Advertisement

ಟ್ಯಾಂಕರ್‌ನೊಂದಿಗೆ ನಗರಸಭೆ ಸದಸ್ಯರ ಮನೆ ಮನೆ ಭೇಟಿ!

12:30 AM May 07, 2019 | Team Udayavani |

ಉಡುಪಿ: ಉಡುಪಿ ನಗರಸಭೆಯ ಬೈಲೂರು ವಾರ್ಡ್‌ನಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ನಳ್ಳಿಯಲ್ಲಿ ನೀರಿಲ್ಲ. ಹೋದ ತಿಂಗಳಿನವರೆಗೆ ನೀರಿದ್ದ ಕೆಲವು ಬಾವಿಗಳು ಕೂಡ ಬತ್ತಿ ಹೋಗಿವೆ. ಇನ್ನು ಕೆಲವು ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ ಸದ್ಯ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿದೆ. ನಗರಸಭೆಯಿಂದ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿಲ್ಲ. ಕಳೆದೆರಡು ದಿನಗಳಿಂದ ಸ್ಥಳೀಯ ನಗರಸಭೆಯ ಸದಸ್ಯರೇ ತಮ್ಮ ಮುತುವರ್ಜಿಯಲ್ಲಿ ಟ್ಯಾಂಕರ್‌ ನೀರು ತರಿಸಿ ಮನೆ ಮನೆಗೆ ತೆರಳಿ ವಿತರಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಟ್ಯಾಂಕರ್‌ ಹೋಗುವ ವೇಳೆ ಪಕ್ಕದ ಪ್ರದೇಶದವರು ನಮ್ಮಲ್ಲಿಗೂ ನೀರು ಕೊಡಿ ಎಂದು ಅಲವತ್ತುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

Advertisement

ಪ್ರತಿ ಮನೆಗೆ 500 ಲೀ.
ಟ್ಯಾಂಕರ್‌ ಮೂಲಕ ಪ್ರತಿ ಮನೆಗೆ 500 ಲೀ.ನಂತೆ ನೀರು ಒದಗಿಸುವ ಕೆಲಸವನ್ನು ನಗರಸಭಾ ಸದಸ್ಯರು ರವಿವಾರ ಆರಂಭಿಸಿದ್ದು ಮೊದಲ ದಿನ 30ಕ್ಕೂ ಅಧಿಕ ಮನೆಗಳಿಗೆ ವಿತರಿಸಲಾಗಿದೆ. ಜನರು ನೇರವಾಗಿ ನಗರಸಭಾ ಸದಸ್ಯರಿಗೆ ಕರೆ ಮಾಡುತ್ತಿದ್ದಾರೆ. ಆದರೆ ನಗರಸಭಾ ಸದಸ್ಯರು ಅಧಿಕಾರಿಗಳಿಗೆ ಕರೆ ಮಾಡಿದರೆ ನೋ ರಿಪ್ಲೆ„. ಇದರಿಂದಾಗಿ ನಗರಸಭಾ ಸದಸ್ಯರು ಕೂಡ ಅಸಹಾಯಕರಾಗಿದ್ದಾರೆ !.

ಎತ್ತರದ ಮನೆಗಳಿಗೆ ನೀರಿಲ್ಲ
ಇಲ್ಲಿ 4-5 ದಿನಕ್ಕೊಮ್ಮೆ ನೀರು ಬರುತ್ತದೆ. ಆದರೆ ನಾವು ಇರುವ ಪ್ರದೇಶ ಎತ್ತರದಲ್ಲಿದೆ. ಇಲ್ಲಿಗೆ ನೀರು ಬಾರದೆ ಒಂದು ವಾರವಾಯಿತು. ನಾವು ಇಲ್ಲಿಯೇ ಮನೆಯೊಂದರ ಬಾವಿಯಿಂದ ದಿನಕ್ಕೆ 4 ಕೊಡಪಾನ ನೀರು ತರುತ್ತಿದ್ದೇವೆ. ಅದಕ್ಕಿಂತ ಹೆಚ್ಚು ಸಿಗುತ್ತಿಲ್ಲ. ನಮ್ಮ ಕಡೆ ಇದುವರೆಗೆ ಟ್ಯಾಂಕರ್‌ ನೀರು ಬಂದಿಲ್ಲ ಎಂದು ಕರ್ಕಡ ಕಾಂಪೌಂಡ್‌ 2ನೇ ಅಡ್ಡರಸ್ತೆಯ ನಿವಾಸಿ ಅಬ್ದುಲ್‌ ರೆಹಮಾನ್‌ ಹೇಳಿದರು. ಇದೇ ಕಾಲನಿಯ ಭಾಸ್ಕರ ಅವರು “ನಮಗೆ ಎರಡು ಮೂರು ದಿನಗಳಿಗೊಮ್ಮೆ ನೀರು ಬರುತ್ತದೆ. ಆದರೆ ಅದರ ಪ್ರಮಾಣ ತುಂಬಾ ಕಡಿಮೆ ಇದೆ. ನೀರಿಗಾಗಿ ನಮಗಿಂತ ತುಂಬಾ ಕಷ್ಟಪಡುತ್ತಿರುವ ಅನೇಕ ಮನೆಗಳು ಈ ಏರಿಯಾದಲ್ಲಿವೆ. ಕೆಲವು ಮನೆಯವರು ಹಣ ಕೊಟ್ಟು ಟ್ಯಾಂಕರ್‌ ನೀರು ತರಿಸುತ್ತಿದ್ದಾರೆ’ ಎಂದು ಹೇಳಿದರು.

