Advertisement

Lepakshi Temple: ಗಾಳಿಯಲ್ಲಿ ತೇಲಾಡುತ್ತೆ ಈ ದೇವಾಲಯದ ಸ್ತಂಭ, ಇದರ ಹಿಂದಿದೆ ಅದ್ಬುತ ಶಕ್ತಿ

05:49 PM Sep 02, 2024 | ಸುಧೀರ್ |

ದೇಶದಲ್ಲಿ ಅದೆಷ್ಟೋ ದೇವಾಲಯಗಳಿವೆ ಪ್ರತಿಯೊಂದು ದೇವಾಲಯವೂ ಅದರದ್ದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುತ್ತವೆ. ಅಂತಹ ಒಂದು ವಿಶಿಷ್ಟವಾದ ದೇವಾಲಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿಯೂ ಇದೆ. ಈ ದೇವಾಲಯದ ರಹಸ್ಯ ಏನೆಂದರೆ ಒಂದು ಕಂಬವು ಗಾಳಿಯಲ್ಲಿ ತೇಲುವುದು, ಆದರೆ ಇಲ್ಲಿಯವರೆಗೆ ಯಾರಿಗೂ ಅದರ ರಹಸ್ಯವನ್ನು ಅರಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ಇಲ್ಲಿನ ವಾಸ್ತುಶಿಲ್ಪ, ಕೆತ್ತನೆ ಕಾರ್ಯಗಳು ಎಂಥವರನ್ನೂ ಇಲ್ಲಿಗೆ ಒಮ್ಮೆ ಭೇಟಿ ನೀಡುವಂತೆ ಮಾಡುತ್ತವೆ.

Advertisement

ದೇವಾಲಯದ ಹೆಸರೇನು?

ಈ ದೇವಾಲಯದ ಹೆಸರು ಲೇಪಾಕ್ಷಿ ದೇವಾಲಯ, ಇದನ್ನು ‘ಹ್ಯಾಂಗಿಂಗ್ ಪಿಲ್ಲರ್ ದೇವಾಲಯ’ ಎಂದೂ ಕೂಡ ಕರೆಯುತ್ತಾರೆ. ಇದನ್ನು ಸುಮಾರು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ದೇವಾಲಯದಲ್ಲಿ ಶಿವ, ವಿಷ್ಣು ಹಾಗೂ ವೀರಭದ್ರ ದೇವರನ್ನು ಪೂಜಿಸಲಾಗುತ್ತದೆ. ದೇವಾಲಯವು ತನ್ನದೇ ಆದ ವಾಸ್ತುಶಿಲ್ಪ, ಶ್ರೀಮಂತ ಇತಿಹಾಸ ಮತ್ತು ಆಕರ್ಷಕ ದಂತಕಥೆಗಳಿಗೆ ಹೆಸರುವಾಸಿಯಾಗಿದೆ. ಇದು ವಿಜಯನಗರ ಶೈಲಿಯ ಶಿಲ್ಪಕಲೆಗಳನ್ನು ಹೊಂದಿದ್ದು, ಇಲ್ಲಿನ ಕೆತ್ತನೆಗಳು, ರೋಮಾಂಚಕವಾಗಿರುವ ವರ್ಣಚಿತ್ರಗಳು ಮತ್ತು ಭವ್ಯವಾದ ರಚನೆಗಳಿಂದ ರೂಪಿಸಲ್ಪಟ್ಟಿದೆ.

