Advertisement

ವಿಟ್ಲ ಹೋಬಳಿ ನಾಡ ಕಚೇರಿ : ಇಲ್ಲಗಳ ಪಟ್ಟಿಯೇ ದೊಡ್ಡದು

10:16 PM Mar 15, 2021 | Team Udayavani |

ವಿಟ್ಲ: ವಿಟ್ಲ ಹೋಬಳಿಯಲ್ಲಿ ಎಲ್ಲ ಸೌಲಭ್ಯವಿರಬೇಕಾದ ನಾಡ ಕಚೇರಿಯಲ್ಲಿ ಈಗ ಇಲ್ಲಗಳ ಸರಮಾಲೆ. ಇರುವ ನೆಮ್ಮದಿ ಕೇಂದ್ರ ವಿದ್ಯುತ್‌ ಕಡಿತದ ಪರಿಣಾಮ ಬಾಗಿಲು ಮುಚ್ಚುತ್ತದೆ.

Advertisement

ಇಲ್ಲಿ ಉಪತಹಶೀಲ್ದಾರ್‌ ಇಲ್ಲ. ಕಟ್ಟಡ ಸುರಕ್ಷಿತವಲ್ಲ. ಸುಣ್ಣಬಣ್ಣ ಕಂಡಿಲ್ಲ. ಮಾಡಿನ ಹಂಚು ಹಾರಿಹೋಗಿ, ಸೋರುತ್ತದೆ. ಕಡತಗಳು ಗೆದ್ದಲು ತುಂಬಿ ಸರ್ವನಾಶವಾಗುತ್ತಿದೆ. ಆದರೆ ಕಂದಾಯ ಇಲಾಖೆಯ ಈ ಶೋಚನೀಯ ಸ್ಥಿತಿಯನ್ನು ಗಮನಿಸುವವರೇ ಇಲ್ಲವಾಗಿದೆ.

ಪ್ರಯೋಜನವಾಗಲಿಲ್ಲ !
ಬಂಟ್ವಾಳ ತಾಲೂಕಿನ ಮೂರು ಹೋಬಳಿಗಳಲ್ಲಿ ವಿಟ್ಲ ಹೋಬಳಿ ದೊಡ್ಡದು. ಆದುದರಿಂದ ತಾಲೂಕಾ ಗಬೇಕು ಎಂಬ ಆಗ್ರಹ ಹಿಂದಿನಿಂದಲೇ ಇತ್ತು. ತಾಲೂಕಾಗಲಿಲ್ಲ. ವಿಟ್ಲ ವಿಧಾನಸಭಾ ಕ್ಷೇತ್ರವೂ ಮಾಯವಾದ ಬಳಿಕ ತಾಲೂಕು ಆಗುವ ಕನಸು ನುಚ್ಚುನೂರಾಯಿತು. ಹಲವು ವರ್ಷಗಳ ಬಳಿಕ ವಿಟ್ಲ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಬಿಟ್ಟಿತು ಎಂಬ ಸಮಾಧಾ ನವಿತ್ತು. ಆದರೆ ಪಟ್ಟಣ ಪಂಚಾಯತ್‌ ಆದ ಬಳಿಕವೂ ಕಂದಾಯ ಇಲಾಖೆ, ನಾಡಕಚೇರಿಗೆ ಪ್ರಯೋಜನವಾಗಲಿಲ್ಲ.

ನಾಡಕಚೇರಿ, ನೆಮ್ಮದಿ ಕೇಂದ್ರ
ತಾಲೂಕು ಪಂಚಾಯತ್‌ ಕಟ್ಟಡದಲ್ಲಿ ನಾಡಕಚೇರಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಉಪತಹಶೀಲ್ದಾರ್‌ ಇರಬೇಕು. ಆದರೆ ಈಗ ಹುದ್ದೆ ಖಾಲಿಯಾಗಿದೆ. ಆರ್‌.ಐ. ಅವರು ಈ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಜತೆಗೆ ಮೂವರು ಸಿಬಂದಿ ಕರ್ತವ್ಯ ನಿರ್ವಹಿಸುತ್ತಾರೆ.

