Advertisement

ವಿಟ್ಲ ಮೀನು ಮಾರುಕಟ್ಟೆ ಕಾಮಗಾರಿ ಸ್ಥಗಿತ 

10:34 AM Oct 24, 2018 | Team Udayavani |

ವಿಟ್ಲ : ಇಲ್ಲಿನ ಬೊಬ್ಬೆಕೇರಿಯಲ್ಲಿ ನಿರ್ಮಾಣವಾಗಬೇಕಿದ್ದ 30 ಲಕ್ಷ ರೂ. ವೆಚ್ಚದ ಸುಸಜ್ಜಿತ ಮೀನು ಮಾರುಕಟ್ಟೆ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಯೋಜನೆ ಭರವಸೆ ಕಳೆದುಕೊಂಡಿದೆ. ಪರಿಣಾಮವಾಗಿ ಅವ್ಯವಸ್ಥೆ, ಮೂಗು ಮುಚ್ಚಿಹೋಗುವ ಪರಿಸ್ಥಿತಿ ಉಂಟಾಗಿದೆ.

Advertisement

ಯೋಜನೆ
ಇದು ಕರಾವಳಿ ಅಭಿ ವೃದ್ಧಿ ಪ್ರಾಧಿಕಾರದ ಯೋಜನೆ. 30 ಲಕ್ಷ ರೂ. ಗಳ ಯೋಜನೆಗೆ ಶೇ.5ರಷ್ಟು ಅನುದಾನವನ್ನು ಸ್ಥಳೀಯ ಶಾಸ ಕರು ಒದಗಿಸಿದ್ದಾರೆ. ಅಂದರೆ ಶೇ. 95 ರಷ್ಟು ಅನುದಾನವನ್ನು ಪ್ರಾಧಿಕಾರವೇ ನೀಡಿದೆ. 2016ರ ಎಪ್ರಿಲ್‌ ತಿಂಗಳಲ್ಲಿ ಈ ಯೋಜನೆಗೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ್‌ ಆಳ್ವ ಮತ್ತು ಅಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಈಗ ಇವರಿಬ್ಬರೂ ಮಾಜಿ. ಪ್ರಾಧಿಕಾರದಲ್ಲಿ ನಿವೇದಿತ್‌ ಆಳ್ವ ಅವರ ಬಳಿಕ ಶಾರದಾ ಮೋಹನ ಶೆಟ್ಟಿ ಅಧ್ಯಕ್ಷೆಯಾಗಿದ್ದರೂ ಈಗ ಅವರೂ ಹುದ್ದೆಯಲ್ಲಿಲ್ಲ. ಆದುದರಿಂದ ಈ ಕಾಮಗಾರಿಯ ಪ್ರಗತಿಯ ಹಿಂದೆ ಓಡಾಡ ಬೇಕಾದವರು ಅಲ್ಲಿನ ಅಧಿಕಾರಿಗಳು.

28.50 ಲಕ್ಷ ರೂ. ಬಿಡುಗಡೆ
ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿ ಮುಂದುವರಿಯುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬ ಸತ್ಯ ಇನ್ನೂ ಹೊರಬಿದ್ದಿಲ್ಲ. ಶೇ. 95ರಷ್ಟು ಅನುದಾನ ನೀಡಬೇಕಾದ ಕರಾವಳಿ ಪ್ರಾಧಿಕಾರವು ಗುತ್ತಿಗೆದಾರರಿಗೆ 28.50 ಲಕ್ಷ ರೂ. ಅನುದಾನವನ್ನೂ ಬಿಡುಗಡೆಗೊಳಿಸಿದೆ. ಆದುದರಿಂದ ಪ್ರಾಧಿಕಾರವೇ ಗುತ್ತಿಗೆದಾರರ ಹಿಂದೆ ಬೀಳಬೇಕಾಗಿದೆ. ಆದರೆ ಕೆಆರ್‌ಐಡಿಎಲ್‌ ಈ ಗುತ್ತಿಗೆಯ ಅನುದಾನ ಪಡೆದುಕೊಂಡು ಎರಡೂವರೆ ವರ್ಷಗಳ ಬಳಿಕವೂ ಕಾಮಗಾರಿಯನ್ನು ಪೂರ್ತಿಗೊಳಿಸುತ್ತಿಲ್ಲ.