70 ಸ್ತಂಭಗಳಲ್ಲಿ ಒಂದು ಸ್ತಂಭ ವಿಭಿನ್ನ:
ಈ ದೇವಾಲಯದಲ್ಲಿ ಒಟ್ಟು 70 ಸ್ತಂಭಗಳಿದ್ದು, ಅವುಗಳಲ್ಲಿ ಒಂದು ಸ್ತಂಭವು ವಿಭಿನ್ನವಾಗಿದ್ದು ಈ ಸ್ತಂಭವನ್ನು ಆಕಾಶಸ್ತಂಭ ಎಂದೂ ಕರೆಯುತ್ತಾರೆ. ಈ ಸ್ತಂಭದ ತಳಭಾಗ ನೆಲದಿಂದ ಸುಮಾರು ಅರ್ಧ ಇಂಚು ಎತ್ತರದಲ್ಲಿದ್ದು ನೆಲದ ಸಂಪರ್ಕ ಹೊಂದಿಲ್ಲವಾಗಿದೆ, ಅಲ್ಲದೆ ಈ ಸ್ತಂಭದ ತಳಭಾಗದಲ್ಲಿ ಭಕ್ತರು ಬಟ್ಟೆಯನ್ನು ಸುಲಭವಾಗಿ ಸರಿಸಿದರೆ ಭಕ್ತರ ಕುಟುಂಬದಲ್ಲಿ ಅರೋಗ್ಯ ಸಮಸ್ಯೆ ದೂರವಾಗಿ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ ಎಂಬುದು ಭಕ್ತರ ನಂಬಿಕೆ.

ತಪ್ಪೊಪ್ಪಿಕೊಂಡ ಬ್ರಿಟಿಷ್ ಇಂಜಿನಿಯರ್:
ದೇವಾಲಯದಲ್ಲಿರುವ 70 ಕಂಬಗಳಲ್ಲಿ 69 ಕಂಬಗಳು ದೇವಸ್ಥಾನದ ಅಷ್ಟು ಭಾರವನ್ನು ಹೊತ್ತುಕೊಂಡಿದೆ ಆದರೆ ತೇಲಾಡುವ ಕಂಬ ಯಾವುದಕ್ಕೂ ಆಧಾರವಾಗದೆ ಸಾಮಾನ್ಯ ಕಂಬವಾಗಿದೆಯೇ ಹೊರತು ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಬ್ರಿಟಿಷ್ ಇಂಜಿನಿಯರ್ ಹೇಳಿಕೆ ನೀಡಿದ್ದ. ಇದಾದ ಬಳಿಕ 1902ರಲ್ಲಿ ಮತ್ತೊಮ್ಮೆ ಸ್ತಂಭದ ರಹಸ್ಯ ಭೇದಿಸಲು ತನ್ನ ತಂಡದೊಂದಿಗೆ ಬಂದ ಇಂಜಿನಿಯರ್ ಸುತ್ತಿಗೆಯಿಂದ ತೇಲಾಡುವ ಕಂಬಕ್ಕೆ ಬಡಿಯುತ್ತಾನೆ ಆದರೆ ಇಂಜಿನಿಯರ್ ಬಡಿದ ಪೆಟ್ಟಿಗೆ ತೇಲಾಡುವ ಕಂಬಕ್ಕೆ ಏನೂ ಆಗಲಿಲ್ಲ ಬದಲಿಗೆ ಪಕ್ಕದಲ್ಲಿದ್ದ ಮತ್ತೊಂದು ಕಂಬದಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಇದರಿಂದ ಮೂಕ ವಿಸ್ಮಿತನಾದ ಇಂಜಿನಿಯರ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಹಿಂಪಡೆದು ದೇವಸ್ಥಾನದ 70 ಕಂಬಗಳಲ್ಲಿ ಹೆಚ್ಚಿನ ಆಧಾರ ಹೊಂದಿರುವ ಕಂಬವೇ ತೇಲಾಡುವ ಕಂಬ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದನಂತೆ.

