ಕೊನೆಯದಾಗಿ ನಮ್ಮನ್ನು ನಾವು ಗಮನಿಸಿಕೊಂಡದ್ದು, ಒಪ್ಪಿಕೊಂಡದ್ದು, ಜತೆಗೆ ಅಪ್ಪಿಕೊಂಡದ್ದು ಬಹುಶಃ ಇನ್ನೊಬ್ಬರು ನಮ್ಮನ್ನು ಮೆಚ್ಚಿಕೊಂಡು ಹಚ್ಚಿಕೊಂಡಾಗಲೇ ಅನಿಸುತ್ತದೆ. ಏಕಾಂತದಲ್ಲಿ ಬರೀ ಅನ್ಯರ ನಿರಾಕರಣೆಗಳಿಗೆ ನಮ್ಮ ಕೆಲವು ಕಾರಣಗಳನ್ನು ಹೊಂದಿಸುತ್ತಾ ದುಃಖೀಸುತ್ತಿರುತ್ತೇವೆ.
ಆ ಬಗೆಯ ಏಕಾಂತದಲ್ಲಿ ನಾವು ಪರಿತಪಿಸಬೇಕಾದ ವಿಚಾರವೆಂದರೆ ಈಗ ನಾವು ಹೀಗಿರಲು ಯಾವುದೋ ಸಂದರ್ಭದಲ್ಲಿ ನಾವು ನೀಡಿದ ಪ್ರತಿಕ್ರಿಯೆಯೋ ಅಥವಾ ತೆಗೆದುಕೊಂಡ ನಿರ್ಧಾರವೋ ಮುಖ್ಯ ಕಾರಣವಾಗಿರುತ್ತದೆ ಎಂಬುದು. ಉದಾಹರಣೆಗೆ ಯಾರೊ ಒಬ್ಬರು ನಮ್ಮ ಜತೆಗೆ ಆಡಿದ್ದು ಬರಿಯ ಮಾತುಗಳಷ್ಟೇ, ಆದರೆ ಭಾವುಕತೆಯ ಹೆಸರಲ್ಲಿ ನೊಂದುಕೊಂಡದ್ದು ನಾವೆ ಅಲ್ಲವೇ.
ಒಂದೇ ಕರೆಂಟು ಕಂಬದ ಎರಡು ಬದಿಗಳಲ್ಲಿ ಆತು ಕೂತ ಆ ಸಂಜೆ, ಹುಡುಗ ಸಣ್ಣದನಿಯಲ್ಲಿ ವಿನಂತಿಸಿಕೊಳ್ಳುತ್ತಾನೆ. ನಾ ಸತ್ತಾಗ ನನ್ನ ತಲೆಯನ್ನ ನಿನ್ನ ಎದೆಗವಚಿ ಕೊಂಚ ಹೊತ್ತು ಇರಿಸಿಕೊಳ್ಳುವೆಯಾ, ಅಂದು ನಮ್ಮ ಪ್ರೇಮ ಪೂಜ್ಯ ಭಾವದ ಪರಮಾವಧಿಯನ್ನು ತಲುಪುತ್ತದೆ, ಅವನಲ್ಲಿ ಇನ್ನೂ ಮಾತುಗಳುಳಿದಿದ್ದವು ಅಷ್ಟರಲ್ಲಿ, ಹುಡುಗಿ ಹೂಂ ಎಂದು ಸುಮ್ಮನಾಗುತ್ತಾಳೆ. ಹುಡುಗನ ಕಣ್ಣ ಹನಿಗಳು ಅಲ್ಲಿ ಹುಟ್ಟಿ ಸಾಯುತ್ತಿರುತ್ತವೆ.
ಅಂದಹಾಗೆ ಅವರ ನಡುವೆ ಇರುವ ಕರೆಂಟು ಕಂಬ ಮುರಿದ ಪ್ರೇಮದ ಪ್ರತೀಕ. ಕೊನೆಯ ಭೇಟಿಗೆ ಅವರಿಬ್ಬರೂ ಆ ಸಂಜೆ ಕಡಲ ಕಿನಾರೆಯ ಕರೆಂಟು ಕಂಬದಡಿಯಲ್ಲಿ ಪ್ರಕಟವಾಗಿದ್ದರು. ಸತ್ತುಹೋಗುವಷ್ಟು ಅವಳಲ್ಲಿಲ್ಲದ ಒಲವನ್ನು ಸ್ವತಃ ಬೇಡಿಕೊಂಡ, ತೀಡಿಕೊಂಡ ಅವನ ಇಶಾರೆಗಳೆಲ್ಲವೂ ಅಂದು ಸಣ್ಣಗೆ ಪೂರ್ಣ ಚುಕ್ಕಿಯನ್ನಿಟ್ಟುಕೊಂಡಿದ್ದವು.
ಜೀವನದ ಮುಖ್ಯ ಘಟ್ಟವಾದ ಪದವಿಯ ಮೂರು ವರ್ಷಗಳನ್ನು ಅವಳಲ್ಲಿಲ್ಲದ ಪ್ರೇಮದ ಹುಡುಕಾಟದಲ್ಲಿ, ಅವಳನ್ನ ಹೇಗಾದರೂ ಸಂಧಿಸಬೇಕೆಂಬ ಹಠದಲ್ಲಿ ಪ್ರೀತಿಯೆಂಬ ಎರಡಕ್ಷರದ ಮಾಯೆಯ ಹೆಸರಿಗೆ ನಿರಾಕರಣೆಗಳಿಗೊಳಪಟ್ಟು ಸುಖಾಸುಮ್ಮನೆ ಕಳೆದುಬಿಟ್ಟಿದ್ದ ಆತ.
ಅಸಲಿಗೆ ಬದುಕು ಖಾಲಿಯಾಗಬೇಕೆಂದು ಅದೆಷ್ಟೋ ಜನರು ವರ್ಸಾನುಗಟ್ಟಲೆ ತಪಸ್ಸುಗೈಯ್ಯುವಾಗ ಆತ ತಾನು ಖಾಲಿಯಾಗಿಬಿಟ್ಟೆ ಎಂದು ಅವಳು ಎದ್ದು ಹೋದಾಗ ಬಿಕ್ಕಳಿಸಿ ಅತ್ತಿದ್ದ. ಆ ಒಂದು ಆಳುವಿಗೆ ಕಾರಣ ಅವನು ಗಮನಿಸಿದ ಅವನದೇ ಔನ್ನತ್ಯ. ಬದುಕಿನ ಅಂತ್ಯದಲ್ಲಿ ಜಗತ್ತು ಎಷ್ಟು ಚಂದದ ಹೃದಯವನ್ನು ಇಟ್ಟುಕೊಂಡಿದ್ದೆ ಎಂದು ನೋಡುವುದಿಲ್ಲ, ಬದಲಾಗಿ ಆ ಚಂದದ ಹೃದಯದಲ್ಲಿ ಏನನ್ನೆಲ್ಲಾ ಮಾಡಿದೆ ಎಂದಷ್ಟೇ ನೆನಪಿಟ್ಟುಕೊಳ್ಳುತ್ತದೆ.
-ದರ್ಶನ್ ಕುಮಾರ್
ವಿವಿ ಕಾಲೇಜು,ಮಂಗಳೂರು