Advertisement

Mystery: ಅದೊಂದು ಶಾಪದಿಂದ ಸೂರ್ಯಾಸ್ತದ ಬಳಿಕ ಈ ದೇವಸ್ಥಾನದಲ್ಲಿ ಯಾರೂ ನಿಲ್ಲುದಿಲ್ಲವಂತೆ

05:27 PM Aug 26, 2024 | ಸುಧೀರ್ |

ನಮ್ಮ ದೇಶದಲ್ಲಿ ಅನೇಕ ಪ್ರಾಚೀನ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಪೌರಾಣಿಕ ಹಿನ್ನಲೆಯನ್ನು ಹೊಂದಿದೆ. ಇವುಗಳಲ್ಲಿ ಹಲವು ದೇವಾಲಯಗಳು ಬಹಳ ನಿಗೂಢತೆಯನ್ನು ಹೊಂದಿದೆ ಅದರಲ್ಲಿ ನಾವು ಹೇಳ ಹೊರಟಿರುವ ದೇವಸ್ಥಾನವೂ ಒಂದು, ಈ ಪ್ರದೇಶದಲೊಂದು ಸುಂದರ ದೇವಸ್ಥಾನವಿದೆ, ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಸಂಜೆಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತಾರಂತೆ, ಅಪ್ಪಿ ತಪ್ಪಿಯೂ ಈ ದೇವಸ್ಥಾನದಲ್ಲಿ ರಾತ್ರಿ ಉಳಿಯಲು ಯಾರೂ ಬಯಸುವುದಿಲ್ಲವಂತೆ ಒಂದು ವೇಳೆ ಉಳಿಯುವ ನಿರ್ಧಾರ ಮಾಡಿದರೆ ರಾತ್ರಿ ಬೆಳಗಾಗುವುದರೊಳಗೆ ಅವರು ಕಲ್ಲಾಗಿ ಹೋಗುತ್ತಾರಂತೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಬನ್ನಿ ಹಾಗಾದರೆ ಆ ದೇವಸ್ಥಾನ ಇರುವುದು ಎಲ್ಲಿ, ಈ ದೇವಸ್ಥಾನದ ಹಿನ್ನೆಲೆ ಏನು ಎಂಬುದನ್ನು ತಿಳುದುಕೊಂಡು ಬರೋಣ.

Advertisement

ಎಲ್ಲಿದೆ ದೇವಸ್ಥಾನ:
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿರುವ ಕಿರಾಡ್ (ಹಿಂದೆ ಇದನ್ನು ಕಿರಾಡ್ ಕೋಟ್ ಎಂದು ಕರೆಯಲಾಗುತ್ತಿತ್ತು) ಪ್ರದೇಶವಿದೆ. ಬಾರ್ಮರ್ ರಾಜಸ್ಥಾನದ ಜಿಲ್ಲಾ ಕೇಂದ್ರವಾಗಿದ್ದು, ಪಾಕಿಸ್ತಾನದ ಗಡಿಯಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಕಿರಾಡು ದೇವಾಲಯದ ಪ್ರದೇಶವು ಬಾರ್ಮರ್ ಪಟ್ಟಣದಿಂದ ಸುಮಾರು 35 ಕಿಮೀ ದೂರದಲ್ಲಿದೆ. 11 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗಿದ್ದು, ಆರಂಭದಲ್ಲಿ ಇಲ್ಲಿ 108 ದೇವಸ್ಥಾನಗಳು ಇತ್ತು ಎಂದು ಹೇಳಲಾಗುತ್ತಿದ್ದು ಅವುಗಳಲ್ಲಿ ಐದು ಮಾತ್ರ ಇಂದು ಉಳಿದುಕೊಂಡಿವೆ.