ಗೆದ್ದಲು ನುಗ್ಗಿದೆ
ಕಡತಗಳಿಗೆ ಗೆದ್ದಲು ನುಗ್ಗಿದೆ. ಗೆದ್ದಲು ಎಲ್ಲವನ್ನೂ ಮಣ್ಣುಪಾಲು ಮಾಡುವ ದಿನಗಳು ದೂರವಿಲ್ಲ. ಹಲವು ಕಡತಗಳು ನಾಶವಾಗಿರಬಹುದು ಮತ್ತು ಎಷ್ಟೋ ಕಡತಗಳನ್ನು ರಕ್ಷಿಸಿ, ಕಾಪಾಡುವುದು ಸುಲಭವೂ ಅಲ್ಲ. ಇಲ್ಲೇ ನೆಮ್ಮದಿ ಕೇಂದ್ರವಿದೆ. ಎಷ್ಟೋ ವರ್ಷಗಳಿಂದ ಸರ್ವರ್‌ ಸಮಸ್ಯೆಗಳಿಂದ ಪರದಾಡುತ್ತಿರುವ ಈ ಕೇಂದ್ರಕ್ಕೆ ವಿದ್ಯುತ್‌ ಕಡಿತವೂ ಸೇರಿಕೊಂಡು ಸಮಸ್ಯೆಗಳು ದುಪ್ಪಟ್ಟಾಗಿವೆ. ವಿಟ್ಲದಲ್ಲಿ ವಿದ್ಯುತ್‌ ಕಡಿತವಾದಲ್ಲಿ ಈ ಕೇಂದ್ರದಲ್ಲಿ ಯಾವ ಕೆಲಸವೂ ಆಗುವುದಿಲ್ಲ.

Advertisement

ಇನ್‌ವರ್ಟರ್‌ ಇಲ್ಲ, ಯುಪಿಎಸ್‌ ಇಲ್ಲ. ಸಾರ್ವಜನಿಕರು ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಇದೆ ಎನ್ನುತ್ತಾರೆ. ಅಧಿಕಾರಿಗಳು ಒಂದೆರಡು ತಿಂಗಳಿಂದ ಈ ಸಮಸ್ಯೆಯಿದೆ ಎನ್ನುತ್ತಾರೆ. ಒಟ್ಟಿನಲ್ಲಿ ವಿದ್ಯುತ್‌ ಕಡಿತವಿದೆ ಎಂಬ ಮಾಹಿತಿಯಿದ್ದರೆ ಯಾರೂ ವಿಟ್ಲ ನಾಡಕಚೇರಿಗೆ ತೆರಳುವ ಕಷ್ಟ ತೆಗೆದುಕೊಳ್ಳುವುದಿಲ್ಲ.