ಸ್ಥಗಿತಗೊಂಡ ಕಾಮಗಾರಿ
ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದೆ. 1ನೇ ಮಹಡಿಯ ಸ್ಲ್ಯಾಬ್‌ ಕಾಮಗಾರಿ ನಡೆಸಲಾಗಿದೆ. ಬಳಿಕ ಕಟ್ಟಡ ಮೇಲೇರಿಲ್ಲ. ಅತ್ತ ಕಾಮಗಾರಿಯೂ ನಡೆಯದೆ, ಇತ್ತ ಮೀನು ಮಾರುಕಟ್ಟೆಗೆ ಸ್ಥಳಾವಕಾಶವೂ ಇಲ್ಲದೆ ಶೋಚನೀಯ ಸ್ಥಿತಿ ತಲುಪಿದೆ. ಗುತ್ತಿಗೆದಾರರು ಕಾಮಗಾರಿ ಮುಂದುವರಿಸುತ್ತೇವೆ ಎನ್ನುತ್ತಾರೆ ಹೊರತು ಕಾಮಗಾರಿ ಮುಂದುವರಿಸುತ್ತಿಲ್ಲವೆಂದು ಪ್ರಾಧಿಕಾರದ ಅಧಿಕಾರಿಗಳು, ವಿಟ್ಲ ಪ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೆ ಹೇಗಿತ್ತು ? 
ಬೊಬ್ಬೆಕೇರಿ ಕಟ್ಟೆಯ ಸಮೀಪದಲ್ಲಿ ಕಟ್ಟೆಯಿಂದ ವಿಟ್ಲ ಪಂಚಲಿಂಗೇಶ್ವರ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಮೀನು ಮಾರುಕಟ್ಟೆಯಿತ್ತು. ಆದರೆ ಕಟ್ಟಡ ದುಸ್ಥಿತಿಯಲ್ಲಿತ್ತು. ಸುತ್ತಲೂ ಸ್ವತ್ಛವಿರಲಿಲ್ಲ. ಗಬ್ಬುನಾತ ಬೀರುತ್ತಿದ್ದುದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿತ್ತು. ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳ ಬೇಡಿಕೆಯಿತ್ತು. ಅದು ಕೊನೆಗೂ ಈಡೇರಿತು ಎಂಬ ಸಂತಸದಲ್ಲಿದ್ದಾಗಲೇ ಆಮೆವೇಗದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಮೀನು ಮಾರಾಟಗಾರರು, ಗ್ರಾಹಕರು ಹಾಗೂ ಸ್ಥಳೀಯರು ಬೇಸತ್ತಿದ್ದಾರೆ.

Advertisement

ಪ್ರಸ್ತುತ ಸ್ಥಿತಿ
ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ಜಾಗವಿಲ್ಲ. ರಸ್ತೆಬದಿಯಲ್ಲೇ ಮೀನು ವಾಹನಗಳು ನಿಲ್ಲುತ್ತವೆ. ಗ್ರಾಹಕರು ವಾಹನಗಳ ಬಳಿಯೇ ಖರೀದಿಸಬೇಕಾಗುತ್ತದೆ. ಈ ಸಮಯದಲ್ಲಿ ಪಾದಚಾರಿಗಳಿಗೆ ಅಡ್ಡಾಡಲು ಜಾಗವಿಲ್ಲದೆ, ಸ್ವಚ್ಛತೆಯೂ ಇಲ್ಲದೆ ಮೂಗುಮುಚ್ಚಿ ಸಂಚರಿಸುವ ಸ್ಥಿತಿಯಿದೆ.

 ಸ್ಪಂದಿಸುವವರಿಲ್ಲ
ಕೆಆರ್‌ಐಡಿಎಲ್‌ ಅಧಿಕಾರಿಗಳಿಗೆ ಕರೆ ಮಾಡಿ ಕಾಮಗಾರಿಯನ್ನು ಮುಗಿಸಬೇಕೆಂದು ಆಗಾಗ ಹೇಳುತ್ತಿದ್ದೇವೆ. ಜಿಲ್ಲಾಧಿಕಾರಿಗೆ ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ. ಆದರೆ ಅಧ್ಯಕ್ಷರಿಲ್ಲದೇ ನಮ್ಮ ಮಾತನ್ನು ಕೇಳುವವರೇ ಇಲ್ಲವಾಗಿದೆ. ನಮ್ಮ ಮಾತಿಗೆ ಸ್ಪಂದಿಸುವವರಿಲ್ಲ.
– ಪ್ರದೀಪ್‌ ಡಿ’ಸೋಜಾ
ಕಾರ್ಯದರ್ಶಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ

ಉದಯಶಂಕರ್‌ ನೀರ್ಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next