ಇಡೀ ದೇವಾಲಯದ ಸಂಕೀರ್ಣವನ್ನು ಮರಳುಗಲ್ಲಿನಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಸಂಕೀರ್ಣವನ್ನು ಪರ್ಮಾರ್ ರಾಜವಂಶದ ರಾಜ ದುಶಾಲರಾಜ ಮತ್ತು ಅವನ ವಂಶಸ್ಥರು ನಿರ್ಮಿಸಿದ್ದಾರೆ ಎಂದು ಹಲವಾರು ಶಾಸನಗಳು ಸೂಚಿಸುತ್ತವೆ. ಎಲ್ಲಾ ದೇವಾಲಯಗಳನ್ನು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ, ಗರ್ಭಗುಡಿಯ ಎತ್ತರದ ಗೋಪುರಗಳು ಆಕಾಶದ ಎತ್ತರಕ್ಕೆ ನಿರ್ಮಿಸಲಾಗಿದೆ. ಎಲ್ಲಾ ದೇವಾಲಯದ ಗೋಡೆಗಳು ರಾಮಾಯಣ, ಮಹಾಭಾರತ, ಶಿವ-ಮಹಾಪುರಾಣ, ಮತ್ತು ವಿಷ್ಣು-ಪುರಾಣಗಳಂತಹ ಮಹಾಕಾವ್ಯಗಳ ಚಿತ್ರಣಗಳಿಂದ ಅಲಂಕರಿಸಲ್ಪಟ್ಟಿವೆ.

ಅವಶೇಷಗಳಾಗಿ ಮಾರ್ಪಟ್ಟ ದೇವಸ್ಥಾನ
ಬಾರ್ಮರ್ ನಿಂದ 35 ಕಿಮೀ ದೂರದಲ್ಲಿರುವ ಕಿರಾಡು ದೇವಾಲಯವು ಐದು ದೇವಾಲಯಗಳನ್ನು ಹೊಂದಿರುವ ಸುಂದರ ತಾಣವಾಗಿದೆ. ದಕ್ಷಿಣದ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯಗಳು ತಮ್ಮ ವಾಸ್ತುಶಿಲ್ಪದಿಂದಲೇ ಹೆಸರುವಾಸಿಯಾಗಿದೆ. ಆದರೆ ಈಗ ಶಿವ ಮತ್ತು ವಿಷ್ಣುವಿನ ದೇವಾಲಯಗಳನ್ನು ಬಿಟ್ಟರೆ ಉಳಿದ ದೇವಾಲಯಗಳು ಅವಶೇಷಗಳಾಗಿ ಮಾರ್ಪಟ್ಟಿವೆ.

Advertisement

ರಾತ್ರಿ ಉಳಿದರೆ ಕಲ್ಲಾಗುತ್ತಾರೆ:
ಈ ದೇವಾಲಯವು ಎಷ್ಟು ಭಯಾನಕವಾಗಿದೆ ಎಂದರೆ ಇಲ್ಲಿಗೆ ಭೇಟಿ ನೀಡುವ ಜನರು ಸಂಜೆ ಸೂರ್ಯ ಮುಳುಗಿದ ಕೂಡಲೇ ಜನ ಇಲ್ಲಿಂದ ಹೊರಡುತ್ತಾರೆ. ಇದರ ಹಿಂದೆ ಬಹಳ ಭಯಾನಕ ಕಾರಣವಿದೆ. ಸೂರ್ಯಾಸ್ತದ ನಂತರ ಈ ದೇವಾಲಯದಲ್ಲಿ ಉಳಿದುಕೊಂಡರೆ ಶಾಶ್ವತವಾಗಿ ಶಿಲೆಯಾಗುತ್ತಾರೆ ಎಂದು ನಂಬಲಾಗಿದೆ. ಇದರಿಂದಾಗಿ ಇಂದಿಗೂ ಇಲ್ಲಿಗೆ ಭೇಟಿ ನೀಡುವವರು ಸಂಜೆಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತಾರೆ ಎನ್ನಲಾಗುತ್ತಿದೆ.