ಆರ್‌.ಐ. ಮತ್ತು ವಿ.ಎ. ಕಚೇರಿ
ನಾಡಕಚೇರಿಗೂ ಆರ್‌ಐ ಕಚೇರಿಗೂ 100 ಮೀಟರ್‌ ದೂರವಿದೆ. ಕಂದಾಯ ಇಲಾಖೆಗೆ ಸೇರಿದ 20 ಸೆಂಟ್ಸ್‌ ಜಾಗದಲ್ಲಿ ಆರ್‌.ಐ. ಮತ್ತು ವಿ.ಎ. ಕಚೇರಿಯಿದೆ. ಈ ಕಟ್ಟಡವೂ ಶೋಚನೀಯ ಸ್ಥಿತಿಯಲ್ಲಿದೆ. ಇಲ್ಲಿಯೂ ಗೆದ್ದಲು ತುಂಬಿದೆ. ಪ್ರತೀ ವರ್ಷವೂ ದುರಸ್ತಿಗಾಗಿ ಪ್ರಸ್ತಾವನೆ ಕಳುಹಿಸ ಬೇಕು. ಆಗ ಅನುದಾನ ಕೊಡಬೇಕು. ದುರಸ್ತಿ ಕಾಮಗಾರಿ ನಡೆಯಬೇಕು ಎಂಬ ನಿಯಮವಿದೆ. ಆದರೆ ಇದಾವುದೂ ಇಲ್ಲಿ ಆಗುತ್ತಿಲ್ಲ. ಇಲ್ಲಿರುವ ಕಡತಗಳನ್ನು ರಕ್ಷಿಸುವುದು ಸುಲಭದ ಕೆಲಸವಲ್ಲ. ಗೆದ್ದಲಿನಿಂದ ಪಾರು ಮಾಡುತ್ತ ಇಲ್ಲಿನ ಸಿಬಂದಿ ನರಕಯಾತನೆ ಪಡುತ್ತಿದ್ದಾರೆ. ಯಾವುದೇ ಹಂತದಲ್ಲಿ ಕುಸಿದು ಬೀಳುವ ಕಟ್ಟಡದಿಂದಲೂ ತಮ್ಮನ್ನು ತಾವು ರಕ್ಷಿಸಿ ಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಅವರಿಗಿದೆ.

ಮಿನಿವಿಧಾನಸೌಧಕ್ಕೆ ಆಗ್ರಹ
ವಿಟ್ಲಕ್ಕೆ ಮಿನಿವಿಧಾನಸೌಧ ಬೇಕು ಎಂಬ ಆಗ್ರಹವೂ ಇದೆ. ವಿಟ್ಲದ ನೀರಕಣಿಯಲ್ಲಿ ತಾ.ಪಂ.ನ ವಿಶಾಲ ಜಾಗವಿದೆ. ಅಲ್ಲಿ ಮಿನಿವಿಧಾನಸೌಧ ನಿರ್ಮಾಣವಾದಲ್ಲಿ ಎಲ್ಲ ಕಚೇರಿಗಳೂ ಸುರಕ್ಷಿತವಾಗಿರಬಲ್ಲವು. ಈ ಬಗ್ಗೆ ಇಲಾಖಾಧಿಕಾರಿಗಳು ಒಂದೆರಡು ವರ್ಷ ಹಿಂದೆಯೇ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ. ಆದರೆ ವಿಟ್ಲ ಪಟ್ಟಣ ಪಂಚಾಯತ್‌ಗೆ ಇನ್ನೂ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿಲ್ಲ. ಇನ್ನು ಮಿನಿ ವಿಧಾನಸೌಧ ತಲುಪಬಹುದೇ ಎಂದು ನಾಗರಿಕರಾಡಿಕೊಳ್ಳುತ್ತಿದ್ದಾರೆ.

ಆಕಾಶ ಕಾಣುತ್ತದೆ
ಇಲ್ಲಿನ ಹಂಚಿನ ಮಾಡಿನಲ್ಲಿ ಆಕಾಶ ಕಾಣುತ್ತದೆ. ಮಳೆ ಬಂದರೆ ಸೋರು ತ್ತದೆ. ಉಪತಹಶೀಲ್ದಾರ್‌ ಅವರು ಕುಳಿತುಕೊಳ್ಳುವ ಜಾಗದ ಮೇಲೆ ಮಾಡಿನ ರೀಪು ಮುರಿದಿದೆ. ಯಾವುದೇ ಸಂದರ್ಭದಲ್ಲಿ ಹಂಚು ಉಪತಹಶೀಲ್ದಾರ್‌ ಅವರ ತಲೆಗೇ ಬೀಳಬಹುದಾಗಿದೆ. ಆದುದರಿಂದ ಸಿಬಂದಿ ಅವರ ಜಾಗವನ್ನು ಬದಲಾಯಿಸಿ, ಸಂರಕ್ಷಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next