ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಎಚ್.ವಿಶ್ವನಾಥ್, ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಹೆಚ್ಚು ಹಾನಿಗೀಡಾದ ಚಲ್ಲಹಳ್ಳಿ ಹಾಗೂ ಚಿಕ್ಕಬೀಚನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಹಳ್ಳಿ, ರಾಂಪುರ, ಬೆಂಕಿಪುರ, ಚಲ್ಲಹಳ್ಳಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದರು.
ಬೆಂಕಿಪುರದಲ್ಲಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿ ಮಾತನಾಡಿದ ಶಾಸಕ ಎಚ್.ವಿಶ್ವನಾಥ್, ಈ ಹಿಂದೆ ಪ್ರಕೃತಿ ವಿಕೋಪ ನಿಧಿಯಿಂದ ಕಡಿಮೆ ಪರಿಹಾರ ಸಿಗುತ್ತಿದೆ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾನಿಗೊಳಗಾದಷ್ಟು ಪರಿಹಾರ ನೀಡುವಂತೆ ಸೂಚಿಸಿದ್ದು, ಅದರಂತೆ ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡಬೇಡಿ ಎಂದು ಅಭಯ ನೀಡಿದರು.
ಕಳೆದೆರಡು ತಿಂಗಳಿನಲ್ಲಿ ಗಾವಡಗೆರೆ ಮತ್ತು ಹನಗೋಡು ಹೋಬಳಿಯಲ್ಲಿ ಹಾನಿಗೀಡಾದ ಕುಟುಂಬಗಳಿಗೆ ಈವರೆಗೆ 40 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಬಾಕಿ ಇರುವ ಪ್ರಕರಣಗಳಲ್ಲಿ ಶೀಘ್ರ ಪರಿಹಾರ ವಿತರಿಸಲು, ಸ್ಥಳದಲ್ಲೇ ಹಾಜರಿದ್ದ ತಹಶೀಲ್ದಾರ್ ಬಸವರಾಜು ಅವರಿಗೆ ಸೂಚಿಸಿದರು.
ಎಲ್ಲೆಲ್ಲಿ ಹಾನಿ: ಬಿಳಿಕೆರೆ ಹೋಬಳಿಯ ಬೆಂಕಿಪುರ, ಗೋಹಳ್ಳಿ, ಚಲ್ಲಹಳ್ಳಿ, ಗಾಗೇನಹಳ್ಳಿ, ಹಳ್ಳಿಕೆರೆ, ಹಂದನಹಳ್ಳಿ ಗ್ರಾಮಗಳಲ್ಲಿ ಮಾವು, ಬಾಳೆ, ದ್ವಿದಳ ಧಾನ್ಯ, ತಂಬಾಕು ಸಸಿಮಡಿಗಳು ನಾಶವಾಗಿದೆ.
ಪರಿಶೀಲನೆ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ, ಮಾಜಿ ಸದಸ್ಯ ಕುನ್ನೇಗೌಡ, ತಾಪಂ ಉಪಾಧ್ಯಕ್ಷ ಪ್ರೇಮೇಗೌಡ, ಸದಸ್ಯೆ ಪುಟ್ಟಮ್ಮ, ಗ್ರಾಪಂ.ಉಪಾಧ್ಯಕ್ಷ ಬಿ.ಪಿ.ಸ್ವಾಮಿನಾಯ್ಕ, ಪಿಡಿಒ ಅಶ್ವಿನಿಶಂಕರ್, ಡಿ.ಟಿ.ದೇವರಾಜಪ್ಪ, ಆರ್.ಐ.ವೆಂಕಟಸ್ವಾಮಿ, ವಿ.ಎ. ಶಿವಲಿಂಗಪ್ಪ ಇತರರಿದ್ದರು.¤ತರರು ವೀಕ್ಷಿಸಿದರು.