Advertisement

ಜಿಲ್ಲಾದ್ಯಂತ ವಿಶ್ವಕರ್ಮ ಜಯಂತ್ಯುತ್ಸವ

09:45 AM Sep 18, 2019 | Suhan S |

ಧಾರವಾಡ: ಕರಕುಶಲ ಕಲೆ-ಲೋಹ ಕಸುಬುಗಳಲ್ಲಿ ನಿಪುಣತೆ ಸಾಧಿಸಿರುವ ವಿಶ್ವಕರ್ಮ ಸಮುದಾಯಗಳು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು.

Advertisement

ಕವಿಸಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಇಂದಿಗೂ ವಿಶ್ವಕರ್ಮ ಸಮುದಾಯದ ಜನರು ಕೃಷಿ ಮತ್ತು ಇತರ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮಾತನಾಡಿ, ಭಾರತೀಯ ಪರಂಪರೆಯ ಪ್ರಾಚೀನ ಸಂಸ್ಕೃತಿ ಮತ್ತು ಇತಿಹಾಸಕ್ಕೆ ವಿಶ್ವಕರ್ಮ ಜನಾಂಗವು ಅಭೂತಪೂರ್ವ ಕೊಡುಗೆ ನೀಡಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಮುಂತಾದ ಇತಿಹಾಸ ಪ್ರಸಿದ್ಧ ದೇವಾಲಯಗಳ ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಜನಾಂಗದವರು ಅಪಾರ ಕೊಡುಗೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ವಿಶ್ವಸಂಸ್ಥೆಯ ಸಾಂಸ್ಕೃತಿಕ ಘಟಕವಾಗಿರುವ ಯುನೆಸ್ಕೋ ಮೆಚ್ಚಲು ವಿಶ್ವಕರ್ಮ ಜನಾಂಗದ ಶಿಲ್ಪಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.

ವಿಶ್ವಕರ್ಮ ಸಂಸ್ಕೃತಿ ಹಾಗೂ ಪರಂಪರೆ ಕುರಿತು ನಿವೃತ್ತ ಬಾನುಲಿ ಕೃಷಿ ಅಧಿಕಾರಿ ಡಾ|ವಿರೂಪಾಕ್ಷ ಬಡಿಗೇರ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಭಾವನಾ ಬೇಲೂರ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಪಿಎಸ್‌ಐ ಶರಣಪ್ಪ ದೇಸಾಯಿ, ಮುಖಂಡರಾದ ವಸಂತ ಅರ್ಕಾಚಾರ, ಕಾಳಪ್ಪ ಬಡಿಗೇರ, ಸಂತೋಷ ಬಡಿಗೇರ, ಸುರೇಶ ಬಡಿಗೇರ, ಮಂಜುನಾಥ ಬಡಿಗೇರ, ರಾಮಣ್ಣಾ ಬಡಿಗೇರ, ದೇವೇಂದ್ರ ಬಡಿಗೇರ ಇದ್ದರು.

ವೀಣಾ ಬಡಿಗೇರ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆರತಿ ದೇವಶಿಖಾಮಣಿ ನಿರೂಪಿಸಿ, ವಂದಿಸಿದರು. ಇದಕ್ಕೂ ಮುನ್ನ ಕಾಮನಕಟ್ಟಿಯ ಮೌನೇಶ್ವರ ದೇವಸ್ಥಾನದಿಂದ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಆರಂಭವಾಗಿ ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next