಲವಾಡಿ ಕೆರೆಯನ್ನು ಇಲ್ಲಿನ ಯುವಜನರೇ ಶ್ರಮದಾನದ ಮೂಲಕ ಸ್ವತ್ಛಗೊಳಿಸಿ ಮರುಜೀವ ಕೊಡುವ ಮೂಲಕ ಮಾದರಿಯಾಗಿದ್ದಾರೆ. ಸ್ವತ್ಛತೆ ಅರಿವು ಇಲ್ಲಿ ಸ್ವತ್ಛತಾ ತಂಡದವರು ವಿಠಲವಾಡಿಯ ಮನೆಮನೆಗೆ ತೆರಳಿ ಸ್ವತ್ಛತೆ ಕುರಿತು ಅರಿವು ಮೂಡಿಸಿ, ಗೇಟಿಗೆ ಫ‌ಲಕ ಅಳವಡಿಸುತ್ತಿದ್ದರು. ಈ ಬಾರಿ ಚಟ್‌ಕೆರೆ ಶ್ರಮದಾನಕ್ಕೆ ನಿರ್ಣಯಿಸಿದರು. ಎರಡು ಮೂರು ಶತಮಾನಗಳ ಇತಿಹಾಸ ಹೊಂದಿದ ಚಟ್‌ಕೆರೆ ಸುಮಾರು 39 ಸೆಂಟ್ಸ್‌ ಜಾಗದ ವಿಸ್ತೀರ್ಣದಲ್ಲಿದ್ದ ಒಂದು ಕಾಲದಲ್ಲಿ ಸುತ್ತಲಿನ ಸುಮಾರು ಒಂದು ಸಾವಿರ ಎಕ್ರೆ ಭತ್ತದ ಬೇಸಾಯಕ್ಕೆ ನೀರುಣಿಸುತ್ತಿತ್ತು. ಈ ವಠಾರದಲ್ಲಿ ಸುಮಾರು 100 ಮನೆಗಳಿದ್ದು ಸುತ್ತಲಿನ ಬಾವಿಗಳಿಗೆ ಸಿಹಿನೀರಿಗೆ ಈ ಕೆರೆಯಲ್ಲಿ ಇಂಗುವ ನೀರೇ ಆಧಾರ. ಅದರಾಚೆ ಬರಿ ಉಪ್ಪುನೀರು. ಉಪಯೋಗ ಕಡಿಮೆಯಾದಂತೆ ಕೆರೆಯಲ್ಲಿ ಹೂಳು ತುಂಬಿತು. ಕಳೆ ತುಂಬಿತು. ಕೆಲವರು ಈ ಕರೆಯನ್ನು ತ್ಯಾಜ್ಯಗುಂಡಿಯಾಗಿಸಿದರು.

ಕಳೆದ ಎರಡು ರವಿವಾರಗಳಲ್ಲಿ ಇಲ್ಲಿನ ವಿಠಲವಾಡಿ ಫ್ರೆಂಡ್ಸ್‌ ಹಾಗೂ ಸ್ಥಳೀಯರು ಸೇರಿಕೊಂಡು ಪುರಸಭಾ ಸದಸ್ಯ ಗಿರೀಶ್‌ ಜಿ.ಕೆ., ಗಣೇಶ್‌, ಅಶೋಕ್‌, ಸ್ನೇಹಜೀವಿ ಯುವಕಮಂಡಲದ ಸ್ಥಾಪಕಾಧ್ಯಕ್ಷ ದಿನೇಶ್‌ ಪುತ್ರನ್‌, ಪತ್ರಕರ್ತ ಜಯಶೇಖರ್‌ ಮಡಪಾಡಿ, ಸ್ವತ್ಛ ವಿಠಳವಾಡಿ ಕಾರ್ಯಕ್ರಮದ ಅಧ್ಯಕ್ಷ ಭರತ್‌, ಗೌರವಾಧ್ಯಕ್ಷ ಸುರೇಶ್‌ ಮೊಗವೀರ, ನಿತಿನ್‌, ಸಂತೋಷ್‌ ಮೊದಲಾದವರ ಸಹಕಾರದೊಂದಿಗೆ ಕೆರೆಯನ್ನು ಸ್ವತ್ಛಗೊಳಿಸಿದ್ದಾರೆ. ಸುಮಾರು 10 ಲೋಡ್‌ ತ್ಯಾಜ್ಯವನ್ನು ಕೆರೆಯಿಂದ ತೆಗೆಯಲಾಗಿದೆ. ಅದರೊಂದಿಗೆ ದಂಡೆಯನ್ನು ಸರಿಪಡಿಸಲಾಗಿದ್ದು, ಚಟ್‌ಕೆರೆಯನ್ನು ಸುಂದರವಾಗಿಸಲಾಗಿದೆ.

