Advertisement

ಒಳಚರಂಡಿ ಸಮಸ್ಯೆಯ ಪ್ರದೇಶಗಳಿಗೆ ನಳಿನ್‌ ಭೇಟಿ

10:01 AM Jan 12, 2018 | Team Udayavani |

ಮಹಾನಗರ: ಪಾಲಿಕೆ ವ್ಯಾಪ್ತಿಯಲ್ಲಿ ಕುಡ್ಸೆಂಪ್‌ ವತಿಯಿಂದ ಈ ಹಿಂದೆ 218 ಕೋಟಿ ರೂ.ವೆಚ್ಚದಲ್ಲಿ ನಡೆಸಲಾದ ಒಳಚರಂಡಿ ಕಾಮಗಾರಿಯಲ್ಲಿ ಅವ್ಯವಹಾರ ಆಗಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ತನಿಖೆ ಆಗಬೇಕಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ. ಪಾಲಿಕೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಕುರಿತ ಅವ್ಯವಸ್ಥೆ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Advertisement

ಕುಡ್ಸೆಂಪ್‌ ಒಳಚರಂಡಿ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದು ಈ ಹಿಂದೆ ಆಗ್ರಹಿಸಿದ್ದೆನು. ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ರೋಶನ್‌ ಬೇಗ್‌ ಅವರು ಕೂಡ ಇದೇ ಹೇಳಿಕೆ ನೀಡಿದ್ದಾರೆ. ಆದ್ದರಿಂದ ನಮ್ಮ ಆರೋಪದಲ್ಲಿ ಸತ್ಯವಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕುಡ್ಸೆಂಪ್‌ ಕಾಮಗಾರಿಗಾಗಿ ಮಾಡಲಾದ 218 ಕೋಟಿ ರೂ. ಸಾಲದ ಮರುಪಾವತಿಯೂ ಆಗಿಲ್ಲ. ಈಗ ಅದು ಬಡ್ಡಿ ಸಹಿತ 350 ಕೋಟಿ ರೂ.ಗೆ ಏರಿಕೆಯಾಗಿದೆ. ಸಾರ್ವಜನಿಕರ ಮೇಲೆ ಇದು ಅನಗತ್ಯ ಹೊರೆ ಬೀಳಲಿದೆ. ನಮ್ಮ ಸರಕಾರ ಇದ್ದಾಗ 200 ಕೋಟಿ ರೂ. ಅನುದಾನವನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಾಂಕ್ರಿಟ್‌ ರಸ್ತೆಗಳ ನಿರ್ಮಾಣಕ್ಕೆ ನೀಡಲಾಗಿತ್ತು. ಆದರೆ ಕಾಂಗ್ರೆಸ್‌ ಸರಕಾರ ಇದುವರೆಗೆ ಕೇವಲ 70 ಕೋಟಿ ರೂ.
ಮಾತ್ರ ನೀಡಿದೆ ಎಂದರು.

ಬಿಜೆಪಿ ಮುಖಂಡರಾದ ಎನ್‌. ಯೋಗೀಶ್‌ ಭಟ್‌, ಮೋನಪ್ಪ ಭಂಡಾರಿ, ವೇದವ್ಯಾಸ ಕಾಮತ್‌, ಗಣೇಶ್‌ ಹೊಸಬೆಟ್ಟು, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ವಿಜಯ ಕುಮಾರ್‌ ಶೆಟ್ಟಿ, ರಾಜೇಂದ್ರ ಕುಮಾರ್‌, ರೂಪಾ ಡಿ. ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಬಹಳಷ್ಟು ಸಮಸ್ಯೆ
ಮಂಗಳೂರು ವ್ಯಾಪ್ತಿಯ ಸುರತ್ಕಲ್‌, ಬಜಾಲ್‌, ಪಚ್ಚನಾಡಿ ಹಾಗೂ ಮುಲ್ಲಕಾಡಿನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳಲ್ಲಿ ಬಹಳಷ್ಟು ಸಮಸ್ಯೆ ಕಾಣುತ್ತಿದೆ. ಬಹುತೇಕ ಕಾಮಗಾರಿ ಮುಗಿಯದೆ 2014ರಲ್ಲಿ ಮಹಾನಗರ ಪಾಲಿಕೆ ಕುಡ್ಸೆಂಪ್‌ ಕಾಮಗಾರಿಯನ್ನು ಹಸ್ತಾಂತರ ಪಡೆದುಕೊಂಡಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಆಡಳಿತ ಕಾಮಗಾರಿ ಪೂರ್ಣಗೊಂಡ ಬಗ್ಗೆ ಯಾವುದೇ ಖಾತರಿ ಮಾಡಿಕೊಳ್ಳದೆ ಏಕಾಏಕಿ ಅದನ್ನು ಹಸ್ತಾಂತರ ಪಡೆದುಕೊಂಡಿರುವುದರಿಂದ ಈ ರೀತಿ ಸಮಸ್ಯೆ ಎದುರಾಗಿದೆ.
-ನಳಿನ್‌ ಕುಮಾರ್‌ ಕಟೀಲು , ಸಂಸದರು

Advertisement
Advertisement

Udayavani is now on Telegram. Click here to join our channel and stay updated with the latest news.

Next