ಪುರಾಣ ಏನು ಹೇಳುತ್ತೆ:
ಪುರಾಣಗಳ ಪ್ರಕಾರ ಈಗಿನ ಕಿರಾಡು ಹಿಂದೆ ಕಿರಾಡ್ ಕೋಟ್ ಎಂದು ಕರೆಯಲ್ಪಡುತ್ತಿತ್ತು. ಈ ದೇವಾಲಯದ ಸಂಕೀರ್ಣವನ್ನು ಪರ್ಮಾರ್ ರಾಜವಂಶದ ರಾಜ ದುಶಾಲರಾಜ ಮತ್ತು ಅವನ ವಂಶಸ್ಥರು ನಿರ್ಮಿಸಿದ್ದಾರೆ ಎಂದು ಹಲವಾರು ಶಾಸನಗಳು ಸೂಚಿಸುತ್ತವೆ. ಇದಾದ ಬಳಿಕ ಆರನೆಯ ಶತಮಾನದಿಂದ ರಜಪೂತ ವಂಶದ ಕಿರಾಡು ಮನೆತನದವರು ಆಳುತ್ತಿದ್ದರಂತೆ. ಬಳಿಕ ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದ ವೇಳೆಗೆ ಈ ಆಳ್ವಿಕೆ ಸೋಮೇಶ್ವರ ರಾಜನದ್ದಾಗಿತ್ತು ಎಂದು ಹೇಳಲಾಗುತ್ತಿದೆ ಈ ಸಮಯದಲ್ಲಿ ಈ ಪ್ರದೇಶದ ಜನರು ಶಿವಭಕ್ತರಾಗಿದ್ದರು ಎನ್ನಲಾಗಿದೆ ಹಾಗಾಗಿ ಈ ಪ್ರದೇಶ ಕೂಡ ಸಮೃದ್ಧವಾಗಿತ್ತು. ಪರಿಣಾಮವಾಗಿ ಈ ಪ್ರದೇಶದಲ್ಲಿ ಹಲವಾರು ಶಿವದೇವಾಲಯಗಳು ನಿರ್ಮಾಣಗೊಂಡವು ಎಂದು ಹೇಳಲಾಗುತ್ತಿದೆ. ಈ ಪ್ರದೇಶದ ಆಳ್ವಿಕೆ ನಡೆಸಿದ್ದ ರಾಜ ಸೋಮೇಶ್ವರ ನಾಡಿನ ಅಭ್ಯುದಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ. ಈ ಕಾರಣದಿಂದ ಕಿರಾಡ್ ಪ್ರದೇಶ ಸುಭಿಕ್ಷವಾಗಿ ಬೆಳೆದಿತ್ತು ಇದು ತುರುಷ್ಕರ ಕೆಂಗಣ್ಣಿಗೆ ಗುರಿಯಾಗಿ ಈ ಪ್ರದೇಶಕ್ಕೆ ದಂಡೆತ್ತಿ ಬಂದ ತುರುಷ್ಕರು ಇಲ್ಲಿನ ಸಂಪತ್ತನ್ನು ಕೊಳ್ಳೆಹೊಡೆಯುತ್ತಾರೆ.

ಸಾಧು ಸಂತರ ಮೊರೆ ಹೋದ ರಾಜ:
ತುರುಷ್ಕರು ಇತ್ತ ತನ್ನ ಸಾಮ್ರಾಜ್ಯದ ಸಂಪತ್ತನ್ನು ದೋಚಿದ ಬೆನ್ನಲ್ಲೇ ಎಚ್ಚೆತ್ತ ರಾಜ ಸೋಮೇಶ್ವರ ತನ್ನ ಸಾಮ್ರಾಜ್ಯದ ಮೇಲೆ ಇನ್ನಷ್ಟು ದಾಳಿಗಳು ನಡೆಯಬಹುದು ಎಂದು ಮನಗಂಡು ತನ್ನ ಸಾಮ್ರಾಜ್ಯವನ್ನು ರಕ್ಷಿಸಲು ಸಾಧು ಸಂತರ ಸಲಹೆ ಪಡೆಯಲು ಮುಂದಾಗುತ್ತಾನೆ ಅದರಂತೆ ತನ್ನ ಸಾಮ್ರಾಜ್ಯಕ್ಕೆ ಹಲವಾರು ಸಾಧು ಸಂತರನ್ನು ಆಹ್ವಾನಿಸುತ್ತಾನೆ ಅದರಂತೆ ಸಾಧುವೊಬ್ಬರು ತನ್ನ ಅನುಯಾಯಿಗಳೊಂದಿಗೆ ರಾಜನ ಸಾಮ್ರಾಜ್ಯಕ್ಕೆ ಬಂದು ಎದುರಾಳಿಗಳ ದಾಳಿಯನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡರು ಸಾಧು ಸಂತರ ಆಜ್ಞೆಯಂತೆ ಸಾಮ್ರಾಜ್ಯ ಮತ್ತೆ ಸುಭಿಕ್ಷೆಯಾಗಿ ಬೆಳೆಯಿತು ಇದಾದ ಬಳಿಕ ಸಂತರು ತಮ್ಮ ಅನುಯಾಯಿಯೊಬ್ಬರನ್ನು ಸಾಮ್ರಾಜ್ಯದಲ್ಲಿ ಬಿಟ್ಟು ತಮ್ಮ ಊರಿಗೆ ಮರಳುತ್ತಾರೆ.