ಅನುದಾನ ಇಲ್ಲ
ಸುಮಾರು ಹದಿಮೂರು ವರ್ಷಗಳ ಹಿಂದೆ ಪುರಸಭಾ ಸದಸ್ಯ ಗೋಪಾಲ ಅವರು ಕೆರೆಯ ಒಂದು ಭಾಗಕ್ಕೆ ಶಿಲೆಗಲ್ಲಿನ ಗೋಡೆ ನಿರ್ಮಿಸಲು ಅನುದಾನ ನೀಡಿದ್ದು ಬಳಿಕ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಯಿತು. ಇದೀಗ ಪುರಸಭೆ ಸದಸ್ಯ ಗಿರೀಶ್‌ ಜಿ.ಕೆ. ಅವರು ಸಣ್ಣ ನೀರಾವರಿ ಇಲಾಖೆಗೆ ದುರಸ್ತಿ ಅನುದಾನಕ್ಕೆ ಮನವಿ ಮಾಡಿದ್ದಾರೆ.

ಶ್ರಮದಾನ
ಸ್ಥಳೀಯರು ಸರಕಾರದ ಅನುದಾನಕ್ಕೆ ಕಾಯದೇ ತಾವೇ ಒಟ್ಟಾಗಿ ಸುಮಾರು 35 ಸಾವಿರ ರೂ. ಗಳನ್ನು ಸಂಗ್ರಹಿಸಿ ಸ್ವತ್ಛಗೊಳಿಸಿದ್ದಾರೆ. ಗುತ್ತಿಗೆದಾರ ಗಣೇಶ್‌ ಪೂಜಾರಿ ಅವರು ಕೂಡಾ ದೊಡ್ಡ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೆರೆಯ ಬದಿ ನಿರ್ಮಾಣ ಮತ್ತು ಹೂಳೆತ್ತುವ ಬೇಡಿಕೆ ಇರುವುದಾಗಿಯೂ ಇಲ್ಲಿನ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಚಟ್‌ಕೆರೆ
ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ 6ಕ್ಕೂ ಅಧಿಕ ಕೆರೆಗಳಿದ್ದು ಉಳಿದ ಕೆಲವು ಕೆರೆಗಳು ಒತ್ತುವರಿ, ಇನ್ನು ಕೆಲವು ನಾಪತ್ತೆಯಾಗಿವೆ. ಇರುವ ಕೆರೆಗಳು ಹೂಳು ತುಂಬಿಕೊಂಡಿದ್ದು ವಿಠಲವಾಡಿಯನ್ನು ಸಂಪರ್ಕಿಸುವ ಜೆಎಲ್‌ಬಿ ರಸ್ತೆಯ ಬದಿಯಲ್ಲಿರುವ ಚಟ್‌ಕೆರೆ ಜನರ ಒಗ್ಗಟ್ಟಿನ ಫ‌ಲವಾಗಿ ಚೈತನ್ಯ ಪಡೆದಿದೆ.

ಸ್ವತ್ಛತೆ ಕಾಪಾಡಿ
ಸ್ಥಳೀಯವಾಗಿ ತಿರುಗಾಡುವವರು ಈ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಎಸೆಯದೆ ಕೆರೆಯನ್ನು ಸ್ವತ್ಛವಾಗಿಡಬೇಕು. ನಮ್ಮ ಹಿರಿಯರ ಕಾಲದ ಈ ಕೆರೆಯಿಂದ ನೂರಾರು ಮನೆಗೆ, ಅಂತರ್ಜಲ ಉಳಿವಿಗೆ ಕೊಡುಗೆಯಿದೆ.
-ಗಿರೀಶ್‌ ಜಿ.ಕೆ., ಶ್ರಮದಾನ ತಂಡದ ಪ್ರಮುಖರು

Advertisement

Udayavani is now on Telegram. Click here to join our channel and stay updated with the latest news.

Next