Advertisement

ದೇವಾಲಯದ ನಿರ್ಮಾಣದ ಹಿಂದೆ ಭಿನ್ನ ಅಭಿಪ್ರಾಯ:
ಲೇಪಾಕ್ಷಿ ದೇವಾಲಯದ ನಿರ್ಮಾಣದ ಹಿಂದೆ ಭಿನ್ನ ಅಭಿಪ್ರಾಯಗಳಿದ್ದು ಕೂರ್ಮಸೀಲಂ ಬೆಟ್ಟಗಳ ಮೇಲೆ ನಿರ್ಮಿಸಲಾದ ಈ ದೇವಾಲಯವನ್ನು ಆಮೆಯ ಆಕಾರದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈ ದೇವಾಲಯವನ್ನು 16 ನೇ ಶತಮಾನದಲ್ಲಿ ವಿಜಯನಗರದ ರಾಜನೊಂದಿಗೆ ಕೆಲಸ ಮಾಡಿದ ವಿರೂಪಣ್ಣ ಮತ್ತು ವೀರಣ್ಣ ಎಂಬ ಇಬ್ಬರು ಸಹೋದರರು ನಿರ್ಮಿಸಿದರು ಎಂದು ಹೇಳಲಾಗುತ್ತಿದ್ದು. ಇನ್ನೊಂದು ಅಭಿಪ್ರಾಯದ ಪ್ರಕಾರ ಈ ದೇವಾಲಯವನ್ನು ಅಗಸ್ತ್ಯ ಋಷಿ ನಿರ್ಮಿಸಿದ ಎಂಬುದು ಪೌರಾಣಿಕ ನಂಬಿಕೆ.

ದೇವಳದ ಹಿಂದಿರುವ ಪೌರಾಣಿಕ ಹಿನ್ನೆಲೆ:
ತಾಯಿ ಸೀತೆಯನ್ನು ಅಪಹರಿಸುತ್ತಿದ್ದ ರಾವಣನಿಂದ ಸೀತೆಯನ್ನು ರಕ್ಷಿಸಲು ಜಟಾಯು ಎಂಬ ಪಕ್ಷಿ ಹೋರಾಡಿ ಕೊನೆಗೆ ತೀವ್ರವಾಗಿ ಗಾಯಗೊಂಡು ಆಕಾಶದಿಂದ ಬೀಳುತ್ತದೆ ಅದೇ ಸಮಯಕ್ಕೆ ರಾಮನು ಸೀತೆಯನ್ನು ಹುಡುಕಿಕೊಂಡು ಈ ಮಾರ್ಗದಲ್ಲಿ ಬರುತ್ತಿರಬೇಕಾದರೆ ಹಕ್ಕಿಯೊಂದು ಗಾಯಗೊಂಡು ಬಿದ್ದಿರುವುದನ್ನು ಕಂಡು ಎದ್ದೇಳು ಎಂದು ಹೇಳಲು ರಾಮ ಲೇ ಪಕ್ಷಿ ಎಂದು ಕೂಗುತ್ತಾನೆ. ಇದೇ ಹೆಸರು ಮುಂದಕ್ಕೆ ಲೇಪಾಕ್ಷಿ ಎಂದು ಕರೆಯಲ್ಪಟ್ಟಿತು ಎನ್ನಲಾಗಿದೆ.

ದೇವಳದ ಇತರ ಪ್ರಮುಖ ಆಕರ್ಷಣೆಗಳು:
ವೀರಭದ್ರ ವಿಗ್ರಹ:
ಈ ದೇವಾಲಯವು ಶಿವನ ಉಗ್ರ ರೂಪವಾದ ವೀರಭದ್ರನಿಗೆ ಸಮರ್ಪಿತವಾಗಿದೆ, ನಾಲ್ಕು ತೋಳುಗಳು, ಆಯುಧಗಳು ಮತ್ತು ತಲೆಬುರುಡೆಯನ್ನು ಹಿಡಿದಿರುವ ಉಗ್ರ ಸ್ವರೂಪಿಯಾಗಿ ಚಿತ್ರಿಸಲಾಗಿದೆ. ಈ ವಿಗ್ರಹವು ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದ್ದು ಸುಮಾರು 12 ಅಡಿ ಎತ್ತರವಿದೆ. ವಿಗ್ರಹವು ಆಭರಣಗಳು ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಅದರ ಮುಖದಲ್ಲಿ ಪ್ರಶಾಂತ ಭಾವವನ್ನು ಹೊಂದಿದೆ. ಈ ವಿಗ್ರಹವು ಅತ್ಯಂತ ಶಕ್ತಿಶಾಲಿಯಾಗಿದೆ ಮತ್ತು ನಂಬಿಕೆ – ಭಕ್ತಿಯಿಂದ ಪ್ರಾರ್ಥಿಸುವ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತದೆ ಎಂದು ಹೇಳಲಾಗುತ್ತದೆ.

