Advertisement

ಭೀಮಾನದಿ ದಡದಲ್ಲಿ ನಿಂತ ವಿಠೋಭ

11:25 AM Aug 19, 2021 | Team Udayavani |

ಪ್ರಾಚೀನ ತೀರ್ಥಕ್ಷೇತ್ರವಾಗಿರುವ ಪಂಢರಾಪುರ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಭೀಮಾನದಿ ದಡದಲ್ಲಿದೆ. ಸೋಲಾಪುರದಿಂದ 64 ಕಿ.ಮೀ. ದೂರದಲ್ಲಿ ಕುರ್ಡವಾಡಿ ರೈಲು ನಿಲ್ದಾಣವಿದೆ. ಪಂಢರಾಪುರಕ್ಕೆ ಭೀಮಾ ಹಾಗೂ ಶಿಶುಮಾಲಾ ನದಿಗಳ ಸಂಗಮಸ್ಥಾನದಲ್ಲಿ ಪೂರ್ವದ್ವಾರ, ಸಂಧ್ಯಾವಳಿ ದೇವಿಯಲ್ಲಿ ಸನ್ನಿಧಿ ಮಾನಸೂರದಲ್ಲಿ ದಕ್ಷಿಣದ್ವಾರ, ಸಿದ್ಧೇಶ್ವರ ದೇವಸ್ಥಾನ, ಭೀಮಾ ಹಾಗೂ ಪುಷ್ಪಾವತಿ ನದಿಗಳ ಸಂಗಮ ಸ್ಥಾನದಲ್ಲಿ ಪಶ್ಚಿಮದ್ವಾರ,
ಭೀಮಾ ಹಾಗೂ ಭರಣೀ ನದಿಯ ಸಂಗಮನದಲ್ಲಿ ಉತ್ತರದ್ವಾರವಿದೆ. ಈ ಊರಿನಲ್ಲಿ ಅನೇಕ ದೇವಾಲಯಗಳೂ ಇವೆ.

Advertisement

ಊರಿನ ಮಧ್ಯೆ ಇರುವ ವಿಠಲ ಮಂದಿರದ ಮಹಾದ್ವಾರ ಪೂರ್ವಾಭಿಮುಖವಾಗಿದೆ. ಈ ದ್ವಾರಕ್ಕೆ ನಾಮದೇವ ದ್ವಾರವೆಂದೂ ಹೇಳಲಾಗುತ್ತದೆ. ಇಲ್ಲಿ ನಾಮದೇವನ ಸಮಾಧಿ ಸ್ಥಳವಿದೆ. ನಾಮದೇವನ ಪಾದಗಳೂ ಇಲ್ಲಿವೆ. ಸಮಾಧಿಯ ಹತ್ತಿರ ಒಂದು ವಟವೃಕ್ಷ, ಅದರ ಪಕ್ಕದಲ್ಲಿ ಮೂವತ್ತಮೂರು ಕೋಟಿ ದೇವತೆಗಳ ಮಂದಿರ, ಮುಕ್ತಿಮಂಟಪವನ್ನು ಒಳಗೊಂಡಿದೆ. ಇದೊಂದು ದೊಡ್ಡ ಮಂಟಪವಾಗಿದ್ದು, ಕಮಾನುಗಳಿಂದ ಆಕರ್ಷಕವಾಗಿವೆ, ಮಂಟಪದ ಹತ್ತಿರ ಗಣಪತಿ ವಿಗ್ರಹವೂವಿದೆ. ಪ್ರಾಚೀನ ಕಾಲದಲ್ಲಿ ವಿಠ್ಠಲನ ಮೂರ್ತಿ ಇಲ್ಲಿತ್ತು ಎನ್ನಲಾಗುತ್ತದೆ. ಸ್ವಲ್ಪ ದೂರದಲ್ಲಿ ಕಲ್ಲು ಹಾಸಿಗೆಯ ಮಂಟಪ, ಪಕ್ಕದಲ್ಲೇ ಸಂತ ಪ್ರಹ್ಲಾದಬುವಾ ಬಡವೆ, ಭೀಮಾನದಿ ದಡದಲ್ಲಿ ನಿಂತ ವಿಠೊಭ ಕಾನೋಬಾ ಅವರ ಸಮಾಧಿಗಳು, ಇವುಗಳ ಸಮೀಪದಲ್ಲೇ ಸಂತರಾಮದಾಸರು ಸ್ಥಾಪಿಸಿದ ಮಾರುತಿಯ ಮೂರ್ತಿಯಿದೆ.

