ಮಂಗಳೂರು: ಸಹಾಯಕ ಆಯುಕ್ತರು, ತಹಶೀಲ್ದಾರರು, ಕಾರ್ಯನಿರ್ವಾಹಕ ಅಭಿಯಂತರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಡಿಭಾಗದ ಗ್ರಾಮಗಳಿಗೆ ತಿಂಗಳಿಗೆ ಒಮ್ಮೆಯಾದರೂ ಕಡ್ಡಾಯವಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಅರಿಯಬೇಕು. ಗ್ರಾಮ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿಭಾಗದ ಗ್ರಾಮಗಳಲ್ಲಿ ರಸ್ತೆಗಳು, ಶಾಲೆಗಳು, ಅಂಗನವಾಡಿಗಳು, ಆರೋಗ್ಯ ಕೇಂದ್ರಗಳು, ಪಶುವೈದ್ಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ನೈಜ ಚಿತ್ರಣವನ್ನು ಜಿಲ್ಲಾಧಿ ಕಾರಿಗಳಿಗೆ ವರದಿ ಮಾಡಬೇಕು ಎಂದರು.
ಪಕ್ಕದ ಕಾಸರಗೋಡಿನಲ್ಲಿ ಆರ್‌ಟಿಸಿ, ಜಾತಿ ಪ್ರಮಾಣ ಪತ್ರ ಸೇರಿದಂತೆ ಕನ್ನಡಿಗರಿಗೆ ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಕನ್ನಡದಲ್ಲಿಯೇ ಮುದ್ರಿಸಿ, ತಲುಪಿಸುವ ವ್ಯವಸ್ಥೆ ಮಾಡಬೇಕು, ಗಡಿಭಾಗದಲ್ಲಿ ಸಾಂಸ್ಕೃತಿಕ ಭವನಗಳ ಅಗತ್ಯವಿದ್ದರೆ ಸಮೀಕ್ಷೆ ಮಾಡಿ ವರದಿ ನೀಡಬೇಕು, ಮಹಿಳಾ ಸಶಕ್ತೀಕರಣಕ್ಕೆ ಯೋಜನೆಗಳಿದ್ದರೆ ಅವುಗಳ ಬಗ್ಗೆ ಹಾಗೂ ಯುವಕ ಮತ್ತು ಯುವತಿಯರು ಕೌಶಲಾಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳಿದ್ದರೆ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತೀ ಸ್ಮಾರ್ಟ್ ಕ್ಲಾಸ್‌ಗಳಿಗಾಗಿ ಒಂದು ಲಕ್ಷ ರೂ. ಅನುದಾನ ನೀಡಲಾಗುತ್ತಿದೆ, ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳ ಸ್ಮಾರ್ಟ್‌ಕ್ಲಾಸ್‌ಗಳಿಗೆ ಅನುದಾನ ನೀಡಲು ಸಿದ್ಧವಿದ್ದು, 4-5 ಶಾಲೆಗಳ ಪಟ್ಟಿ ನೀಡುವಂತೆ ತಿಳಿಸಿದರು.
ಇದನ್ನೂ ಓದಿ:ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಸೆರೆ
ಗಡಿಭಾಗದ ಗ್ರಾಮೀಣ ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್, ಗ್ರಂಥಾಲಯ ಸೇರಿದಂತೆ ಇತರ ಅಗತ್ಯವಿರುವ ಸೌಕರ್ಯ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಡಿಪಿಐ ಮಲ್ಲೇಸ್ವಾಮಿ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಎಡಿಸಿ ಮಾಣಿಕ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಎಸಿ ಮದನಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.