ನೀರಿಲ್ಲದ ಗೋಳು
ಹೋದ ವರ್ಷ ಮಳೆ ಬಂದಿತ್ತು. ಅದಕ್ಕಿಂತ ಹಿಂದಿನ ವರ್ಷ ಟ್ಯಾಂಕರ್‌ ನೀರು ಕೊಟ್ಟಿದ್ದರು. ಈಗ ನೀರಿಲ್ಲ. ನಾವು ಬಾಡಿಗೆಗೆ ಇದ್ದೇವೆ. ಇಲ್ಲಿ ಒಂದು ಬಾವಿ ಇದೆ. ಅದರಲ್ಲಿಯೂ ನೀರಿಲ್ಲ. ಅದರ ಹೂಳು ತೆಗೆದರೆ ನೀರು ಸಿಗುತ್ತಿತ್ತು. ಶಾಸಕರಿಗಾದರೂ ಪೋನ್‌ ಮಾಡೋಣವೆಂದರೆ ಅವರ ಪೋನ್‌ ಸಿಗುತ್ತಿಲ್ಲ ಎಂದು ಶ್ರೀನಿವಾಸ ದೇವಸ್ಥಾನ ಸಮೀಪದ ವೀಣಾ ಉಪಾಧ್ಯ ಮತ್ತು ರೂಪಾ ಅಲವತ್ತುಕೊಂಡರು.

ಟ್ಯಾಂಕರ್‌ ನೀರೇ ಗತಿ
ಬೈಲೂರು ಬಿಎಎಂ ಶಾಲೆ ಸಮೀಪದ 6, 7 ಮತ್ತು 8ನೇ ಕ್ರಾಸ್‌ನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಇಲ್ಲಿ ಕೆಲವು ಮನೆಗಳಲ್ಲಿ ಬಾವಿ ಇದೆ. ಇನ್ನು ಕೆಲವು ಮನೆಗಳು ಟ್ಯಾಂಕರ್‌ನಿಂದಲೇ ನೀರು ತರಿಸುತ್ತಿವೆ. “ನಮ್ಮ ಮನೆಯಲ್ಲಿ ತೋಡಿದ ಬಾವಿಯಲ್ಲಿ ಪಾದೆಕಲ್ಲು ಬಂತು. ಹಾಗಾಗಿ ಭಾರೀ ತೊಂದರೆಯಾಗಿದೆ. ಹಣ ಕೊಟ್ಟು ಟ್ಯಾಂಕರ್‌ ನೀರು ತರಿಸುತ್ತಿದ್ದೇವೆ. ಕಳೆದ ಮಾರ್ಚ್‌ನಿಂದ ನಮಗೆ ನೀರೇ ಬಂದಿಲ್ಲ’ ಎಂದು 7ನೇ ಕ್ರಾಸ್‌ನ ಶೋಭಿತಾ ಮಾಬೆನ್‌ ಅಸಹಾಯಕತೆ ವ್ಯಕ್ತಪಡಿಸಿದರು.

Advertisement

ಸ್ವಂತ ದುಡ್ಡಿನಲ್ಲೇ ಟ್ಯಾಂಕರ್‌ ನೀರು
ಜನ ನಮಗೆ ಕರೆ ಮಾಡುತ್ತಿದ್ದಾರೆ. ನಮ್ಮ ಕರೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈಗ ನಾವು ಬೇರೆ ಉಪಾಯ ಕಾಣದೆ ನಮ್ಮ ದುಡ್ಡಿನಿಂದಲೇ ಟ್ಯಾಂಕರ್‌ ನೀರು ಖರೀದಿಸಿ ಜನರಿಗೆ ನೀಡುತ್ತಿದ್ದೇವೆ. ಕಳೆದ ಬಾರಿ ನಗರಸಭೆ ವ್ಯಾಪ್ತಿಯ ಸುಮಾರು 23 ಬಾವಿಗಳನ್ನು, 8 ಕೊಳವೆಬಾವಿಗಳನ್ನು ಶುದ್ಧೀ ಕರಿಸಿ ಅವುಗಳಿಂದ ನೀರು ಪೂರೈಸಲಾಗಿತ್ತು. ಆದರೆ ಈ ಬಾರಿ ಇದಕ್ಕೆ ಯಾವ ಕ್ರಮ ವನ್ನೂ ತೆಗೆದುಕೊಂಡಿಲ್ಲ. ಜಿಲ್ಲಾಧಿಕಾರಿ ಯಾಗಲಿ, ಪೌರಾಯುಕ್ತರಾಗಲಿ ಈ ಬಗ್ಗೆ ಚಕಾರವೆತ್ತುತ್ತಿಲ್ಲ.
– ರಮೇಶ್‌ ಕಾಂಚನ್‌, ಸದಸ್ಯರು, ಬೈಲೂರು ವಾರ್ಡ್‌

