Advertisement

ರಕ್ತದಾನದಿಂದ ದೇಹದಲ್ಲಿ ಚೈತನ್ಯ

03:26 PM Jun 20, 2017 | Team Udayavani |

ಕಲಬುರಗಿ: ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹ ಚೈತನ್ಯದಿಂದ ಕೂಡಿರುತ್ತದೆ. ರಕ್ತ ದಾನದಿಂದ ಅನಾರೋಗ್ಯ ಅಥವಾ ನಿಶ್ಯಕ್ತಿ ಮತ್ತು ನಿತ್ರಾಣ ಉಂಟಾಗುವುದಿಲ್ಲ. ರಕ್ತ ದಾನಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಹೇಳಿದರು. 

Advertisement

ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಸರ್ಕಾರಿ ನರ್ಸಿಂಗ್‌ ಶಾಲೆ ಮತ್ತು ಕಾಲೇಜು, ರೆಡ್‌ ಕ್ರಾಸ್‌ ಸಂಸ್ಥೆ ಮತ್ತು ರೆಡ್‌ ರಿಬ್ಬನ್‌ ಕ್ಲಬ್‌ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕಲಬುರಗಿ ಜಿಲ್ಲೆಯ 27 ಲಕ್ಷ ಜನಸಂಖ್ಯೆಗೆ ಪ್ರತಿ ವರ್ಷ ಸುಮಾರು 25 ಸಾವಿರ ಯೂನಿಟ್‌ ರಕ್ತದ ಬೇಡಿಕೆ ಇದೆ. 10 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕೇವಲ 10ರಿಂದ 12 ಸಾವಿರ ಯೂನಿಟ್‌ ರಕ್ತ ದೊರೆಯುತ್ತಿತ್ತು. ಕಳೆದ ವರ್ಷ 21 ಸಾವಿರ ಯೂನಿಟ್‌ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ.

ಜಿಲ್ಲೆಯಲ್ಲಿ ರಕ್ತ ಬ್ಯಾಂಕುಗಳ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಲಾಗಿದೆ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಯುವಕರು ರಕ್ತ ದಾನ ಮಾಡಲು ಮುಂದಕ್ಕೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾದರೂ ಸಹ ದಿನೇ ದಿನೇ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ಶಸ್ತ್ರಜ್ಞ ಡಾ| ಬಾಲಚಂದ್ರ ಜೋಶಿ ಮಾತನಾಡಿ, ಅಪಘಾತದಲ್ಲಿ ರಕ್ತಸ್ರಾವವಾದಾಗ 12 ಗಂಟೆಗಳಲ್ಲಿ ಅವಶ್ಯಕ ರಕ್ತ ರೋಗಿಗೆ ನೀಡದಿದ್ದರೆ ಜೀವ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಆರೋಗ್ಯವಂತರಾಗಿರುವ ಎಲ್ಲ ಜನರು ವಿಶೇಷವಾಗಿ ಯುವ ವಿದ್ಯಾರ್ಥಿ ಸಮುದಾಯ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದು ಹೇಳಿದರು.

Advertisement

ಜಿಲ್ಲಾ ಏಡ್ಸ್‌ ನಿಯಂತ್ರಣಾ ಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ವಿಭಜಿಸುವ ಘಟಕ ಪ್ರಾರಂಭಿಸಲಾಗುತ್ತಿದೆ. ರಕ್ತ ದಾನದಿಂದ ದೇಹದಲ್ಲಿರುವ ಕೊಬ್ಬು ಕಡಿಮೆಯಾಗಿ ಹೃದಯ ರೋಗದ ಸಂಭವ ಕಡಿಮೆಯಾಗುವುದು ಎಂದು ಹೇಳಿದರು. 

ಜಿಪಂ. ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ ಅವರು ಅತಿ ಹೆಚ್ಚು ರಕ್ತ ದಾನ ಮಾಡಿದ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಶಿಕಾಂತ ಮಜ್ಜಿಗೆ, ಜಿಲ್ಲಾ ಆಸ್ಪತ್ರೆ ಸ್ಟಾಫ್‌ ನರ್ಸ್‌ ಬಸವರಾಜ ಅಂಬಾರಾಯ ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಚಿನ ಮಲ್ಲಪ್ಪ ಅವರನ್ನು ಸನ್ಮಾನಿಸಿದರು. 

ಇದಕ್ಕೂ ಮುನ್ನ ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಅವರು ಜಿಲ್ಲಾ ಆಸ್ಪತ್ರೆಯಿಂದ ಜಗತ್‌ ವೃತ್ತದ ಮಾರ್ಗವಾಗಿ ಸರ್ಕಾರಿ ನರ್ಸಿಂಗ್‌ ಕಾಲೇಜಿನವರೆಗೆ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next