Advertisement
ಅದರಂತೆ ಎರಡು ಹಂತಗಳಲ್ಲಿ ನಗರದ 24 ರಸ್ತೆಗಳು ಹಾಗೂ 6 ಜಂಕ್ಷನ್‌ಗಳ 93.47 ಕಿಲೋ ಮೀಟರ್‌ಗಳನ್ನು 972.69 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಪಾಲಿಕೆಯ ಅಧಿಕಾರಿಗಳು ನಗರದ ಆರು ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಭಿಸಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಳ್ಳುವಂತೆ ಪಾಲಿಕೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Related Articles
Advertisement
ವೈಟ್‌ಟಾಪಿಂಗ್‌ಗೆ ಎರಡು ರೀತಿಯ ಯಂತ್ರಗಳ ಬಳಕೆ: ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ವೇಳೆ ರಸ್ತೆಯ ಅಳತೆಗೆ ಅನುಗುಣವಾಗಿ ಎರಡು ರೀತಿಯ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. 11 ರಿಂದ 14 ಮೀಟರ್ ಅಳತೆಯ ರಸ್ತೆಗೆ ಡಾಂಬರೀಕರಣ ಮಾಡಲು ಸ್ಲಿಪ್‌ಫಾರ್ಮ್ ಪವೇರ್ ಯಂತ್ರ ಬಳಸಲಾಗುತ್ತಿದ್ದು, ಈ ಯಂತ್ರ ಒಮ್ಮೆ 8.5 ರಿಂದ 11 ಮೀಟರ್ ರಸ್ತೆಯಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸುತ್ತದೆ. ಅದೇ ರೀತಿಯ 6 ರಿಂದ 8 ಮೀಟರ್ ಅಳತೆಯ ರಸ್ತೆಗೆ ಫಿಕ್ಸ್‌ಫಾರ್ಮ್ ಪವೇರ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಯಂತ್ರವು ಒಮ್ಮೆ 5.5 ಮೀಟರ್ ಅಳತೆಯ ರಸ್ತೆಗೆ ಕಾಂಕ್ರಿಟ್ ಸುರಿಯಲಿದೆ.
ಆಗಸ್ಟ್ ವೇಳೆಗೆ ಎರಡು ಹಂತ ಪೂರ್ಣ: ಪಾಲಿಕೆಯ ಎರಡು ಹಂತಗಳಲ್ಲಿ ಕೈಗೆತ್ತಿಕೊಂಡಿರುವ 24 ರಸ್ತೆ ಮತ್ತು 6 ಜಂಕ್ಷನ್‌ಗಳನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿ ಜುಲೈ-ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ. ಮೊದಲ ಹಂತದ ಆರು ರಸ್ತೆಗಳ ಕಾಮಗಾರಿಯನ್ನು ಜನವರಿ ವೇಳೆಗೆ ಬಹುತೇಕ ಪೂರ್ಣಗೊಳ್ಳಲಿದ್ದು, ಸೇವಾಜಾಲಗಳ ಸ್ಥಳಾಂತರವಿಲ್ಲದಿದ್ದರೆ ಕಾಮಗಾರಿ ಶೀಘ್ರ ಮುಗಿಯಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ವೀಸ್ ರಸ್ತೆಗಳು ಡಾಂಬರೀಕರಣ: ನಗರದ ಹೊರವಲಯದ ಹೊರ ಹಾಗೂ ಒಳ ವರ್ತುಲ ರಸ್ತೆಗಳ ಮುಖ್ಯರಸ್ತೆಗಳನ್ನು ಮಾತ್ರ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗುವುದು. ಸಾಮಾನ್ಯವಾಗಿ ಮುಖ್ಯರಸ್ತೆಗಳಲ್ಲಿ ಜಲಮಂಡಳಿ, ಬೆಸ್ಕಾಂ, ಒಎಫ್ಸಿ ಸೇರಿದಂತೆ ಇತರೆ ಇಲಾಖೆಗಳ ಸೇವಾಜಾಲಗಳ ಸಂಪರ್ಕವಿರುವುದಿಲ್ಲ. ಹೀಗಾಗಿ ಮುಖ್ಯರಸ್ತೆಗಳಲ್ಲಿ ಮಾತ್ರ ವೈಟ್‌ಟಾಪಿಂಗ್ ಕಾಮಗಾರಿ ನಡೆಯಲಿದ್ದು, ಸರ್ವೀಸ್ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಪಾಲಿಕೆಯ 24 ರಸ್ತೆಗಳು ಹಾಗೂ 6 ಜಂಕ್ಷನ್ ರಸ್ತೆಗಳ ವೈಟ್‌ಟಾಪಿಂಗ್‌ಗೆ ಸರ್ಕಾರ 972 ಕೋಟಿ ರೂ. ನೀಡಿದ್ದು, ಮೊದಲ ಹಂತದಲ್ಲಿ 6 ರಸ್ತೆಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಗುತ್ತಿಗೆ ಸಂಸ್ಥೆಗಳಿಗೆ ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ವೈಟ್‌ಟಾಪಿಂಗ್ ರಸ್ತೆಗಳಿಂದ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದ್ದು, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. -ಕೆ.ಟಿ.ನಾಗರಾಜ್, ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ 1500 ಕಿ.ಮೀ ರಸ್ತೆಗೆ ಟಾಪಿಂಗ್ ಭಾಗ್ಯ: ನಗರದ ವಿವಿಧ ಭಾಗಗಳಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿರುವ ವೈಟ್‌ಟಾಪಿಂಗ್ ರಸ್ತೆಗಳಿಂದ ವಾಹನ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ 93.47 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡಲಾಗುತ್ತಿದ್ದು, ಇತ್ತೀಚೆಗೆ ಮುಖ್ಯಮಂತ್ರಿಗಳು ನಗರದ 1500 ಕಿ.ಮೀ.ಉದ್ದದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡುವುದಾಗಿ ಘೋಷಿಸಿದ್ದಾರೆ. ವೈಟ್‌ಟಾಪಿಂಗ್ ಹೇಗೆ ವಿಭಿನ್ನ?: ಡಾಂಬಾರು ರಸ್ತೆ ಬಿಟುಮಿನ್ ಕಾಂಕ್ರಿಟ್ ಹಾಗೂ ಬಿಟುಮಿನ್ ಮೆಕಾಡಮ್ ಮಿಶ್ರಣದಿಂದ ನಿರ್ಮಿಸಲಾಗುತ್ತದೆ. ಹೀಗೆ ನಿರ್ಮಿಸಿದ ರಸ್ತೆಗಳು ಸುಮಾರು 4 ವರ್ಷಗಳು ಬಾಳಿಕೆ ಬರಲಿದ್ದು, ಮಳೆಗಾಲದಲ್ಲಿ ರಸ್ತೆಗಳು ಹಾಳಾಗುವ ಸಾಧ್ಯತೆಯಿರುತ್ತದೆ. ಆದರೆ, ವೈಟ್‌ಟಾಪಿಂಗ್ ರಸ್ತೆಯನ್ನು ಸಂಪೂರ್ಣ ಕಾಂಕ್ರಿಟ್‌ನಿಂದ ನಿರ್ಮಿಸುವುದರಿಂದ ಕನಿಷ್ಠ 30 ವರ್ಷಗಳ ಬಾಳಿಕೆ ಬರಲಿದೆ. ಮಳೆಗಾಲದಲ್ಲಿಯೂ ರಸ್ತೆಗುಂಡಿ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯವಾಗಿದೆ. * ವೆಂ. ಸುನೀಲ್ ಕುಮಾರ್