ನಾಗಲಿಂಗ:
ದೇವಾಲಯದ ಅತ್ಯಂತ ಆಕರ್ಷಕ ವಿಷಯವೆಂದರೆ ನಾಗಲಿಂಗ, ದೇವಾಲಯದ ಪೂರ್ವ ದಿಕ್ಕಿನಲ್ಲಿ ಶಿವಲಿಂಗವನ್ನು ಸುತ್ತಿಕೊಂಡ ರೀತಿಯಲ್ಲಿ ಕೆತ್ತಲಾದ ಏಳು ಹೆಡೆಯ ನಾಗದೇವರನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಇದನ್ನು ನಾಗಲಿಂಗಂ ಎಂದು ಕರೆಯುತ್ತಾರೆ. ನಾಗಲಿಂಗವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ ಮತ್ತು ಸುಮಾರು 27 ಅಡಿ ಎತ್ತರವಿದೆ. ನಾಗಲಿಂಗದ ಹಿಂದಿನ ದಂತಕಥೆಯೆಂದರೆ, ದೇವಾಲಯದ ಮುಖ್ಯ ವಾಸ್ತುಶಿಲ್ಪಿಗಳಾದ ವೀರಣ್ಣ ಮತ್ತು ವಿರೂಪಣ್ಣ ಎಂಬ ಇಬ್ಬರು ಸಹೋದರರಿಂದ ಇದನ್ನು ಕೆತ್ತಲಾಗಿದೆ ಎನ್ನಲಾಗಿದೆ. ತಮ್ಮ ತಾಯಿ ಊಟವನ್ನು ತಯಾರಿಸುವ ವೇಳೆಯಲ್ಲಿ ಸಹೋದರರು ಕೇವಲ ಒಂದು ಗಂಟೆಯ ಅವಧಿಯಲ್ಲಿ ನಾಗಲಿಂಗವನ್ನು ಕೆತ್ತಿ ಮುಗಿಸಿದ್ದಾರೆ ಎನ್ನುವುದು ವಿಶೇಷ.

ನಂದಿ:
ದೇವಾಲಯದ ಮತ್ತೊಂದು ಗಮನಾರ್ಹ ಆಕರ್ಷಣೆಯೆಂದರೆ ನಂದಿ, ಇದು ಶಿವನ ವಾಹನವಾಗಿದ್ದು. ಸುಮಾರು 15 ಅಡಿ ಎತ್ತರ ಮತ್ತು 27 ಅಡಿ ಉದ್ದವಿದೆ. ಇದು ಭಾರತದ ಅತಿದೊಡ್ಡ ನಂದಿ ಪ್ರತಿಮೆಗಳಲ್ಲಿ ಒಂದಾಗಿದೆ ಮತ್ತು ಇದು ದೇವಾಲಯದಿಂದ ಸುಮಾರು 200 ಮೀಟರ್ ದೂರದಲ್ಲಿದೆ. ನಂದಿಯು ಶಿವಲಿಂಗ ಮತ್ತು ನಾಗಲಿಂಗಕ್ಕೆ ಮುಖಾಮುಖಿಯಾಗುವಂತೆ ನಿರ್ಮಿಸಲಾಗಿದೆ.