ಇದಾದ ಬಳಿಕ 16 ಕಂಬದ ಮಂಟಪವಿದ್ದು ಇದಕ್ಕೆ ಮೂರು ಬಾಗಿಲುಗಳು, ಕಂಬಗಳ ಮೇಲೆ ಕೃಷ್ಣ ಲೀಲೆಯ ದಶಾವತಾರದ ಚಿತ್ರಗಳನ್ನು ಕೊರೆಯವಲಾಗಿದೆ. ಇದನ್ನು ಗರುಡಕಂಬ, ಪುರಂದರ ದಾಸರ ಕಂಬ ಎನ್ನಲಾಗುತ್ತದೆ. ಈ ಕಂಬವನ್ನು ಆಲಂಗಿಸಿದ ಅನಂತರವೇ ವಿಠ್ಠಲನ ದರ್ಶನವಾಗುವುದು. ಈ ಮಂಟಪದಲ್ಲಿ ಪಾಂಡುರಂಗ ಬಾದಶಹನಿಗೆ ದಾಮಾಜಿಪಂತನ ವಿನಂತಿ ಮೇರೆಗೆ ಮಹಾರ್ನ ವೇಷದಲ್ಲಿ ದರ್ಶನವಿತ್ತ ಸ್ಮರಣಾರ್ಥವಾಗಿ ಎರಡು ಪಾದುಕೆಗಳಿವೆ. ಬಳಿಕ ಚೌಖಂಬಾ ಮಂಟಪ, ಇದರ ದಕ್ಷಿಣದಲ್ಲಿ ಹಸ್ತಿದ್ವಾರ, ಎರಡು ದೊಡ್ಡ ಕಲ್ಲಾನೆಗಳಿವೆ. ಇದರ ಪಕ್ಕದಲ್ಲೇ ಪಾಂಡುರಂಗ ಶಯ್ನಾಗೃಹವಿದೆ. ಚೌಖಂಬಾ ಮಂಟಪದ ಬಳಿಕ ಒಂದು ಕಮಾನು ಅದಕ್ಕೆ ತಾಗಿಕೊಂಡು ಗರ್ಭಗೃಹವಿದೆ.

ಇಲ್ಲಿನ ಭಿತ್ತಿ, ಬಾಗಿಲನ್ನು ಬೆಳ್ಳಿಯ ರೇಕಿನಿಂದ ಅಲಂಕರಿಸಿದ್ದಾರೆ. ಬಾಗಿಲು ದಾಟಿದ ಕೂಡಲೇ ಇಟ್ಟಗಿಯ ಮೇಲೆ ನಿಂತಿದ್ದಾನೆ ವಿಠೊಭ. ಅತ್ಯಂತ ಸುಂದರವಾಗಿರುವ ಮೂರ್ತಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವುದು. ದೇವಾಲಯದ ಶಿಖರವು ನಾಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು
ಮನೋಜ್ಞವಾಗಿದೆ. 16 ಕಂಬದ ಮಂಟಪವನ್ನು ದಾಟಿದ ಕೂಡಲೇ ಅಂಬಾಬಾಯಿ, ನಾರದ, ಪರಶುರಾಮ, ಬಲಸೊಂಡೆ, ಎಡಸೊಂಡೆಯ ಗಣಪತಿ, ವೆಂಕಟೇಶವನ ಮಂದಿರಗಳಿವೆ.