ಅನುಯಾಯಿಯನ್ನು ಮರೆತು ಬಿಟ್ಟ ಜನ ಕೋಪಗೊಂಡ ಸಂತರಿಂದ ಶಾಪ:
ಇತ್ತ ಸಾಮ್ರಾಜ್ಯ ಸಂಪತ್ಭರಿತವಾಗಿ ತುಂಬಿ ತುಳುಕುತ್ತಿದ್ದರೆ ಅತ್ತ ಸಾಮ್ರಾಜ್ಯ ಸುಭಿಕ್ಷೆಯಾಗಲು ಕಾರಣಕರ್ತನಾಗಿರುವ ಅನುಯಾಯಿಯನ್ನು ಊರಿನ ಜನ ನಿರ್ಲಕ್ಷಿಸುತ್ತಿದ್ದರು ಒಂದು ದಿನ ಅನುಯಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಆದರೆ ಆತನ ಅರೋಗ್ಯ ನೋಡಿಕೊಳ್ಳುವವರು ಯಾರೂ ಇಲ್ಲದಾಗಿತ್ತು ಆ ವೇಳೆ ಕುಂಬಾರನೊಬ್ಬನ ಪತ್ನಿ ಈ ಅನುಯಾಯಿಯ ಅರೋಗ್ಯ ಬಗ್ಗೆ ಕಾಳಜಿ ವಹಿಸಿದ್ದಳು ಎನ್ನಲಾಗಿದೆ ಹೀಗೆ ಕಾಲಕ್ರಮೇಣ ಸಂತರು ಈ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದ ಅನುಯಾಯಿಯನ್ನು ಈ ಪ್ರದೇಶದ ಜನ ಯಾವ ರೀತಿ ನೋಡಿಕೊಂಡಿದ್ದರು ಎಂಬುದು ತಿಳಿದು ಕೋಪಗೊಂಡ ಸಂತರು ಎಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲವೋ ಅಲ್ಲಿ ಮನುಷ್ಯರೂ ಬದುಕಲು ಅನರ್ಹರು ಎಂದು ಹೇಳಿ ಆ ಪ್ರದೇಶದ ಜನರು ಕಲ್ಲಾಗುವಂತೆ ಶಪಿಸುತ್ತಾರೆ. ಅದರಂತೆ ಆ ಪ್ರದೇಶದಲ್ಲಿದ್ದ ಎಲ್ಲಾ ಜನರು ಕಲ್ಲಾಗಿ ಮಾರ್ಪಡುತ್ತಾರೆ( ಅನುಯಾಯಿಯ ಅರೋಗ್ಯ ಉಪಚರಿಸಿದ ಮಹಿಳೆಯೊಬ್ಬರನ್ನು ಬಿಟ್ಟು).