ಸೀತೆಯ ಹೆಜ್ಜೆಗುರುತು:
ದೇವಾಲಯದ ಅತ್ಯಂತ ಆಕರ್ಷಣೆಗಳಲ್ಲಿ ಒಂದು ಸೀತೆಯ ಹೆಜ್ಜೆಗುರುತು, ಇದು ರಾಮನ ಪತ್ನಿ ಸೀತಾ ದೇವಿಯ ಹೆಜ್ಜೆಗುರುತು ಎನ್ನಲಾಗಿದೆ. ದೇವಾಲಯದ ಬಂಡೆಯ ಮೇಲೆ ಹೆಜ್ಜೆಗುರುತು ಅಚ್ಚಾಗಿದ್ದು ಸುಮಾರು 9 ಇಂಚು ಉದ್ದ ಮತ್ತು 6 ಇಂಚು ಅಗಲವಿದೆ. ಸೀತೆಯ ಹೆಜ್ಜೆಗುರುತಿನ ಹಿಂದಿನ ದಂತಕಥೆಯೆಂದರೆ, ಸೀತೆಯನ್ನು ರಾಕ್ಷಸ ರಾವಣ ಅಪಹರಿಸಿದಾಗ ಸೀತೆ ತನ್ನ ಕಾಲ್ಬೆರಳು ನೆಲದ ಮೇಲೆ ಇಟ್ಟ ಜಾಗವೆಂದು ಹೇಳಲಾಗಿದೆ. ಪಾದದ ಗುರುತು ಸೀತೆಯ ಭಕ್ತಿ ಮತ್ತು ಪರಿಶುದ್ಧತೆಯ ಸಂಕೇತವಾಗಿದ್ದು ಭಕ್ತರಿಂದ ಪೂಜಿಸಲ್ಪಡುತ್ತಿದೆ.

ಲೇಪಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ:
ಲೇಪಾಕ್ಷಿ ದೇವಸ್ಥಾನವು ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6:00 ರಿಂದ ಸಂಜೆ 6:00 ವರೆಗೆ ಭಕ್ತರ ದರ್ಶನ ಮತ್ತು ಪೂಜೆಗಾಗಿ ತೆರೆದಿರುತ್ತದೆ. ಇದಲ್ಲದೆ ಶಿವರಾತ್ರಿ, ಯುಗಾದಿ ಮತ್ತು ಕಾರ್ತಿಕ ಪೂರ್ಣಿಮೆಯಂತಹ ವಿಶೇಷ ದಿನಗಳಲ್ಲಿ ಹೆಚ್ಚಿನ ಹೊತ್ತು ತೆರೆದಿರುತ್ತದೆ.

ಲೇಪಾಕ್ಷಿ ದೇವಸ್ಥಾನವನ್ನು ತಲುಪುವುದು ಹೇಗೆ:
ವಿಮಾನ, ರೈಲು ಮತ್ತು ರಸ್ತೆ ಸಾರಿಗೆ ಮೂಲಕ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ಲೇಪಾಕ್ಷಿ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದು.

ವಿಮಾನದ ಮೂಲಕ: ದೇವಸ್ಥಾನಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಆಂಧ್ರದ ಲೇಪಾಕ್ಷಿಯಿಂದ ಸುಮಾರು 120 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ದೇವಸ್ಥಾನವನ್ನು ತಲುಪಬಹುದು.

ರೈಲುಮಾರ್ಗದ ಮೂಲಕ: ದೇವಸ್ಥಾನಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಹಿಂದೂಪುರ ರೈಲು ನಿಲ್ದಾಣ, ಇದು ಸುಮಾರು 12 ಕಿ.ಮೀ ದೂರದಲ್ಲಿದೆ. ನಿಲ್ದಾಣದಿಂದ ದೇವಸ್ಥಾನವನ್ನು ತಲುಪಲು ಟ್ಯಾಕ್ಸಿ ಅಥವಾ ಆಟೋ ರಿಕ್ಷಾವನ್ನು ಪಡೆಯಬಹುದು.

ರಸ್ತೆಯ ಮೂಲಕ: ಈ ದೇವಾಲಯವು ಅನಂತಪುರ, ಬೆಂಗಳೂರು, ಹೈದರಾಬಾದ್ ಮತ್ತು ತಿರುಪತಿಯ ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ನಗರಗಳು ಮತ್ತು ಪಟ್ಟಣಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ದೇವಸ್ಥಾನವನ್ನು ತಲುಪಲು ಖಾಸಗಿ ಕಾರು, ಟ್ಯಾಕ್ಸಿ ಅಥವಾ ಬಸ್ ಗಳು ಸುಲಭವಾಗಿ ಸಿಗುತ್ತವೆ.

– ಸುಧೀರ್ ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next