ಮಂದಿರದ ಆಚೆ ಬಾಜಿರಾಯನ ಓವರಿಯಿದ್ದು, ಇದರ ಎದುರು ಲಕ್ಷ್ಮೀಯ ಮಂದಿರ, ಸೂರ್ಯ, ಗಣಪತಿ, ಖಂಡೋಬ, ನಾಗರಾಜ ಪ್ರತಿಮೆಗಳಿವೆ. ಗರ್ಭಗೃಹ, ಮಧ್ಯಗೃಹ, ಮುಖ್ಯಮಂಟಪ, ಸಭಾ ಮಂಟಪವನ್ನು ಒಳಗೊಂಡಿರುವ ರುಕ್ಮಿಣೀ ಮಂದಿರದಲ್ಲಿ ರುಕ್ಮಿಣಿಯ ಮೂರ್ತಿಯು ಪೂರ್ವಾಭಿಮುಖವಾಗಿದ್ದು, ಇಲ್ಲೇ ಸತ್ಯಭಾಮೆಯ ಮಂದಿರವೂಉ ಇದೆ. ಬಳಿಕ ಕಾಶಿ ವಿಶ್ವನಾಥ, ರಾಮಲಕ್ಷ್ಮಣ, ಕಾಲಭೈರವ, ರಾಮೇಶ್ವರಲಿಂಗ, ದತ್ತ ಮತ್ತು ನರಸೋಬಾ ಮಂದಿರಗಳಿವೆ.

Advertisement

ಇಲ್ಲಿಂದ 16 ಕಂಬದ ಮಂಟಪಕ್ಕೆ ಹೋಗಲು ಒಂದು ಪ್ರತ್ಯೇಕ ದ್ವಾರವಿದೆ. ಇಲ್ಲಿಯೇ 84 ಲಕ್ಷ ಯೋನಿಗಳಿಂದ ಮುಕ್ತಗೊಳಿಸುವ ಪ್ರಸಿದ್ಧ ಶಿಲಾಲೇಖವಿದೆ. ಜನರ ಹಸ್ತ ಸ್ಪರ್ಶನದಿಂದ ಕಲ್ಲುಸವೆದು ನುಣಪಾಗಿದೆ, ಶಾಸನಸ್ಥ ವಿಷಯ ಅಳಿಸಿ ಹೋಗಿವೆ. ವಿಠೊಭ ಹಾಗೂ ರುಕ್ಮಿಣೀ ಮಂದಿರಗಳಲ್ಲಿ ನವರಾತ್ರಿ, ದೀಪಾವಳಿ, ಯುಗಾದಿಯ ಹಬ್ಬಗಳಲ್ಲಿ ವಿಶೇಷ ಆಭರಣಗಳ ಅಲಂಕಾರವೂ ನಡೆಯುತ್ತವೆ.

ಇದರೊಂದಿಗೆ ಪುಂಡಲೀಕ ಮಂದಿರ, ವಿಷ್ಣು ಪದ ಮಂದಿರ, ಗೋಪಾಲಪುರ, ಪದ್ಮತೀರ್ಥ, ದಿಂಡೀರವನ, ವ್ಯಾಸನಾರಾಯಣ ಮಂದಿರ, ಕುಂಡಲತೀರ್ಥವನ್ನೂ ಕಾಣಬಹದು. ಪಂಢರಪುರದ ತೀರ್ಥಯಾತ್ರೆಯನ್ನು ವಾರಕಾರಿ ಎಂಬ ಭಕ್ತ ಜನಾಂಗ ಮಾಡಿಸುತ್ತದೆ. ಆಷಾಢ, ಕಾರ್ತಿಕ ಮಾಸದಲ್ಲಿ ಇದು ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next