ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಪ್ರಾರಂಭಗೊಂಡಿರುವ ರಾಜ್ಯದ ಪ್ರಥಮ ಮತ್ತು ದೇಶದ 5ನೇ ವಿಸ್ಟಾಡೋಮ್ ರೈಲು ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಜುಲೈ ಅಂತ್ಯದವರೆಗೆ ಬಹುತೇಕ ಎಲ್ಲ ಆಸನಗಳು ಭರ್ತಿಯಾಗಿವೆ. ಕೆಲವು ದಿನಗಳಲ್ಲಿ ಪ್ರಯಾಣಿಕರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ.
ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ಜು.11ರಿಂದ ಸಂಚರಿಸುತ್ತಿರುವ ಈ ರೈಲಿಗೆ ಯಶವಂತಪುರದಿಂದ ಎರಡು ಹಾಗೂ ಮಂಗಳೂರಿನಿಂದ ಎರಡು ಸೇರಿ ಒಟ್ಟು ನಾಲ್ಕು ವಿಸ್ಟಾಡೋಮ್ ಬೋಗಿಗಳನ್ನು ಜೋಡಿಸಲಾಗಿದೆ. ಪ್ರತಿ ಬೋಗಿ ತಲಾ 44 ಆಸನಗಳಂತೆ ಒಟ್ಟು 88 ಆಸನಗಳನ್ನು ಒಳಗೊಂಡಿದೆ.
ಮಂಗಳೂರು ಕಡೆಯಿಂದ ಜು.12 ಮತ್ತು 14 ಹೊರತುಪಡಿಸಿ ಉಳಿದಂತೆ ಜು.23ವರೆಗೆ ವಿಸ್ಟಾಡೋಮ್ ಬೋಗಿಗಳು ಬಹುತೇಕ ಭರ್ತಿಯಾಗಿ ಚಲಿಸಿವೆ. ಜು.15, 17, 18, ಮತ್ತು 22ರಂದು ಎಲ್ಲ 88 ಆಸನಗಳು ಭರ್ತಿಯಾಗಿವೆ. ಜು.18ರಂದು 3 ಆಸನಗಳು ವೇಟಿಂಗ್ ಲಿಸ್ಟ್‌ನಲ್ಲಿದ್ದವು. ಜು. 16ರಂದು 79, 19ರಂದು 86, 20ರಂದು 87, 21ರಂದು 82 ಮಂದಿ ಪ್ರಯಾಣಿಸಿದ್ದರು.
ಜು.24ರ ಎಲ್ಲ 88 ಆಸನಗಳು ಭರ್ತಿಯಾಗಿ 18 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದರು. ಉಳಿದಂತೆ ಜು. 25ರಂದು 82, 26ರಂದು 80, 27ರಂದು 61, 28ರಂದು 22, 29ರಂದು 81, 30ರಂದು 54 ಹಾಗೂ ಜು. 31ರಂದು 85 ಆಸನಗಳು ಈಗಾಗಲೇ ಭರ್ತಿಯಾಗಿದ್ದು ಬುಕ್ಕಿಂಗ್ ಚಾಲನೆಯಲ್ಲಿದೆ.
ಯಶವಂತಪುರ ಕಡೆಯಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜು. 20, 21 ಹೊರತುಪಡಿಸಿ ಉಳಿದಂತೆ ಜು. 16ರಿಂದ 23ರ ವರೆಗೆ ಎಲ್ಲ 88 ಆಸನಗಳು ಭರ್ತಿಯಾಗಿ ಪ್ರಯಾಣಿಕರು ವೈಟಿಂಗ್ ಲಿಸ್ಟ್‌ನಲ್ಲಿದ್ದರು. ಜು. 20ರಂದು 86, ಜು. 21ರಂದು 83 ಮಂದಿ ಪ್ರಯಾಣಿಸಿದ್ದರು. ಜು. 24, 25, 26, 29, 30, ಮತ್ತು 31ರಂದು ಎಲ್ಲ ಆಸನಗಳು ಭರ್ತಿಯಾಗಿ ಪ್ರಯಾಣಿಕರು ವೈಟಿಂಗ್‌ಲಿಸ್ಟ್‌ನಲ್ಲಿದ್ದಾರೆ. ಜು. 27ರಂದು 83 ಹಾಗೂ ಜು. 28ರಂದು 84 ಆಸನಗಳು ಭರ್ತಿಯಾಗಿವೆ.
ವಿಸ್ಟಾಡೋಮ್ ಬೋಗಿ 360 ಡಿಗ್ರಿ ತಿರುಗುವ ಕುರ್ಚಿಗಳನ್ನು ಹೊಂದಿದ್ದು, ಪಶ್ಚಿಮ ಘಟ್ಟದ ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರದ ನಡುವೆ ಪಶ್ಚಿಮಘಟ್ಟದ ವಿಹಂಗಮ ನೋಟವನ್ನು ಸವಿಯಲು ಹೆಚ್ಚು ಪೂರಕವಾಗಿದೆ.
ಉತ್ತಮ ಸ್ಪಂದನೆ
ವಿಸ್ಟಾಡೋಮ್‌ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಜುಲೈ ಅಂತ್ಯವರೆಗಿನ ಆಸನಗಳು ಬಹುತೇಕ ಬುಕ್ಕಿಂಗ್ ಆಗಿವೆ. ಕೆಲವು ದಿನಗಳಲ್ಲಿ ವೇಟಿಂಗ್ ಲಿಸ್ಟ್‌ನಲ್ಲೂ ಇವೆ. ಆಗಸ್ಟ್‌ನ ಬುಕ್ಕಿಂಗ್ ಕೂಡ ಉತ್ತಮ ರೀತಿಯಲ್ಲಿ ಆಗುತ್ತಿದೆ.
– ಅನೀಸ್ ಹೆಗಡೆ, ಪಿಆರ್‌ಒ, ನೈಋತ್ಯ ರೈಲ್ವೇ