ನೀರು ಬಾರದೆ 10 ದಿನವಾಯಿತು
ನಮ್ಮ ಮನೆ ಪರಿಸರಕ್ಕೆ ಸರಿಯಾಗಿ ನೀರು ಬಾರದೆ 10 ದಿನಗಳ ಮೇಲಾಯಿತು. ಇಂದು ಪಕ್ಕದ 2-3 ಮನೆಗಳಿಗೆ ಬಂದಿದೆ. ಆ ಮನೆಗಳು ತಗ್ಗು ಪ್ರದೇಶದಲ್ಲಿವೆ. ನಮಗೆ ಒಂದು ಕೊಡ ನೀರು ಬಂದಿದೆ. ನಾನು ಟ್ಯಾಂಕರ್‌ನಲ್ಲಿ 2,000 ಲೀ. ತರಿಸಿದ್ದೇನೆ. 600 ರೂ. ನೀಡಿದ್ದೇನೆ. ನಾವು ಪ್ರತಿದಿನ ಮುನ್ಸಿಪಾಲಿಟಿಗೆ ಕಾಲ್‌ ಮಾಡುತ್ತಿದ್ದೇನೆ. ಆದರೆ ಟ್ಯಾಂಕರ್‌ ನೀಡಲು ಪ್ರೊವಿಷನ್‌ ಇಲ್ಲ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ.
– ಜಿ.ಎನ್‌.ಖಾರ್ವಿ, ಚಿಟಾ³ಡಿ ಶ್ರೀನಿವಾಸ ದೇವಸ್ಥಾನ ರಸ್ತೆ
ಪಕ್ಕದ ನಿವಾಸಿ

ನಾವೇ ಮಾಡಿಕೊಂಡ ಸಮಸ್ಯೆ
ಅಂತರ್ಜಲವೇ ಬತ್ತಿ ಹೋಗಿದೆ. ನೀರು ಕೊಡುವವರು ಕೊಡುವುದಾದರೂ ಎಲ್ಲಿಂದ? ನಾವು ಮನಬಂದಂತೆ ನೀರು ಬಳಕೆ ಮಾಡಿದ ಪರಿಣಾಮ ಇದು. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ನಮಗೆ ಸದ್ಯ ಎರಡು ಬಾವಿಗಳಿವೆ. ಪ್ರತಿ ವರ್ಷ ಅದನ್ನು ಸ್ವತ್ಛಗೊಳಿಸುತ್ತೇವೆ. ಬೇಕಾದಷ್ಟು ಶುದ್ಧ ನೀರು ಸಿಗುತ್ತಿದೆ. ಕಾಂಕ್ರೀಟ್‌, ಟೈಲ್ಸ್‌ ಎಂದೆಲ್ಲಾ ಹಾಕಿ ಮಳೆನೀರು ನೆಲದಡಿ ಇಂಗದಂತೆ ಮಾಡಿದ್ದೇವೆ. ಮಳೆನೀರು ಕೊಯ್ಲು, ನೀರಿಂಗಿಸುವುದಕ್ಕೆ ಗಮನ ನೀಡುವ ಅನಿವಾರ್ಯತೆ ಉಂಟಾಗಿದೆ.
-ಪ್ರಸನ್ನಿ, ವಾರ್ಡನ್‌, ಆಶಾ ನಿಲಯ, ಬೈಲೂರು

ಜನರ ಬೇಡಿಕೆಗಳು
– ಬಾವಿಗಳನ್ನು ಸರಿಪಡಿಸಿ
– ಟ್ಯಾಂಕರ್‌ನಲ್ಲಿಯಾದರೂ ನೀರು ಕೊಡಿ
– ಎತ್ತರದ ಪ್ರದೇಶಕ್ಕೂ ನೀರು ಬರುವಂತೆ ನೀರು ಪೂರೈಕೆ ಮಾಡಿ
– ಮುಂದಿನ ವರ್ಷ ಇಂಥ ಸಮಸ್ಯೆ ಎದುರಾಗದಂತೆ ಈಗಲೇ ಕ್ರಮ ಕೈಗೊಳ್ಳಿ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next