ಬಾಗಲಕೋಟೆ : ಜಿಲ್ಲೆಯಲ್ಲಿ ಶುಚಿ ಯೋಜನೆ ಅನುಷ್ಠಾನದಡಿ ಸರ್ಕಾರ ನೀಡಿದ ವಿವಿಧ ಸಾಮಗ್ರಿ ವಿತರಿಸದೇ ಇಲಾಖೆ ಕಚೇರಿಯಲ್ಲಿ ಧೂಳು ತಿನ್ನಲು ಕಾರಣರಾದ ಜಿಲ್ಲಾ ಆರ್‌ಸಿಎಚ್ ಅಧಿಕಾರಿಗೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಶುಚಿ ಯೋಜನೆಯಡಿ ಶಾಲಾ ಮಕ್ಕಳು ಹಾಗೂ ಮಹಿಳೆಯರಿಗೆ ನ್ಯಾಪ್‌ಕಿನ್ ಹಂಚಿಕೆ ಮಾಡುವಲ್ಲಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಾರ್ಯಾಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಪಕಿನ್ ಮಾಡದೇ ಇರುವುದು ಕಂಡು ಬಂದಿದೆ. ಜನವರಿಯಲ್ಲಿ ಜಿಲ್ಲೆಗೆ 4 ಲಕ್ಷ ನ್ಯಾಪಕಿನ್ ಬಂದಿದ್ದು, ಕೋವಿಡ್ ಸಮಯದಲ್ಲಿಯೂ ವಿತರಿಸದೇ ಇಲಾಖೆ ಕಚೇರಿಯ ನೆಲದ ಮೇಲೆ ಇಟ್ಟಿರುವುದನ್ನು ಕಂಡು ಅತೃಪ್ತಿ ವ್ಯಕ್ತಪಡಿಸಿದರು. ಕಣ್ಣಿನ ದೋಷ ಇದ್ದವರಿಗೆ ಕನ್ನಡಕ, ಅಂಗವಿಕಲರಿಗೆ ವಾಹನ ವಿತರಿಸದೇ ಕಚೇರಿಯಲ್ಲಿಯೇ ದಾಸ್ತಾನು ಮಾಡಿ ತಮ್ಮ ಗಮನಕ್ಕೂ ತಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 2019-20ನೇ ಸಾಲಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಬಂದಿದ್ದ ಆರೋಗ್ಯ ಕಿಟ್, ಅಂಗವಿಕಲರಿಗೆ ಊರುಗೋಲು, ಟ್ರೈ ಸೈಕಲ್ ಹಾಗೂ ದಿನದ 24 ಗಂಟೆಗಳ ಆಸ್ಪತ್ರೆಗಳಿಗೆ ಅಗತ್ಯವಿರುವ ಡಸ್ಟ್ ಬಿನ್‌ಗಳು ಕಚೇರಿಯಲ್ಲಿ ಇರುವುದು ಕಂಡು ಬಂದಿದೆ. ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಋತು ಕಾಲದ ಸಮಯದಲ್ಲಿ ಉತ್ತಮ ಶುಚಿತ್ವ ಹಾಗೂ ಆರೋಗ್ಯ ಕಾಪಾಡುವ ದಿಸೆಯಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಸಮಿತಿ ಇದ್ದರೂ ಸಮಿತಿ ಗಮನಕ್ಕೆ ತರದಿರುವುದು, ಕಳೆದೆರಡು ವರ್ಷಗಳಲ್ಲಿ ಶುಚಿ ಯೋಜನೆಯಡಿ 3 ಲಕ್ಷಕ್ಕೂ ಮೇಲ್ಪಟ್ಟು ನ್ಯಾಪಕಿನ್‌ಗಳು ಇದ್ದರೂ ವಿತರಸದಿರುವುದು ಪರಿಶೀಲನೆ ವೇಳೆಯಲ್ಲಿ ತಿಳಿದು ಬಂದಿದೆ ಎಂದು ಮಾನಕರ ತಿಳಿಸಿದ್ದಾರೆ.
ಸರ್ಕಾರಿ ಶಾಲೆ, ವಸತಿ ಶಾಲೆ ಮಕ್ಕಳಿಗೆ ತಿಂಗಳಿಗೆ ಒಂದು ಪ್ಯಾಕೆಟ್ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಾಲೂಕು ಮಟ್ಟದಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ನ್ಯಾಪಕಿನ್ ಈವರೆಗೂ ವಿತರಸದೇ ತಾಲೂಕು ಆಸ್ಪತ್ರೆಯಲ್ಲಿಯೇ ಕ್ರೋಢೀಕರಿಸಲಾಗಿದೆ. ಆರೋಗ್ಯ ಜಾಗೃತಿ ವಿವಿಧ ಸಾಮಗ್ರಿ-ಆಯುರ್ವೇದಿಕ್ ಔಷಧಿ ದಾಸ್ತಾನು ಮಾಡಲಾಗಿದ್ದನ್ನು ಪ್ರಶ್ನಿಸಿ ವಿವರಣೆ ಕೇಳಲಾಗಿದೆ. ಸಮರ್ಪಕ ಉತ್ತರ ಬಾರದೇ ಹಿನ್ನೆಲೆಯಲ್ಲಿ ಸಮಿತಿ ಮುಂದೆ ಪ್ರತಿ ತಿಂಗಳು ಹಂಚಿಕೆ ಮಾಡಲಾದ ಮಾಹಿತಿ ನೀಡದೇ ಕರ್ತವ್ಯಲೋಪ ಎಸಗಿದ್ದು ವಿವರಣೆ ನೀಡಲು ಕಾರಣ ಕೇಳಿ ನೋಟಿಸ್ ನೀಡಿಲಾಗಿದೆ ಎಂದು ತಿಳಿಸಿದ್ದಾರೆ.