ಅನುಯಾಯಿಯ ಆರೈಕೆ ಮಾಡಿದ ಮಹಿಳೆಯೂ ಕಲ್ಲಾದಳು:
ಅತ್ತ ಸಂತರು ಊರಿನ ಜನರಿಗೆ ಕಲ್ಲಾಗುವಂತೆ ಶಾಪ ನೀಡಿದ ಬಳಿಕ ಅನುಯಾಯಿಯ ಆರೈಕೆ ಮಾಡಿದ ಮಹಿಳೆಗೆ ಜೀವದಾನ ನೀಡಿ ಹಿಂತಿರುಗಿ ನೋಡದೆ ಕತ್ತಲಾಗುವ ಮೊದಲು ಈ ಪ್ರದೇಶವನ್ನು ಬಿಟ್ಟು ಹೋಗುವಂತೆ ಸಲಹೆ ನೀಡುತ್ತಾರೆ. ಒಂದು ವೇಳೆ ಹಿಂತಿರುಗಿ ನೋಡಿದರೆ ನೀನು ಕೂಡಾ ಕಲ್ಲಾಗುತ್ತೀಯಾ ಎಂದು ಸಂತರು ಹೇಳುತ್ತಾರೆ ಇದನ್ನು ಕೇಳಿದ ಮಹಿಳೆ ಕತ್ತಲಾಗುವ ಮೊದಲೇ ಊರು ಬಿಟ್ಟು ಹೊರಡುತ್ತಾಳೆ ಆದರೆ ಗಡಿ ಪ್ರದೇಶ ದಾಟಿದ ಕೂಡಲೇ ಒಮ್ಮೆ ಹಿಂತಿರುಗಿ ನೋಡುತ್ತಾಳೆ ಈ ವೇಳೆ ಸಂತರು ಹೇಳಿದಂತೆ ಆಕೆಯೂ ಕಲ್ಲಾಗಿ ಹೋಗುತ್ತಾಳೆ.

ದೇವಸ್ಥಾನದಲ್ಲಿದೆ ಮಹಿಳೆಯ ಮೂರ್ತಿ:
ಸಂತರ ಶಿಷ್ಯನ ಆರೈಕೆ ಮಾಡಿದ ಕುಂಬಾರ ಮಹಿಳೆಯ ಕಲ್ಲಿನ ಮೂರ್ತಿಯನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ, ಬಾರ್ಮರ್ ಬಳಿ ಜೈನ ದೇವಾಲಯ, ಬಾರ್ಮರ್ ಕೋಟೆ ಮತ್ತು ಮರಳು ದಿಬ್ಬಗಳನ್ನು ಇಂದಿಗೂ ಕಾಣಬಹುದಾಗಿದೆ. ಕಿರಾಡುವಿನ ನಿಗೂಢತೆಯಿಂದಾಗಿ ಈ ದೇವಾಲಯವನ್ನು ನೋಡಲು ಜನರು ಬರುತ್ತಾರೆ. ಆದರೆ, ಕಿರಾಡುವಿನ ಶಾಪ ನಿಜವೋ ಕಾಲ್ಪನಿಕವೋ ಹೇಳಲಾಗದು. ಆದರೆ ಬಂಜರು ಸ್ಥಳದಲ್ಲಿರುವುದರಿಂದ ಈ ಸ್ಥಳವು ನಿಗೂಢವಾಗಿ ಕಾಣುತ್ತದೆ. ಇಂದಿಗೂ ಇಲ್ಲಿಗೆ ಭೇಟಿ ನೀಡುವ ಜನ ಸಂಜೆಯಾಗುತ್ತಿದ್ದಂತೆ ಹೊರ ನಡೆಯುತ್ತಾರೆ.

ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ:
ಇಲ್ಲಿನ ದೇವಸ್ಥಾನದ ಹಿಂದಿರುವ ಕತೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಶತಮಾನಗಳಿಂದ ಜನರಿಂದ ಜನರಿಗೆ ಹೇಳಿಕೊಂಡು ಬಂದಿರುವ ಈ ಕಥೆ ಎಷ್ಟು ಪ್ರಭಾವ ಬೀರಿದೆ ಎಂದರೆ ಇಂದಿಗೂ ಜನ ಇಲ್ಲಿಗೆ ಭೇಟಿ ನೀಡಲು ಹೆದರುತ್ತಾರೆ ಒಂದು ವೇಳೆ ಧೈರ್ಯ ಮಾಡಿ ಬಂದರೆ ಸಂಜೆಯಾಗುತ್ತಿದ್ದಂತೆ ವಾಪಸ್ ಹೋಗುತ್ತಾರೆ.

– ಸುಧೀರ್ ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next