ಬಾಗಲಕೋಟೆ: ತಾಲೂಕಿನ ಕದಾಂಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆ, ಜಿಪಂ ಇಂಜಿನಿಯರಿಂಗ್ ವಿಭಾಗದ ವಿವಿಧ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ, ಶಾಲಾ ಕಟ್ಟಡಗಳ ದುಸ್ಥಿತಿ ಪರಿಶೀಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಶಿಕ್ಷಣ ಸಂಯೋಜನಾಧಿಕಾರಿ ಬಿ.ವಿ. ಪಾಟೀಲ, ಸಿಆರ್‌ಪಿ ಡಾ|ಪ್ರಕಾಶ ಖಾಡೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ವಿ.ಎಸ್. ಕೊಡಗಿ, ಎಇ ಸುರೇಶ ಮಿಟ್ಟಲಕೋಡ ಅವರು ಭೇಟಿ ನೀಡಿ, ಬೀಳುವ ಹಂತದಲ್ಲಿರುವ ಎಲ್ಲ ಕೊಠಡಿಗಳನ್ನು ಪರಿಶೀಲಿಸಿದರು. ಇದೇ ವೇಳೆ ಅವರೊಂದಿಗೆ ಆಗಮಿಸಿದ್ದ ಥರ್ಡ್ ಪಾರ್ಟಿ ಇಂಜಿನಿಯರ್ ಭೀಮನಗೌಡ ಪಾಟೀಲ ಅವರಿಂದ ಶಾಲಾ ಕಟ್ಟಡಗಳ ಬಾಳಿಕೆ ಕುರಿತು ಪರಿಶೀಲಿಸಲಾಯಿತು.
ಈ ಶಾಲಾ ಕಟ್ಟಡ 1950ರಲ್ಲಿ ನಿರ್ಮಿಸಿದ್ದು, ಮೂರು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಹೀಗಾಗಿ ಕೊಠಡಿಗಳ ಚಾವಣಿ ಪದರು ಬೀಳುತ್ತಿವೆ. ಈ ಕೊಠಡಿ ನೆಲಸಮಗೊಳಿಸಿ, ಹೊಸದಾಗಿ ಕಟ್ಟಡ ನಿರ್ಮಿಸಬೇಕು ಎಂಬ ಅಭಿಪ್ರಾಯವನ್ನು ಥರ್ಡ್ ಪಾರ್ಟಿ ಇಂಜಿನಿಯರ್ ಭೀಮನಗೌಡ ನೀಡಿದರು.
ಟೆಂಡರ್ ಕರೆಯದ ಲೋಕೋಪಯೋಗಿ ಇಲಾಖೆ: ಈ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 2017-18ನೇ ಸಾಲಿನಲ್ಲಿ 8.71 ಲಕ್ಷ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದು, ಇಲಾಖೆ ಈವರೆಗೆ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳದಿರುವುದು ಇದೇ ವೇಳೆ ಬೆಳಕಿಗೆ ಬಂತು. ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ ಬಿಇಒ ನೀರಲಕೇರಿ, ಒಂದು ಕೊಠಡಿಗೆ ಅನುದಾನ ಮಂಜೂರಾಗಿದ್ದು, ನೀವು ಒಂದು ಕೊಠಡಿ ನಿರ್ಮಿಸಬೇಕು ಎಂದು ತಿಳಿಸಿದರು.
ಸ್ಥಳದಲ್ಲಿದ್ದ ಕದಾಂಪುರ ಪಿಡಿಒ ಯುವರಾಜ ಪರಗಿ, ಶಾಲೆಯ ಸ್ಥಿತಿಗತಿ ಹಾಗೂ ವಿದ್ಯಾರ್ಥಿಗಳ ಕುರಿತು ವಿವರ ನೀಡಿ, ಶಾಲೆಯ ದುರಸ್ತಿಗೆ ಎಸ್ ಡಿಎಸ್‌ಸಿ, ಶಿಕ್ಷಕರ ಮನವಿ ಮೇರೆಗೆ 14ನೇ ಹಣಕಾಸು ಯೋಜನೆಯಡಿ ಒಟ್ಟು 3.20 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ. ಗ್ರಾಪಂನಲ್ಲಿ ಈ ಅನುದಾನ ಬಿಟ್ಟರೆ ಬೇರೆ ಅವಕಾಶವಿಲ್ಲ. ಸಂಬಂಧಿಸಿದ ಇಲಾಖೆಯವರು, ಶಾಲೆ ದುರಸ್ತಿಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿ ಕೈಗೊಂಡರೆ, ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಅನುದಾನ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಅಲ್ಲದೇ ಒಟ್ಟು ಮೂರು ಕೊಠಡಿ ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣದ ಕ್ರಿಯಾ ಯೋಜನೆಯನ್ನು ಜಿಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಲು ತಿಳಿಸಲಾಯಿತು. ಕದಾಂಪುರ ಶಾಲೆಯ ದುಸ್ಥಿತಿ ಕುರಿತು ಉದಯವಾಣಿ, ಜು.3ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.