ಹೆಬ್ರಿ: ಈಗಾಗಲೇ ಹೆಬ್ರಿ ತಾಲೂಕಾಗಿ ಘೋಷಣೆಯಾಗಿ ತಾಲೂಕಿನ ಗ್ರಾ. ಪಂ. ಆದ ಹೆಬ್ರಿಯಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ನಿಗಾ ವಹಿಸಿ ಪ್ಲಾನಿಂಗ್ ಮೂಲಕ ಯೋಜನೆ ರೂಪಿಸಿದಲ್ಲಿ ಆದಾಯ ಹೆಚ್ಚಿಸಲು ಸಾಧ್ಯ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಹೆಬ್ರಿ ಗ್ರಾ. ಪಂ.ಗೆ ಭೇಟಿ ನೀಡಿ ಬಳಿಕ ನಡೆದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಮಾತನಾಡಿದರು.
ಮುತುವರ್ಜಿ ವಹಿಸಿ
ನೀರಿನ ಸರಬರಾಜಿನಿಂದ 5 ಲ.ರೂ. ಆದಾಯ ಬರುತ್ತಿದೆ. ಆದರೆ ವಿದ್ಯುತ್ ಬಿಲ್ ಸೇರಿದಂತೆ 15ಲ.ರೂ. ಖರ್ಚು ಆಗುತ್ತಿದೆ ಎಂಬ ಮಾಹಿತಿಗೆ ಉತ್ತರಿಸಿದ ಅವರು ತಾಲೂಕು ಕೇಂದ್ರದಲ್ಲಿರುವ ಪಂಚಾಯತ್‌ನ ಅದಾಯ ಹೆಚ್ಚುಸುವಲ್ಲಿ ಸದಸ್ಯರೆಲ್ಲರೂ ಮುತುವರ್ಜಿ ವಹಿಸ ಬೇಕು ಎಂದರು. ಉದ್ಯೋಗ ಖಾತರಿ, ತಾಜ್ಯ ವಿಲೇವಾರಿ, ಪಾರ್ಕಿಂಗ್ ವ್ಯವಸ್ಥೆ, 94ಸಿ ಮೊದಲಾದ ವಿಷಯದ ಕುರಿತು ಚರ್ಚಿಸಿದರು.
ಎಸ್‌ಎಲ್‌ಆರ್‌ಎಂನ ಸಹಯೋಗದಲ್ಲಿ ಹೆಬ್ರಿಯ ಸಮಾಜದ ಮಂದಿರದಲ್ಲಿ ನಡೆಯುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಬ್ರಿ ಗ್ರಾ.ಪಂ.ಗೆ ಹೊರೆ ಯಾಗಿದೆ ಎಂಬ ಪಂಚಾಯತ್ ಪ್ರಶ್ನೆಗೆ ಉತ್ತರಿಸಿದ ಎಸ್‌ಎಲ್‌ಆರ್‌ಎಂ ಅಧಿಕಾರಿ ತ್ಯಾಜ್ಯವಿಲೇವಾರಿ ಘಟಕಕ್ಕೆ 20ಲ.ರೂ. ಅನುದಾನ ಬರುತ್ತದೆ. ಆದರೆ ಅದು ಹೆಬ್ರಿಗೆ ಬಂದಿಲ್ಲ. ಅಲ್ಲದೆ ನಿಟ್ಟೆ ಮೊದಲಾದೆಡೆ ಕೇವಲ 5ಜನ ಸಿಬಂದಿ ಇದ್ದಾರೆ. ಇಲ್ಲಿ 15 ಜನ ಸಿಬಂದಿಗಳು ಇರುವುದರಿಂದ ಪಂಚಾಯತ್‌ಗೆ ಹೊರೆ ಯಾಗಿದೆ ಎಂದರು.
ಕಾರ್ಕಳ ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾರ್ಯನಿರ್ವಹಣಾಧಿಕಾರಿ ಡಾ| ಹರ್ಷ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಹೆಬ್ರಿ ಪಂಚಾಯತ್ ಪಿಡಿಒ ವಿಜಯ ಸ್ವಾಗತಿಸಿ, ಪ್ರಸಾದ್ ಶೆಟ್ಟಿ ನಿರೂಪಿಸಿದರು.